

ಬೆಂಗಳೂರು: ಕಳೆದ ವಿಧಾನಸಭೆ ಚುನಾವಣೆ ವೇಳೆ ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ‘ಶೇ.40 ಕಮಿಷನ್ ಸರ್ಕಾರ’ ಎಂಬುದಾಗಿ ಜಾಹೀರಾತು ನೀಡಿದ್ದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ), ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆಯನ್ನು ಹೈಕೋರ್ಟ್ ರದ್ದುಪಡಿಸಿದೆ.
ತಮ್ಮ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದುಪಡಿಸುವಂತೆ ಕೊರಿ ಕೆಪಿಸಿಸಿ, ಸಿಎಂ ಡಿ.ಕೆ. ಶಿವಕುಮಾರ್ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿಗಳನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ ಬುಧವಾರ ಈ ಆದೇಶ ಮಾಡಿದೆ.
ಇದೇ ಪ್ರಕರಣದಲ್ಲಿ ಫೆ.17ರಂದು ಹೈಕೋರ್ಟ್ ರಾಹುಲ್ ಗಾಂಧಿ ವಿರುದ್ಧದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯನ್ನು ರದ್ದುಪಡಿಸಿತ್ತು.
ಕಾಂಗ್ರೆಸ್ ಪ್ರಕಟಿಸಿದ್ದ ಜಾಹೀರಾತುಗಳಲ್ಲಿ 2019ರಿಂದ 2023ರವರೆಗೆ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಅಧಿಕಾರದಲ್ಲಿದ್ದ ಹಿಂದಿನ ಬಿಜೆಪಿ ಸರ್ಕಾರದದ ವಿರುದ್ಧ ಜಾಹೀರಾತು ಪ್ರಕಟಿಸಿತ್ತು. ಹಿಂದಿನ ಬಿಜೆಪಿ ಸರ್ಕಾರವನ್ನು ಶೇ.40 ಪರ್ಸೆಂಟ್ ಕಮಿಷನ್ ಸರ್ಕಾರ ಆಗಿದೆ. ಸಾರ್ವಜನಿಕ ಖರೀದಿ, ಕಾಮಗಾರಿಗಳ ಗುತ್ತಿಗೆ ನೀಡಿಕೆ ಹಾಗೂ ಕೋವಿಡ್-19 ಸಂಬಂಧಿತ ಸಾಮಗ್ರಿಗಳ ಪೂರೈಕೆ ಸೇರಿ ವಿವಿಧ ಚಟುವಟಿಕೆಗಳಲ್ಲಿ ಕಮಿಷನ್ ಪಡೆಯಲಾಗುತ್ತಿದೆ ಭ್ರಷ್ಟಾಚಾರದ ಮೂಲಕ ಕರ್ನಾಟಕದ ಜನರಿಂದ ಬಿಜೆಪಿ ಸರ್ಕಾರ 1,500 ಕೋಟಿ ರೂ. ಲೂಟಿ ಮಾಡಿದೆ. ಸರ್ಕಾರಿ ಹುದ್ದೆಗಳನ್ನು ಪಡೆಯಲು ಸ್ಕೋರ್ ಕಾರ್ಡ್ ಮತ್ತು ರೇಟ್ ಕಾರ್ಡ್ ವ್ಯವಸ್ಥೆ ಜಾರಿಯಲ್ಲಿದೆ. ನೇಮಕಾತಿಗಳಿಗಾಗಿ ಲಂಚ ನೀಡಬೇಕಾಗಿತ್ತು ಎಂಬ ಆರೋಪಗಳನ್ನೂ ಆ ಜಾಹೀರಾತಿನಲ್ಲಿ ಕಾಂಗ್ರೆಸ್ ಆರೋಪ ಮಾಡಿತ್ತು.
ಇದರಿಂದ ಕಾಂಗ್ರೆಸ್ ಪಕ್ಷ, ಅದರ ಕರ್ನಾಟಕ ಘಟಕ ಹಾಗೂ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಪಕ್ಷವು ಮಾನನಷ್ಟ ಅಪರಾಧ ಸಂಬಂಧ ಖಾಸಗಿ ದೂರು ದಾಖಲಿಸಿತ್ತು.
ಈ ಪ್ರಕರಣವನ್ನು ರದ್ದುಪಡಿಸುವಂತೆ ಕೆಪಿಸಿಸಿ, ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಬಿಜೆಪಿ ತಮಗೆ ಕಿರುಕುಳ ನೀಡುವ ಉದ್ದೇಶದಿಂದ ಪ್ರಕರಣ ದಾಖಲಿಸಿದೆ. ಆರೋಪಿತ ಹೇಳಿಕೆಗಳಿಂದ ನೇರವಾಗಿ ಮಾನಹಾನಿಗೊಳಗಾದ ವ್ಯಕ್ತಿ ಅಥವಾ ಸಂಸ್ಥೆ ಬಿಜೆಪಿ ಅಲ್ಲ. ಹೀಗಾಗಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಲು ಬಿಜೆಪಿಗೆ ಕಾನೂನುಬದ್ಧ ಅರ್ಹತೆ ಇಲ್ಲ ಎಂದು ಪ್ರತಿಪಾದಿಸಿದ್ದರು.