ಹೋಟೆಲ್ ಗಳ ದಾಳಿಯಿಂದ ಸಂಗ್ರಹಿಸಿದ 640 ಕೆ.ಜಿ. ಮಾಂಸ ಲ್ಯಾಬ್‌ಗೆ ರವಾನೆ

hotel-raids
hotel-raids
Published on

ಪ್ರಮುಖ ಮುಖ್ಯಾಂಶಗಳು

  • * ಆಹಾರ ಸುರಕ್ಷತಾ ಇಲಾಖೆಯಿಂದ 60 ಸ್ಟಾರ್ ಹೋಟೆಲ್‌ಗಳಲ್ಲಿ ತಪಾಸಣೆ

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯಲ್ಲಿ ಆಹಾರ ಸುರಕ್ಷತೆ ಇಲಾಖೆ ಅಧಿಕಾರಿಗಳಿಂದ ತಾರಾ ಹೋಟೆಲ್‌ಗಳು ಮೇಲೆ ಮೂರು ದಿನಗಳ ಕಾಲ ನಡೆಸಿದ ದಾಳಿಯಲ್ಲಿ 60 ತ್ರೀ ಸ್ಟಾರ್ ಹಾಗೂ ಫೈವ್ ಸ್ಟಾರ್ ಹೋಟೆಲ್‌ಗಳಿಂದ 640 ಕೆ.ಜಿ. ಗೂ ಅಧಿಕ ಮಾಂಸ ಸೇರಿ ನೂರಾರು ಕೆ.ಜಿ. ಆಹಾರ ಜಪ್ತಿ ಮಾಡಲಾಗಿದೆ.

ಪರಿಶೀಲನೆ ವೇಳೆ ಸ್ವಚ್ಛತೆ ಲೋಪ ಹಾಗೂ ನಿಯಮಗಳ ಉಲ್ಲಂಘನೆ ಹಿನ್ನೆಲೆ ಕೆಲ ಹೋಟೆಲ್‌ಗಳ ಕಿಚನ್ ಸೀಜ್ ಮಾಡಲಾಗಿದ್ದು, ಕರಿದ ಎಣ್ಣೆಯ ಸಂಸ್ಕರಣೆಗೆ ಮೆಗ್ನೆಷಿಯಂ ಸಲ್ಫೆಟ್ (ಎಂಜಿಎಸ್03) ಬಳಸುತ್ತಿರುವುದು ಕಂಡುಬಂದಿರುವ ಹಿನ್ನೆಲೆ ಆಹಾರ ಉದ್ದಿಮೆಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಮೂವತ್ತಕ್ಕೂ ಹೆಚ್ಚು ಅಧಿಕಾರಿಗಳನ್ನು ಒಳಗೊಂಡ ತಂಡಗಳು ಮೂರು ದಿನಗಳ ಕಾಲ ನಡೆಸಿದ ದಾಳಿಯಲ್ಲಿ 640 ಕೆ.ಜಿ. ಮಾಂಸ, 276 ಕೆ.ಜಿ. ತರಕಾರಿ, 45 ಲೀ. ಹಾಲು, 12 ಕೆ.ಜಿ. ಬೇಕರಿ ಉತ್ಪನ್ನ, 67 ಕೆ.ಜಿ. ಇತರ ಆಹಾರ ಪದಾರ್ಥ, 49 ಲೀ. ಬಳಕೆ ಮಾಡಿದ ಅಡುಗೆ ಎಣ್ಣೆ ವಶಪಡಿಸಿವೆ.
ಈ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದು, ಅಲ್ಲಿನ ಆಧಾರದ ಮೇಲೆ, ಗುಣಮಟ್ಟ ಕಾಯ್ದುಕೊಳ್ಳದ ಹೋಟೆಲ್‌ಗಳ ಮೇಲೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿರುವ ಆಹಾರ ಸುರಕ್ಷತಾ ಇಲಾಖೆಯು, ಹೋಟೆಲ್ ಹಾಗೂ ಆಹಾರ ತಯಾರಿಕಾ ಸ್ಥಳಗಳ ಮೇಲೆ ಕೈಗೊಂಡಿರುವ ವಿಶೇಷ ಕಾರ್ಯಾಚರಣೆಗಳನ್ನು ಮುಂದುವರಿಸುವುದಾಗಿ ತಿಳಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net