

ನವೀನ್ ಬಿ.ಎಂ. ಬೆಂಗಳೂರು ಕರ್ನಾಟಕದ ಜನತೆಗೆ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿರುವ ರಾಜ್ಯ ಸರ್ಕಾರ ಇದೀಗ ಭೂ ಗ್ಯಾರಂಟಿ ಭಾಗವಾಗಿ ಸೈನಿಕ್ ಸಮ್ಮಾನ್ ಹಾಗೂ ನಿವೇಶನ ಯೋಜನೆ ಜಾರಿಗೆ ಮುಂದಾಗಿದೆ. ದೇಶದ ಗಡಿ ಕಾಯುವ ಸೈನಿಕರು, ಮಾಜಿ ಯೋಧರು ಹಾಗೂ ಅರ್ಹರಿಗೆ ಕೃಷಿ ಜಮೀನಿನ ಬದಲು ಅಂದಾಜು 5 ಲಕ್ಷ ನಿವೇಶನಗಳನ್ನು ವಿತರಿಸುವ ಗುರಿ ಹೊಂದಿದೆ.
ಈ ಸಂಬಂಧ ಹಕ್ಕುಪತ್ರ ವಿತರಣೆ ಒಳಗೊಂಡಂತೆ ಯೋಜನೆಯ ಸಮರ್ಪಕ ಅನುಷ್ಠಾನಗೊಳಿಸುವುದಕ್ಕಾಗಿ ರಾಜ್ಯ ಮಟ್ಟದ ಉನ್ನತ ಸಮಿತಿ ಹಾಗೂ ಕಾರ್ಯಕಾರಿ ಸಮಿತಿಗಳನ್ನು ರಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಉನ್ನತ ಸಮಿತಿಗೆ ಕಂದಾಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ರಾಜ್ಯ ಕಾರ್ಯಕಾರಿ ಸಮಿತಿಗೆ ಕಂದಾಯ ಆಯುಕ್ತರು ಅಧ್ಯಕ್ಷರಾಗಿದ್ದು, 15 ದಿನಕ್ಕೊಮ್ಮೆ ಸಭೆ ಸೇರಿ ಮೇಲ್ವಿಚಾರಣೆ ಜತೆಗೆ ಇಲಾಖೆಗಳ ಮಧ್ಯೆ ಸಮನ್ವಯ ಮೂಡಿಸುವ ಕೆಲಸ ಮಾಡಲಿದೆ.
ಆರ್ಥಿಕವಾಗಿ ಹಿಂದುಳಿದ ಮತ್ತು ದುರ್ಬಲ ವರ್ಗಗಳ ಆರ್ಥಿಕ ಭದ್ರತೆ ಸುಧಾರಿಸುವ ಹಾಗೂ ಮಾಜಿ ಸೈನಿಕರ ಸೇವೆಯನ್ನು ಗೌರವಿಸುವ ಉದ್ದೇಶದಿಂದ ಭೂಮಿಯ ಲಭ್ಯತೆ, ವಸತಿ ಸ್ವರೂಪ, ಬಡಾವಣೆ ಅಗತ್ಯತೆ ಹಾಗೂ ಅನ್ವಯವಾಗುವ ಉಪಬಂಧಗಳಿಗೆ ಒಳಪಟ್ಟು ವಸತಿ ನಿವೇಶನಗಳನ್ನು ವಿತರಿಸುವ ನಿರ್ಧಾರವನ್ನು ಅನುಮೋದಿಸಲಾಗಿದೆ.
ಕರ್ನಾಟಕ ಭೂ ಕಂದಾಯ ಅಧಿನಿಯಮ 1964ರ ಪ್ರಕರಣ 71, ಭೂ ಕಂದಾಯ ನಿಯಮಗಳು 1966ರ ನಿಯಮ 97(4) ಇತರ ನಿಯಮಗಳಿಗೆ ಅನ್ವಯವಾಗುವ ಉಪಬಂಧಗಳಿಗೆ ಅನುಗುಣ ನಿವೇಶನ ಯೋಜನೆಯನ್ನು ಸರ್ಕಾರ ಅನುಷ್ಠಾನಗೊಳಿಸುವ ತೀರ್ವನಕ್ಕೆ ಬಂದಿದೆ. ಅದೇ ರೀತಿ ಕರ್ನಾಟಕ ಭೂ ಮಂಜೂರಾತಿ ನಿಯಮಗಳು, 1969ರ ನಿಯಮ 8(8)ರ ಪರಂತು - 3 ಮಾಜಿ ಸೈನಿಕರಿಗೆ ನಿವೇಶನಗಳ ಹಂಚಿಕೆಯಡಿ ಸೈನಿಕ್ ಸಮ್ಮಾನ್ ಯೋಜನೆ ಪರಿಭಾಷಿಸಲಾಗಿದೆ. ಈ ನಿಯಮವು ಮಾಜಿ ಸೈನಿಕರಿಗೆ ಕೃಷಿ ಭೂಮಿ ಬದಲಾಗಿ ವಸತಿ ನಿವೇಶನಗಳ ಹಂಚಿಕೆಗೆ ಅವಕಾಶ ಕಲ್ಪಿಸುತ್ತದೆ. ಮೊದಲ ಹಂತದಲ್ಲಿ 5 ಲಕ್ಷ ಹಕ್ಕುಪತ್ರ ವಿತರಿಸಲು ಉದ್ದೇಶಿಸಿದ ಕಾರಣ ಯೋಜನೆಯ ಅನುಷ್ಠಾನಕ್ಕೆ ರಾಜ್ಯಮಟ್ಟದ ಉನ್ನತ ಸಮಿತಿ ಹಾಗೂ ಕಾರ್ಯಕಾರಿ ಸಮಿತಿ ರಚಿಸಿ ಅವುಗಳ ಕಾರ್ಯವಿಧಾನದ ಬಗ್ಗೆ ಮಾಹಿತಿ ನೀಡಿದೆ.
ಈ ಹಿಂದೆ ಮಾಜಿ ಸೈನಿಕರಿಗೆ ಕೃಷಿ ಜಮೀನುಗಳನ್ನು ಮಂಜೂರು ಮಾಡಲಾಗುತ್ತಿತ್ತು. ಬದಲಾದ ಕಾಲಘಟ್ಟದಲ್ಲಿ ಕೃಷಿ ಭೂಮಿಯ ಲಭ್ಯತೆ ಕಡಿಮೆ ಆಗುತ್ತಿರುವ ಕಾರಣ ವಸತಿ ನಿವೇಶನ ನೀಡುವ ಉದ್ದೇಶದಿಂದ ಸೈನಿಕ್ ಸಮ್ಮಾನ್ ಪರಿಚಯಿಸಲಾಗಿದೆ.
ನಿವೇಶನ ಯೋಜನೆಯಡಿ ಸರ್ಕಾರಿ ಆದೇಶಗಳ ತಿದ್ದುಪಡಿ
ಉನ್ನತ ಸಮಿತಿಗೆ ಮಾರ್ಗಸೂಚಿ, ಪ್ರಸ್ತಾವನೆಗಳ ಶಿಫಾರಸು
ಅರ್ಜಿದಾರರ ಸಂಖ್ಯೆಯಂತೆ ಸರ್ಕಾರಿ ಭೂಮಿ ಗುರುತಿಸುವಿಕೆ
ಭೂಮಿ ಗುರುತಿಸಿದ ಬಳಿಕ ಪರಿಶೀಲನೆ, ಕಾಯ್ದಿರಿಸುವಿಕೆ
ಫಲಾನುಭವಿ ಆಯ್ಕೆ, ಪರಿಶೀಲನೆ, ನಿವೇಶನ ಹಂಚಿಕೆ ಮೇಲ್ವಿಚಾರಣೆ
ಬಡಾವಣೆ ರಚನೆ, ಮೂಲಸೌಕರ್ಯ, ನಕ್ಷೆ ತಯಾರಿಕೆ, ಅನುಮೋದನೆ
ಸಂಪನ್ಮೂಲ ಸಂಯೋಜನೆ, ಅಂದಾಜು ವೆಚ್ಚದ ಮಾಹಿತಿ ಸಿದ್ಧಪಡಿಸುವುದು
ಆ ಬಳಿಕ ಉನ್ನತ ಮಟ್ಟದ ಸಮಿತಿಗೆ ಶಿಫಾರಸು ಮಾಡಬೇಕು
ಹಕ್ಕುಪತ್ರ ನೋಂದಣಿ, ಇ-ಆಸ್ತಿ/ಇ-ಸ್ವತ್ತು ದಾಖಲಾತಿಯ ಮೇಲುಸ್ತುವಾರಿ
ಕಾಲಮಿತಿಯೊಳಗೆ ಡಿಜಿಟಲ್ ತಂತ್ರಜ್ಞಾನ ಆಧರಿಸಿ ಯೋಜನೆ ಅನುಷ್ಠಾನ
ವಸತಿ, ನಗರಾಭಿವೃದ್ಧಿ ಸೇರಿ ಅಂತರ ಇಲಾಖೆಗಳ ನಡುವೆ ಸಮನ್ವಯ
ವೀರ ಯೋಧರಿಗೆ ರಾಜ್ಯ ಸರ್ಕಾರದಿಂದ ಸಮ್ಮಾನ, ನಿವೃತ್ತರಿಗೂ ನಿವೇಶನ ನೀಡುವ ಮಹತ್ವದ ಸಂಕಲ್ಪ
ಆರ್ಥಿಕ ಭದ್ರತೆ ಸುಧಾರಣೆ, ಸೈನಿಕರ ಸೇವೆ ಸ್ಮರಣೆ, ಸೈನಿಕ್ ಸಮ್ಮಾನ್, ನಿವೇಶನ ಯೋಜನೆ ಆಕರ್ಷಣೆ
ಮೊದಲ ಹಂತದಲ್ಲಿ 5 ಲಕ್ಷ ಹಕ್ಕು ಪತ್ರಗಳ ವಿತರಣೆ
ರಾಜ್ಯ ಮಟ್ಟದ ಹಾಗೂ ಕಾರ್ಯಕಾರಿ ಸಮಿತಿ ರಚನೆ, ಉನ್ನತ ಸಮಿತಿಗೆ ಕಂದಾಯ ಆಯುಕ್ತರೇ ಅಧ್ಯಕ್ಷ
ರಾಜ್ಯಮಟ್ಟದ ಉನ್ನತ ಸಮಿತಿಗೆ ಅಪಾರ ಹೊಣೆ
ಪ್ರತಿ ತಿಂಗಳು ಮಹತ್ವದ ಸಭೆಗಳ ಆಯೋಜನೆ
ಯೋಜನೆ ಅನುಷ್ಠಾನಕ್ಕೆ ಮಾರ್ಗಸೂಚಿಗಳ ರಚನೆ
ಇಲಾಖೆಗಳ ನಡುವೆ ಸಮನ್ವಯ ಸಾಧಿಸುವುದು
ಯೋಜನೆಯ ಮೇಲ್ವಿಚಾರಣೆ ವಹಿಸಿಕೊಳ್ಳುವುದು, ಪ್ರಗತಿ ಪರಿಶೀಲಿಸಿ ಕಾರ್ಯಕಾರಿ ಸಮಿತಿಗೆ ಸಲಹೆ