ವೇದಾಂತಭಾರತೀ ವಿವೇಕ ದೀಪ್ತಿಯಲ್ಲಿ 50 ಸಾವಿರ ಜನರಿಂದ ದಕ್ಷಿಣಾಮೂರ್ತ್ಯಷ್ಟಕ ಪಠಣ

ವೇದಾಂತ ಭಾರತೀ ವತಿಯಿಂದ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ‘ವಿವೇಕ ದೀಪ್ತಿ ದಕ್ಷಿಣಾಮೂರ್ತ್ಯಷ್ಟಕ’
ವೇದಾಂತ ಭಾರತೀ ವತಿಯಿಂದ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ‘ವಿವೇಕ ದೀಪ್ತಿ ದಕ್ಷಿಣಾಮೂರ್ತ್ಯಷ್ಟಕ’
Published on

ಪ್ರಮುಖ ಮುಖ್ಯಾಂಶಗಳು

  • ವೇದಾಂತ ಭಾರತೀ ವತಿಯಿಂದ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ‘ವಿವೇಕ ದೀಪ್ತಿ ದಕ್ಷಿಣಾಮೂರ್ತ್ಯಷ್ಟಕ’
  • ಸುಮಾರು 50 ಸಾವಿರಕ್ಕೂ ಹೆಚ್ಚಿನ ಜನರು ಏಕಕಾಲದಲ್ಲಿ ಪಠಣ ಮಾಡಿದ್ದು ರೋಮಾಂಚನಕಾರಿ, ಪ್ರೇರಣದಾಯಕ ಹಾಗೂ ಚೈತನ್ಯದಾಯಕ
  • ಆಸ್ತಿಕರು-ನಾಸ್ತಿಕರು, ಸ್ವದೇಶಿಗರು-ವಿದೇಶಿಗರು ಯಾರೇ ಆಗಿದ್ದರೂ ಒಪ್ಪುವಂತಹ ವಿಚಾರ
ಬೆಂಗಳೂರು: ವೇದಾಂತ ಭಾರತೀ ವತಿಯಿಂದ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ‘ವಿವೇಕ ದೀಪ್ತಿ ದಕ್ಷಿಣಾಮೂರ್ತ್ಯಷ್ಟಕ’ವನ್ನು ಸುಮಾರು 50 ಸಾವಿರಕ್ಕೂ ಹೆಚ್ಚಿನ ಜನರು ಏಕಕಾಲದಲ್ಲಿ ಪಠಣ ಮಾಡಿದ್ದು ರೋಮಾಂಚನಕಾರಿಯಾಗಿತ್ತು.
ಬೃಹತ್ ಸಂಖ್ಯೆಯ ಆಸ್ತಿಕರಿಂದ ಶ್ರೀ ಶಂಕರಭಗವತ್ಪಾದರ ವಿರಚಿತ ದಕ್ಷಿಣಾಮೂರ್ತಿ ಅಷ್ಟಕದ ಮಹಾಸಮರ್ಪಣೆಯನ್ನು ನೆರವೇರಿಸಲಾಯಿತು.
ಶೃಂಗೇರಿ ಜಗದ್ಗುರು ಶ್ರೀ ವಿಧುಶೇಖರಭಾರತೀ ಸ್ವಾಮೀಜಿ ಸಾನಿಧ್ಯದಲ್ಲಿ ವಿವೇಕ ದೀಪ್ತಿ ಸಂಪನ್ನಗೊಂಡಿತು. ಕೃಷ್ಣರಾಜನಗರ ಯಡತೊರೆ ಶ್ರೀ ಯೋಗಾನಂದೇಶ್ವರ ಸರಸ್ವತಿ ಮಠಾಧೀಶರಾದ ಶ್ರಿ ಶಂಕರಭಾರತೀ ಸ್ವಾಮೀಜಿ ಹಾಗೂ ಬ್ರಹ್ಮಾನಂದಭಾರತೀ ಸ್ವಾಮೀಜಿ ಅವರು ಸಹ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಶಾಲಾ ಮಕ್ಕಳು, ನಾಗರಿಕರು, ವಿದ್ವಾಂಸರು ಸೇರಿ ಒಂದೇ ಬಾರಿಗೆ ‘ದಕ್ಷಿಣಾಮೂರ್ತ್ಯಷ್ಟಕ’ದ ಪಠಣವು ಇಂಪಾಗಿತ್ತು. ಮಾತ್ರವಲ್ಲ, ಆಂತರಂಗದಲ್ಲಿ ಪ್ರೇರಣದಾಯಕ ಹಾಗೂ ಚೈತನ್ಯದಾಯಕವಾಗಿತ್ತು.
ಶಂಕರಭಗವತ್ಪಾದರು ವಿಚಾರಗಳು ಜಗತ್ತಿನಲ್ಲಿಯೇ ಶ್ರೇಷ್ಠವಾದ ವಿಚಾರ ಮತ್ತು ಉಪದೇಶಗಳನ್ನು ನೀಡಿದ್ದು, ದಕ್ಷಿಣಾಮೂರ್ತ್ಯಷ್ಟಕ ಕೂಡ ಒಂದಾಗಿದೆ ಎಂದು ಶ್ರೀ ವಿಧುಶೇಖರಭಾರತೀ ಶ್ರೀಗಳು ಪ್ರತಿಪಾದಿಸಿದರು.
ಆಧುನಿಕ ವಿಜ್ಞಾನಕ್ಕೆ ಹೋಲಿಸಿ ಮಾತನಾಡಿದರೂ ಪ್ರಸ್ತುತ ಎನಿಸಲಿವೆ. ಆಸ್ತಿಕರು-ನಾಸ್ತಿಕರು, ಸ್ವದೇಶಿಗರು-ವಿದೇಶಿಗರು ಯಾರೇ ಆಗಿದ್ದರೂ ಒಪ್ಪುವಂತಹ ವಿಚಾರಗಳಾಗಿವೆ. ಎಲ್ಲವನ್ನೂ ತಿಳಿಸುವ ಎಲ್ಲರನ್ನೂ ಒಳಗೊಳ್ಳುವ ವಿಷಯಗಳನ್ನು ಪ್ರತಿಪಾದಿಸಿದ್ದಾರೆ ಎಂದರು.

ಇಂದ್ರಿಯ ಹತೋಟಿಯೇ ನೈಜ ಜ್ಞಾನ:

ನಮ್ಮ ಇಂದ್ರಿಯಗಳನ್ನು ನಮ್ಮ ವಶದಲ್ಲಿಟ್ಟುಕೊಳ್ಳುವುದೇ ನಿಜವಾದ ಜ್ಞಾನವಾಗಿದೆ. ಇಂದ್ರಿಯಗಳನ್ನು ಹತೋಟಿಯಲ್ಲಿಡದಿದ್ದರೆ ಅದು ದುಃಖವಾಗಲಿದೆ. ಪರಮಾರ್ಥ ವಿಷಯಗಳನ್ನು ತಿಳಿದಾಗ ಬೇರೆ ವಿಷಯ ಮತ್ತೊಂದಿರುವುದಿಲ್ಲ. ಸಮಸ್ತ ಉಪನಿಷತ್ತುಗಳು ಹಾಗೂ ಗೀತೆಯಲ್ಲಿ ಭಗವಂತ ಕೂಡ ಕೂಡ ಇದನ್ನೇ ಹೇಳಿದ್ದಾನೆಂದರು.
ದಕ್ಷಿಣಾಮೂರ್ತ್ಯಷ್ಟಕವನ್ನು ವಿದ್ಯಾರ್ಥಿಗಳಿಗೆ ಸಣ್ಣ ವಯಸ್ಸಿನಲ್ಲಿಯೇ ಮಾಡಿಸಬೇಕು ಮತ್ತು ನಿರಂತರವಾಗಿ ಈ ಪ್ರಕ್ರಿಯೆ ನಡೆಯಬೇಕಿದೆ. ಇದರಿಂದ ಸಮಾದಲ್ಲಿ ಬದಲಾವಣೆ ಸಾಧ್ಯವಿದೆ. ಅದರ ಅರ್ಥ ತಿಳಿದು ಶ್ರವಣ, ಮನನ ಮತ್ತು ಧ್ಯಾನ ಮಾಡಬೇಕೆಂದಿಲ್ಲ. ಕೇವಲ ಪಠಣ ಮಾಡಿದರೆ ಸಾಕು. ಅದರಿಂದಲೇ ಸಾಕಷ್ಟು ಪ್ರಯೋಜನಗಳಿವೆ ಎಂದು ಹೇಳಿದರು.

ದಕ್ಷಿಣಾಮೂರ್ತ್ಯಷ್ಟಕದಿಂದ ಬದಲಾವಣೆ:

ಶ್ರೀ ಶಂಕರಭಾರತೀ ಸ್ವಾಮೀಜಿ ಮಾತನಾಡಿ, ದಕ್ಷಿಣಾಮೂರ್ತ್ಯಷ್ಟಕವನ್ನು ರಾಜ್ಯದ ಮೂಲೆ ಮೂಲೆಗೆ ಕೊಂಡೊಯ್ದಲ್ಲಿ ಜೀವನ ಸಾರ್ಥಕವಾಗಲಿದೆ ಎಂಬುದರಲ್ಲಿ ಸಂದೇಹವೇ ಇಲ್ಲ. ಏಕೆಂದರೆ. ಈಗಾಗಲೇ ಶಾಲೆಗಳಲ್ಲಿ ಪಠಣ ಮಾಡಿದ ಮಕ್ಕಳು ಮತ್ತು ಶಿಕ್ಷಕರು ಕೂಡ ತಮ್ಮಲ್ಲಿ ಆಗಿರುವ ಬದಲಾವಣೆಗಳನ್ನು ಹೇಳುತ್ತಿದ್ದಾರೆ ಎಂದರು.
ಅತಿ ಸರಳವಾದ ತತ್ವಗಳನ್ನು ಒಳಗೊಂಡಿರುವುದರಿಂದಲೇ ದಕ್ಷಿಣಾಮೂರ್ತ್ಯಷ್ಟಕ ದೇಶಾದ್ಯಂತ ಎಲ್ಲರ ಹೃದಯದಲ್ಲಿದೆ. ಇಂದು ಯುವಕರಿಗೆ ಪರಿಚಯಿಸುವ ಕೆಲಸ ಮಾಡಿದ್ದು, ಇದನ್ನು ಬೇರೆ ರಾಜ್ಯಗಳಿಗೂ ವಿಸ್ತರಿಸುವುದರಿಂದ ಸಮಾಜಕ್ಕೆ ಉಪಯೋಗವಾಗಲಿದೆ ಎಂದರು.
ಬೆಂಗಳೂರಿನ 350 ಶಾಲೆಗಳ ಸಾವಿರಾರು ವಿದ್ಯಾರ್ಥಿಗಳು ಇಂದು ಪಠಣ ಮಾಡಿದ್ದಾರೆ. ಪರೀಕ್ಷೆ ಸಮಯವಾದ್ದರಿಂದ ಹಲವು ಶಾಲೆಗಳ ವಿದ್ಯಾರ್ಥಿಗಳು ಆಗಮಿಸಲು ಸಾಧ್ಯವಾಗಿಲ್ಲ ಎಂದು ತಿಳಿಸಿದರು.

ಸ್ವಚ್ಛತೆಗೆ ಆದ್ಯತೆ, ಅಚ್ಚುಕಟ್ಟಾದ ವ್ಯವಸ್ಥೆ

ಕಾರ್ಯಕ್ರಮದಲ್ಲಿ 50 ಸಾವಿರಕ್ಕೂ ಹೆಚ್ಚಿನ ಜನರು ಸೇರಿದ್ದರೂ ಎಲ್ಲಿಯೂ ಕಸ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಕಂಡಿಲ್ಲ. ಪ್ರವೇಶದ್ವಾರದಲ್ಲಿಯೇ ಪ್ರತಿಯೊಬ್ಬರಿಗೂ ಬಾಳೇಹಣ್ಣು ಮತ್ತು ಒಂದು ಪುಸ್ತಕವನ್ನು ನೀಡಲಾಗಿತ್ತು. ಬಾಳೇಹಣ್ಣು ಸಿಪ್ಪೆಯನ್ನು ಒಂದೆಡೆ ಸಂಗ್ರಹಿಸಲು ಡಬ್ಬಗಳನ್ನು ಇಡಲಾಗಿತ್ತು. ಕುಡಿಯುವ ನೀರಿಗಾಗಿ ಪ್ಲಾಸ್ಟಿಕ್ ಕ್ಯಾನ್ ಮತ್ತು ಸ್ಟೀಲ್ ಲೋಟಗಳನ್ನು ಇಡಲಾಗಿತ್ತು.
ಅದೇ ರೀತಿ ಆಗಮಿಸಿದ್ದ ಪ್ರತಿಯೊಬ್ಬರಿಗೂ ರುಚಿಕರವಾದ ಭೋಜನ ವ್ಯವಸ್ಥೆ ಮಾಡಲಾಗಿತ್ತು.
ಸ್ಟೀಲ್ ತಟ್ಟೆ, ಚಮಚದಲ್ಲಿ ಪ್ರಸಾದ ವಿತರಣೆ ಮಾಡಲಾಯಿತು. ಹೆಚ್ಚುವರಿಯಾಗಿ ಅಡಿಕೆ ತಟ್ಟೆ ಮತ್ತು ಚಮಚಗಳನ್ನು ಸಹ ತರಿಸಲಾಗಿತ್ತು. ಅಡಿಕೆ ತಟ್ಟೆಯಲ್ಲಿ ಊಟ ಮಾಡಿದವರು ಒಂದೆಡೆ ಜಾಗ ನಿಗದಿ ಮಾಡಲಾಗಿತ್ತು. ಇದರಿಂದ ಕಾರ್ಯಕ್ರಮಕ್ಕೆ ಆಗಮಿಸಿದವರಿಗೆ ರುಚಿಕರವಾದ ಊಟ ಮಾಡಿದ ನಂತರವೂ ಸ್ವಚ್ಛತೆ ಕಾಪಾಡಿದ್ದಕ್ಕೆ ಶಹಬ್ಬಾಸ್‌ಗಿರಿ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net