

ಬೆಂಗಳೂರು: ಕ್ರಿಮಿನಲ್ ಪ್ರಕರಣದಲ್ಲಿ ಆರೋಪಿಯನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸುವ 24 ಗಂಟೆಗಳ ಅವಧಿಯು ಆರೋಪಿಯನ್ನು ಬಂಧಿಸಿದ ಸಮಯದಿಂದ ಪ್ರಾರಂಭವಾಗುತ್ತದೆಯೇ ಹೊರತು ಪೊಲೀಸರು ದಾಖಲಿಸಿದ ಬಂಧನದ ಸಮಯದಿಂದಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಜಾಮೀನು ಕೋರಿ ಸಕಲೇಶಪುರ ತಾಲೂಕಿನ ಮಸುವಳ್ಳಿಯ ನವೀನ್ (35) ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ: ಅರ್ಜಿದಾರರ ಪತ್ನಿಯ ಮರಣದ ನಂತರ ಪತ್ನಿಯ ತಾಯಿ ಅವರು ನವೀನ್ ವಿರುದ್ಧ ವರದಕ್ಷಿಣೆ ನಿಷೇಧ ಕಾಯ್ದೆ1961ರ ಕಲಂ 4ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಅವರು 2025ರ ಅ.14ರಂದು ಬೆಳಿಗ್ಗೆ 11 ಗಂಟೆಗೆ ಚಿಕ್ಕಮಗಳೂರು ಜಿಲ್ಲೆಯ ಆಲ್ದೂರು ಪೊಲೀಸರ ಮುಂದೆ ಅವರು ಶರಣಾಗಿದ್ದರು.
ನಂತರ ಅರ್ಜಿದಾರರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ವಿಚಾರಣಾ ನ್ಯಾಯಾಲಯ 2026ರ ಏ.9ರಂದು ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಪಿ.ಇ. ಸುರೇಶ್, ಅರ್ಜಿದಾರರನ್ನು ಬಂಧನವಾದ 24 ಗಂಟೆಗಳ ಒಳಗೆ ನ್ಯಾಯವ್ಯಾಪ್ತಿಯ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿಲ್ಲ. ಆದ್ದರಿಂದ, ಅವರ ಬಂಧನ ಕಾನೂನುಬಾಹಿರ ಎಂಬ ವಾದ ಮಂಡಿಸಿದ್ದರು.
ಇದನ್ನು ಅಲ್ಲಗಳೆದಿದ್ದ ರಾಜ್ಯ ಪ್ರಾಸಿಕ್ಯೂಷನ್, ಅರ್ಜಿದಾರರು 2025ರ ಅ.14ರಂದು ಬೆಳಿಗ್ಗೆ 11 ಗಂಟೆಗೆ ಪೊಲೀಸರ ಮುಂದೆ ಸ್ವಯಂಪ್ರೇರಣೆಯಿಂದ ಶರಣಾಗಿದ್ದಾರೆ. ಆದರೆ, ಆ ದಿನ ರಾತ್ರಿ 9.45ಕ್ಕೆ ಅವರನ್ನು ಬಂಧಿಸಲಾಗಿದೆ. ಬಂಧಿಸಿದ 24 ಗಂಟೆಗಳ ಒಳಗೆ ಅಂದರೆ ಸಂಜೆ 5.45ಕ್ಕೆ ಅವರನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿತ್ತು ಎಂದು ಪ್ರತಿಪಾದಿಸಿತ್ತು.
ವಾದಪ್ರತಿವಾದ ಆಲಿಸಿದ ನ್ಯಾಯಪೀಠ, ಅರ್ಜಿದಾರರು ಪೊಲೀಸರ ಮುಂದೆ ಶರಣಾದ ತಕ್ಷಣ ಅವರನ್ನು ಏಕೆ ವಿಚಾರಣೆ ಮಾಡಲಿಲ್ಲ ಅಥವಾ 2025ರ ಅ.14ರಂದು ರಾತ್ರಿ 9.45ಕ್ಕೆ ಏಕೆ ಅವರ ಬಂಧನವನ್ನು ದಾಖಲಿಸಲಾಯಿತು ಎಂಬುದನ್ನು ಕೇಸ್ ಡೈರಿಯಲ್ಲಿ ಉಲ್ಲೇಖ ಮಾಡಿಲ್ಲ. ಹೀಗಾಗಿ, ಈ ಪ್ರಕರಣದಲ್ಲಿ ಅರ್ಜಿದಾರರನ್ನು ಬಂಧಿಸಿದ ಸಮಯದಿಂದ 24 ಗಂಟೆಗಳ ಒಳಗೆ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿಲ್ಲ ಎಂಬುದು ಸ್ಪಷ್ಟವಾಗಿ ಕಂಡುಬರುತ್ತದೆ. ಆದ್ದರಿಂದ, ಅರ್ಜಿದಾರರ ಬಂಧನವು ಕಾನೂನುಬಾಹಿರ ಎಂದು ಅಭಿಪ್ರಾಯಪಟ್ಟಿದೆ.
ಈ ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ನಡೆ, ಬಂಧಿತ ಮತ್ತು ಕಸ್ಟಡಿಯಲ್ಲಿರುವ ವ್ಯಕ್ತಿಯನ್ನು ಬಂಧನದ 24 ಗಂಟೆಗಳ ಒಳಗೆ ಹತ್ತಿರದ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಬೇಕು ಎಂಬ ಸಂವಿಧಾನದ 22(2)ನೇ ವಿಧಿಗೆ ವಿರುದ್ಧವಾಗಿದೆ ಎಂದು ಹೇಳಿದ್ದು ಅರ್ಜಿದಾರರಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿ ಆದೇಶಿಸಿದೆ.