ಮದ್ಯದಂಗಡಿ ಎಂಆರ್‌ಪಿ ಉಲ್ಲಂಘನೆ ಕುರಿತು 800 ದೂರು ಸ್ವೀಕಾರ-MRP violation

 ಎಂಆರ್‌ಪಿ ಉಲ್ಲಂಘನೆ
ಎಂಆರ್‌ಪಿ ಉಲ್ಲಂಘನೆ
Published on
ಬೆಂಗಳೂರು: ರಾಜ್ಯದಲ್ಲಿ 2022-23ರಿಂದ 2024-25ರವರೆಗೆ ಎಂಆರ್‌ಪಿ ಉಲ್ಲಂಘನೆ ಹಿನ್ನೆಲೆಯಲ್ಲಿ ಸಾರ್ವಜನಿಕರಿಂದ 800 ದೂರುಗಳು ಸ್ವೀಕಾರವಾಗಿವೆ.
ಈ ಕುರಿತು 499 ಮದ್ಯದಂಗಡಿಗಳ ವಿರುದ್ಧ ಕೇಸ್ ದಾಖಲಿಸಿರುವ ಅಬಕಾರಿ ಇಲಾಖೆ ಅಧಿಕಾರಿಗಳು 90 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ. ಅಲ್ಲದೆ, ಎಂಆರ್‌ಪಿ ಉಲ್ಲಂಘನೆ ಹಿನ್ನೆಲೆಯಲ್ಲಿ 2020-21ರಲ್ಲಿ 1,962 ಕೇಸ್ ದಾಖಲಿಸಿ 25 ಪರವಾನಗಿ, 2021-22ರಲ್ಲಿ 2,231 ಕೇಸ್ ವರದಿಯಾಗಿ 46 ಪರವಾನಗಿ ಹಾಗೂ 2022-23ರಲ್ಲಿ 2,014 ಕೇಸ್ ದಾಖಲಿಸಿ 47 ಲೈಸೆನ್ಸ್ ಅಮಾನತುಪಡಿಸಲಾಗಿತ್ತು.
ರಾಜ್ಯದಲ್ಲಿ ವೈನ್‌ಶಾಪ್(ಸಿಎಲ್2) ಮತ್ತು ಬಾರ್ ಆಂಡ್ ರೆಸ್ಟೋರೆಂಟ್ (ಸಿಎಲ್9) ಸೇರಿ ವಿವಿಧ ಮಾದರಿಯ 13,519 ಮದ್ಯದಂಗಡಿಗಳಿವೆ.ವೈನ್‌ಶಾಪ್, ಎಂಎಸ್‌ಐಎಲ್( ಸಿಎಲ್-11ಸಿ) ಮದ್ಯದಂಗಡಿಗಳಲ್ಲಿ ನಿಗದಿತ ದರದಲ್ಲಿ ಪಾರ್ಸೆಲ್ ಮೂಲಕ ಗ್ರಾಹಕರು ಮದ್ಯ ಪಡೆಯಬೇಕು. ಯಾವುದೇ ಕಾರಣಕ್ಕೂ ಅಲ್ಲೇ ಕುಳಿತು ಮದ್ಯ ಸೇವಿಸುವಂತಿಲ್ಲ. ಆದರೆ, ಕೋಲ್ಡ್ ಸೇರಿ ಇತರೆ ಶುಲ್ಕ ವಿಧಿಸಿ ಗ್ರಾಹಕರಿಗೆ ಹೆಚ್ಚಿನ ಬೆಲೆಗೆ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ಇಲಾಖೆಗೆ ದೂರುಗಳು ದಾಖಲಾಗಿವೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಅಬಕಾರಿ ಕಾಯ್ದೆ ಅನ್ವಯ ಇಲಾಖೆಯ ಅಧಿಕಾರಿಗಳು, ಕೇಸ್ ದಾಖಲಿಸಿ ದಂಡ ವಸೂಲಿ ಮಾಡಿ ಎಲ್ಲ ಕೇಸ್‌ಗಳನ್ನು ಇತ್ಯರ್ಥಪಡಿಸಿದ್ದಾರೆ. ಈ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ.
ಅಲ್ಲದೆ, ನಿಗದಿಗಿಂತ ಹೆಚ್ಚಿನ ಬೆಲೆ ಮದ್ಯ ಮಾರಾಟ ಮಾಡಿದರೆ ಗ್ರಾಹಕರು, ಗ್ರಾಹಕ ನ್ಯಾಯಾಲಯದಲ್ಲಿ ಕೇಸ್ ದಾಖಲಿಸುವ ಅವಕಾಶವೂ ಇದೆ. ಒಂದು ವೇಳೆ ದೂರು ದಾಖಲಿಸಿದರೆ ಸಂಬಂಧಪಟ್ಟ ನ್ಯಾಯಾಲಯ ತನಿಖೆ ನಡೆಸಿ ಕ್ರಮ ಕೈಗೊಳ್ಳುತ್ತದೆ. ಬಾರ್ ಆ್ಯಂಡ್ ರೆಸ್ಟೋರೆಂಟ್ (ಸಿಎಲ್9), ಹೋಟೆಲ್ ಮತ್ತು ವಸತಿ ಗೃಹ (ಸಿಎಲ್7) ಮದ್ಯದಂಗಡಿಗಳಲ್ಲಿ ಕುಳಿತು ಮದ್ಯ ಸೇವನೆಗೆ ಅವಕಾಶ ಇರುವುದರಿಂದ ಸೇವಾ ಸೇರಿ ಇತರ ಶುಲ್ಕ ವಿಧಿಸಿ ಹೆಚ್ಚಿನ ಬೆಲೆಗೆ ಗ್ರಾಹಕರಿಗೆ ಮದ್ಯ ಮಾರಾಟ ಮಾಡಲಾಗುತ್ತದೆ.
ಮದ್ಯ ಸೇವಿಸುವ ಸಂಖ್ಯೆ ಹೆಚ್ಚಳ
ವರ್ಷದಿಂದ ವರ್ಷಕ್ಕೆ ರಾಜಸ್ವ ಸಂಗ್ರಹ ಗುರಿ ಹೆಚ್ಚಿಸಲಾಗುತ್ತಿದೆ. ಇದರ ನಡುವೆ ಮದ್ಯ ಸೇವಿಸುತ್ತಿರುವವರ ಸಂಖ್ಯೆಯೂ ಏರುಗತಿಯಲ್ಲಿದೆ. 18 ವರ್ಷಗಿಂತ ಕೆಳಗಿನವರಿಗೆ ಮದ್ಯ ಮಾರಾಟ ಮಾಡುವಂತಿಲ್ಲ ಎಂಬ ನಿರ್ಬಂಧ ಇದ್ದರೂ ಮದ್ಯದಂಗಡಿಗಳಲ್ಲಿ ಹದಿಹರೆಯವರು ಮದ್ಯ ಚಟ ಬೆಳೆಸಿಕೊಂಡು ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ.ಬಿಯರ್ ಕುಡಿಯವರಗಿಂತ ವಿಸ್ಕಿ ಕುಡಿಯವರ ಸಂಖ್ಯೆ ಹೆಚ್ಚಳವಾಗಿದೆ. ಬಿಯರ್ ದರ ಹೆಚ್ಚು ಇರುವ ಹಿನ್ನೆಲೆಯಲ್ಲಿ ಕಡಿಮೆ ಬೆಲೆ ಎನ್ನುವ ಕಾರಣಕ್ಕೆ ವಿಸ್ಕಿ ಕುಡಿಯುತ್ತಿದ್ದಾರೆ. ಮದ್ಯ ಮಾರಾಟದಲ್ಲಿ ಬಿಯರ್‌ಕ್ಕಿಂತ ಇಂಡಿಯನ್ ಮೇಡ್ ಲಿಕ್ಕರ್ (ಐಎಂಎಲ್) ಮುಂದಿದೆ. ಕುಡಿಯವರ ಸಂಖ್ಯೆ ಆಧಾರದಲ್ಲಿ ನೋಡಿದರೆ ಬಿಯರ್‌ಕ್ಕಿಂತ ವಿಸ್ಕಿ ಕುಡಿಯುವರೇ ಸಂಖ್ಯೆ ಏರಿಕೆಯಾಗಿದೆ.
ಅಟ್ಯಾಚ್ಡ್ ಪಬ್‌ನಲ್ಲಿ ಹಾಟ್ ಡ್ರಿಂಕ್ಸ್ ಸೇಲ್:
ಪಬ್‌ಗಳಲ್ಲಿ ಬಿಯರ್ ಮಾರಾಟಕ್ಕೆ ಮಾತ್ರ ಅವಕಾಶ ಇದೆ. ಆದರೆ ಕ್ಲಬ್ (ಸಿಎಲ್4), ಹೋಟೆಲ್ ಮತ್ತು ಗೃಹ , ಸ್ಟಾರ್ ಹೋಟೆಲ್ (ಸಿಎಲ್6ಎ), ಬಾರ್ ಆಂಡ್ ರೆಸ್ಟೋರೆಂಟ್ ಹೊಂದಿರುವ ಸನ್ನದುದಾರರು ಆರಂಭಿಸುವ ಅಟ್ಯಾಚ್ಡ್ ಪಬ್‌ಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಈ ಸಂಬಂಧ ಪ್ರತಿ ವರ್ಷ ಸಾವಿರಾರು ಕೇಸ್‌ಗಳು ದಾಖಲಾಗುತ್ತಿವೆ.ಅಲ್ಲದೆ, ಬೆಂಗಳೂರಿನ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಇಂದಿರನಗರ, ರಿಚ್‌ಮಂಡ್ ಸರ್ಕಲ್ ಮತ್ತು ಕೋರಮಂಗಲ ಸೇರಿ ಇತರ ಪ್ರದೇಶಗಳಲ್ಲಿರುವ ಪಬ್‌ಗಳು ತಡರಾತ್ರಿವರೆಗೂ ತೆರೆಯಲಾಗುತ್ತಿದೆ. ಆದರೆ, ಅಧಿಕಾರಿಗಳು ಕ್ರಮ ಕೈಗೊಳ್ಳದೆ ಕಳ್ಳಾಟವಾಡುತ್ತಿದ್ದಾರೆ ಎಂಬ ಆಕ್ಷೇಪ ವ್ಯಕ್ತವಾಗಿದೆ. ಹಿಂದೊಮ್ಮೆ ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಪಬ್‌ಗಳ ಮೇಲೆ ದಾಳಿ ನಡೆಸಿ ಕಠಿಣ ಕ್ರಮ ಕೈಗೊಳ್ಳಲಾಗಿತ್ತು. ಆದರೆ, ಇದೀಗ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವವರ ವಿರುದ್ಧ ಕೇಸ್, ದಂಡ ವಿಧಿಸುತ್ತಿಲ್ಲ ಎಂದು ಇಲಾಖೆ ಅಧಿಕಾರಿಯೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.
ಮಾದಕ ವಸ್ತುಗಳ ಘಮಲು:
ಪಬ್‌ಗಳಲ್ಲಿ ಮಾದಕ ವಸ್ತುಗಳು ಸುಲಭವಾಗಿ ಸಿಗುತ್ತದೆ. ಸಾವಿರಾರು ಯುವ ಜನರು ಡ್ರಗ್ ಅಮಲಿಗೆ ಬಲಿಯಾಗುತ್ತಿದ್ದಾರೆ. ಪ್ರತಿಷ್ಠಿತ ಕಾಲೇಜಿನ ಯುವಕ-ಯುವತಿಯರು, ಐಟಿಬಿಟಿ ಉದ್ಯೋಗಿಗಳು, ಪಬ್‌ಗಳಲ್ಲಿ ತೆರಳಿ ಮಾದಕ ವಸ್ತು ಸೇವಿಸುತ್ತಿದ್ದಾರೆ. ಬೆಂಗಳೂರಿನ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಇಂದಿರನಗರ, ರಿಚ್‌ಮಂಡ್ ಸರ್ಕಲ್ ಮತ್ತು ಕೋರಮಂಗಲ ಸೇರಿ ಇತರೆ ಪ್ರದೇಶಗಳಲ್ಲಿ ಇರುವ ಪಬ್‌ಗಳು ತಡರಾತ್ರಿ 3 ಗಂಟೆವರೆಗೂ ಕಾರ್ಯನಿರ್ವಹಿಸುತ್ತಿವೆ. ಇಲ್ಲಿ ಎಲ್ಲವೂ ಖುಲ್ಲಾಂ ಖುಲ್ಲಾಂ ನಡೆಯುತ್ತಿದ್ದು, ಇಲಾಖೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ಮಾಮೂಲಿ ಪಡೆದು ಸುಮ್ಮನಾಗಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net