ರಾಜ್ಯದಲ್ಲಿ 4212 ಎಚ್1ಎನ್1 ದೃಢ

H1N1 Virus
H1N1 Virus
Published on

ಪ್ರಮುಖ ಮುಖ್ಯಾಂಶಗಳು

  • * ಜಿಬಿಎ ವ್ಯಾಪ್ತಿಯಲ್ಲಿ ಅತೀ ಹೆಚ್ಚು ಪ್ರಕರಣ
  • * ರೋಗ ನಿಯಂತ್ರಣಕ್ಕೆ ಮಾರ್ಗಸೂಚಿ

ಬೆಂಗಳೂರು:ರಾಜ್ಯದಲ್ಲಿ ಈ ವರ್ಷ ಋತುಮಾನದ ಜ್ವರ (ಇನ್‌ಫ್ಲೂಯೇಂಜಾ) ವ್ಯಾಪಕವಾಗಿ ಹರಡುತ್ತಿದ್ದು, ಈಗಾಗಲೇ 4,212 ಎಚ್1ಎನ್1 ಪ್ರಕರಣಗಳು ವರದಿಯಾಗಿವೆ. ಮಳೆ, ಚಳಿಗಾಲದಲ್ಲಿ ವೈರಾಣು ಹೆಚ್ಚು ಸಕ್ರಿಯವಾಗಿರುವುದರಿಂದ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಆರೋಗ್ಯ ಸಚಿವ ಯು.ಟಿ.ಖಾದರ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಆರೋಗ್ಯಸೌಧದಲ್ಲಿ ಸೋಮವಾರ ರಾಜ್ಯ ಮತ್ತು ಜಿಲ್ಲಾಮಟ್ಟದ ಆರೋಗ್ಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು, ಪ್ರತಿ ಜಿಲ್ಲೆಯ ಸ್ಥಿತಿಗತಿ ಬಗ್ಗೆ ಮಾಹಿತಿ ಪಡೆದುಕೊಂಡರು. ಈ ವೇಳೆ ಎಚ್1ಎನ್1 ಹಾಗೂ ಸಾಂಕ್ರಾಮಿಕ ರೋಗದ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವಂತೆ ಸೂಚಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಮಳೆ ಮತ್ತು ಚಳಿಗಾಲದಲ್ಲಿ ಜ್ವರ ಸ್ವಾಭಾವಿಕವಾಗಿ ಏರಿಕೆಯಾಗುತ್ತದೆ. ಈ ಅವಧಿಯಲ್ಲಿ ವೈರಾಣುಗಳು ಶಕ್ತಿಶಾಲಿಯಾಗಿರುತ್ತವೆ. ಆದ್ದರಿಂದ ಜ್ವರ ಬರದಂತೆ ಹಾಗೂ ಬಂದಾಗ ಅಗತ್ಯ ಎಚ್ಚರಿಕೆ ಕ್ರಮಗಳನ್ನು ಪಾಲಿಸಬೇಕು. ರಾಜ್ಯದಲ್ಲಿ ಕಳೆದ ವರ್ಷ 4,583 ಪ್ರಕರಣಗಳು ವರದಿಯಾಗಿದ್ದವು, ಈ ವರ್ಷ ಈಗಾಗಲೇ 4,212 ಪ್ರಕರಣ ದೃಢಪಟ್ಟಿದ್ದು, ಬಹುತೇಕರು ಗುಣಮುಖರಾಗಿದ್ದಾರೆ. ಹೆಚ್ಚಿನವರು ಮನೆ ಆರೈಕೆಯಿಂದಲೇ ಚೇತರಿಸಿಕೊಂಡಿದ್ದಾರೆ. ದೃಢ ಪ್ರಕರಣಗಳಲ್ಲಿ ಎರಡು ಸಾವಿರಕ್ಕೂ ಅಧಿಕ ಪ್ರಕರಣಗಳು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯಲ್ಲಿಯೇ ದೃಢಪಟ್ಟಿವೆ ಎಂದು ಮಾಹಿತಿ ನೀಡಿದರು.

ನಿರ್ಲಕ್ಷ್ಯ ಬೇಡ:

ಶೀತ, ಜ್ವರದ ಸಮಸ್ಯೆ ಎದುರಿಸುತ್ತಿರುವವರು ಅನಗತ್ಯ ಓಡಾಟ ತಪ್ಪಿಸಿ, ಮನೆಯಲ್ಲಿಯೇ ಇರಬೇಕು. ಜನದಟ್ಟಣೆ ಪ್ರದೇಶಗಳಿಗೆ ಹೋದರೆ ರೋಗ ಹರಡುವ ಸಾಧ್ಯತೆ ಹೆಚ್ಚು. ಹೋಗುವುದು ಅನಿವಾರ್ಯವಾದಲ್ಲಿ ಮಾಸ್ಕ್ ಧರಿಸಬೇಕು. ಎರಡು ದಿನ ಕಳೆದರೂ ಜ್ವರ ಕಡಿಮೆಯಾಗದಿದ್ದರೆ ಹತ್ತಿರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕು ಎಂದು ಸಚಿವರು ತಿಳಿಸಿದರು.

ಕಣ್ಗಾವಲು ಕೇಂದ್ರಗಳು:

ಶೀತ ಜ್ವರ ಮಾದರಿ ಅನಾರೋಗ್ಯ ಸಮಸ್ಯೆ (ಐಎಲ್‌ಐ) ತೀವ್ರ ಉಸಿರಾಟದ ಸಮಸ್ಯೆ (ಸಾರಿ) ಪ್ರಕರಣಗಳ ಪರೀಕ್ಷೆ ಮತ್ತು ಪತ್ತೆಗೆ ಕ್ರಮವಹಿಸಲಾಗಿದೆ. ಇದಕ್ಕಾಗಿ ಜಿಲ್ಲಾಸ್ಪತ್ರೆಗಳು, ವೈದ್ಯಕೀಯ ಕಾಲೇಜುಗಳು ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ನಿಗದಿತ ಕಣ್ಗಾವಲು ಕೇಂದ್ರಗಳನ್ನಾಗಿ ಗುರುತಿಸಲಾಗಿದೆ. ಇದರ ಜತೆಗೆ ವಿವಿಧ ಪ್ರಯೋಗಾಲಯಗಳಲ್ಲಿ ಪರೀಕ್ಷೆಗೆ ಕ್ರಮ ಕೈಗೊಳ್ಳಲಾಗಿದೆ. ಈ ಸಂಬಂಧ ರಾಜ್ಯಾದ್ಯಂತ ಆರೋಗ್ಯ ಕೇಂದ್ರಗಳಿಗೆ ಅಗತ್ಯವಿರುವ ಪಿಪಿಇ ಕಿಟ್, ಎನ್95 ಮಾಸ್ಕ್ ಮತ್ತು ಒಸೆಲ್ಟಾಮಿವಿರ್ ಔಷಧಗಳನ್ನು ಸಮರ್ಪಕ ಪ್ರಮಾಣದಲ್ಲಿ ಲಭ್ಯವಿರುವಂತೆ ನೋಡಿಕೊಳ್ಳಲು ಸೂಚಿಸಲಾಗಿದೆ ಎಂದು ಹೇಳಿದರು.

ಮಾಧ್ಯಮಗಳಲ್ಲಿ ವರದಿಯಾದಂತೆ ಶಾಲೆಯೊಂದರಲ್ಲಿ ಎಚ್1ಎನ್1 ಸೋಂಕು ವಿದ್ಯಾರ್ಥಿಗಳಲ್ಲಿ ಹರಡಿರಲಿಲ್ಲ, ಇಬ್ಬರು ಶಿಕ್ಷಕರಿಗೆ ಮಾತ್ರ ದೃಢಪಟ್ಟಿತ್ತು. ಅವರು ಶಾಲೆಗೆ ಬಾರದ ಕಾರಣ ಪಾಲಕರು ಆತಂಕಗೊಂಡು ಮಕ್ಕಳನ್ನು ಶಾಲೆಗೆ ಕಳುಹಿಸಿರಲಿಲ್ಲ. ಆದ್ದರಿಂದ ಶಾಲಾ-ಕಾಲೇಜುಗಳಿಗೆ ಸಾಂಕ್ರಾಮಿಕ ರೋಗಗಳ ನಿರ್ವಹಣೆ ಬಗ್ಗೆ ಮಾರ್ಗಸೂಚಿ ಕಳುಹಿಸಲಾಗುವುದು.

— ಯು.ಟಿ. ಖಾದರ್, ಆರೋಗ್ಯ ಸಚಿವ

ಸೋಂಕು ಹೆಚ್ಚಿರುವ ಜಿಲ್ಲೆಗಳ ವಿವರ:

ಎಚ್ಚರಿಕೆ ಕ್ರಮಗಳು:

*ಸೀನು ಮತ್ತು ಕೆಮ್ಮುವಾಗ ಮೂಗು, ಬಾಯಿಗೆ ಅಡ್ಡಲಾಗಿ ಕರವಸ ಬಳಸಬೇಕು
*ಸಾಬೂನಿನಿಂದ ಕೈಗಳನ್ನು ನಿಯಮಿತವಾಗಿ ತೊಳೆದುಕೊಳ್ಳಬೇಕು
*ಸಾಕಷ್ಟು ನೀರು ಸೇವಿಸಬೇಕು
*ರೋಗ ಲಕ್ಷಣಗಳಿರುವವರು ಪ್ರತ್ಯೇಕವಾಗಿರುವುದು ಸೂಕ್ತ
* ಕಣ್ಣು, ಮೂಗು ಮತ್ತು ಬಾಯಿಯನ್ನು ಪದೇ ಪದೇ ಮುಟ್ಟಬಾರದು
* ಸ್ವಯಂ ಔಷಧೋಪಚಾರ ಮಾಡಬಾರದು
* ಇತರರೊಂದಿಗೆ ಕೈ ಕುಲುಕುವುದನ್ನು ತಪ್ಪಿಸಬೇಕು
* ಮನೆಯ ಆಹಾರ ಸೇವನೆಗೆ ಆದ್ಯತೆ ನೀಡಬೇಕು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net