ಶಿಕ್ಷೆಯಾಗದಿದ್ದರೂ 21 ವರ್ಷ ಕಾರಾಗೃಹ ವಾಸ! ವರದಿ ಕೇಳಿದ ಹೈಕೋರ್ಟ್​| High court

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಮಾನಸಿಕ ಅಸ್ವಸ್ಥ ವಿಚಾರಣಾಧೀನ ಕೈದಿ ಪರ ಅರ್ಜಿ ಸಲ್ಲಿಕೆ
ಬೆಂಗಳೂರು: ಕೊಲೆ ಆರೋಪದಲ್ಲಿ 2005ರಲ್ಲಿ ಬಂಧನಕ್ಕೊಳಗಾದ ವ್ಯಕ್ತಿ 21 ವರ್ಷಗಳಿಂದಲೂ ವಿಚಾರಣಾಧೀನ ಕೈದಿಯಾಗಿ ಜೈಲಿನಲ್ಲಿದ್ದಾರೆ! ಹೌದು, ವಿಚಾರಣೆ ಸಂದರ್ಭದಲ್ಲಿ ಆತ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವುದು ವೈದ್ಯಕಿಯ ಪರೀಕ್ಷೆಯಲ್ಲಿ ದೃಢಪಟ್ಟ ಕಾರಣ 2015ರಲ್ಲೇ ವಿಚಾರಣಾ ಪ್ರಕ್ರಿಯೆ ಸ್ಥಗಿತಗೊಂಡಿತ್ತು. ಈ ಕಾರಣಕ್ಕೆ ಪ್ರಕರಣ ಇತ್ಯರ್ಥವಾಗದೆ ಶಿಕ್ಷೆಯಾಗದಿದ್ದರೂ ಸುಮಾರು ಎರಡು ದಶಕಗಳಿಂದ ನ್ಯಾಯಾಂಗ ಬಂಧನದಲ್ಲಿ ಉಳಿಯುಂತಾಗಿದೆ.
ಸುದೀರ್ ವಿಳಂಬದ ನಂತರ ಆತನ ಪರವಾಗಿ ಯುವ ವಕೀಲರಿಬ್ಬರು ಪ್ರಕರಣದ ದಾಖಲೆಗಳನ್ನು ಪಡೆಯಲು ಅರ್ಜಿ ಸಲ್ಲಿಸಿದ್ದರಾದರೂ, ವಿಚಾರಣಾ ನ್ಯಾಯಾಲಯದಲ್ಲಿ ಕಡತಗಳೇ ನಾಪತ್ತೆಯಾಗಿವೆ! ಇದೀಗ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್​, ಪ್ರಕರಣ ಕುರಿತು ವರದಿ ಕೇಳಿದೆ. 
ಕಳೆದ ಎರಡು ದಶಕಗಳಿಂದ ಜೈಲಿನಲ್ಲಿರುವ ಕೋಲಾರದ ವಿ.ಶ್ರೀನಿವಾಸ ಎಂಬುವರಿಗೆ ಸಂಬಂಧಿಸಿ ವಕೀಲರಾದ ಎ. ವಿಕ್ರಮ್​ ರಾಜ್​ ಮತ್ತು ಅಶ್ವಿನ್​ ಜಾಯ್ಸ್​ಟನ್​ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ಪೀಠ, ಕೈದಿಗೆ ನೀಡಲಾಗಿರುವ ಕಾನೂನು ಹಾಗೂ ವೈದ್ಯಕಿಯ ನೆರವಿನ ಕುರಿತು ವರದಿ ಸಲ್ಲಿಸುವಂತೆ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ (ಕೆಎಸ್​ಎಲ್​ಎಸ್​ಎ) ನಿರ್ದೇಶನ ನೀಡಿದೆ.

ಪ್ರಕರಣದ ಹಿನ್ನೆಲೆ:

ಪತ್ನಿಯನ್ನು ಕೊಲೆಗೈದ ಆರೋಪದಲ್ಲಿ ಕೋಲಾರ ಗ್ರಾಮಾಂತರ ಪೊಲೀಸರು 2005ರಲ್ಲಿ ಶ್ರೀನಿವಾಸನನ್ನು ಬಂಧಿಸಿದ್ದರು. ಜಾಮೀನು ಅರ್ಜಿಯನ್ನು ವಿಚಾರಣಾ ನ್ಯಾಯಾಲಯ ತಿರಸ್ಕರಿಸಿತ್ತು. ಆ ನಂತರದಿಂದ ಜೈಲಿನಲ್ಲಿಯೇ ಉಳಿದಿದ್ದಾರೆ. ನಂತರದ ವಿಚಾರಣೆ ವೇಳೆ ಅವರ ಮಾನಸಿಕ ಆರೋಗ್ಯದ ಬಗ್ಗೆ ನ್ಯಾಯಾಲಯಕ್ಕೆ ಅನುಮಾನ ಬಂದ ಹಿನ್ನೆಲೆಯಲ್ಲಿ ನಿಮ್ಹಾನ್ಸ್​ನಿಂದ ವೈದ್ಯಕಿಯ ಅಭಿಪ್ರಾಯ ಪಡೆಯಲಾಗಿತ್ತು.
ನಿಮ್ಹಾನ್ಸ್​ ನೀಡಿದ ವೈದ್ಯಕಿಯ ವರದಿ ಆಧಾರದ ಮೇಲೆ, ವಿಚಾರಣಾ ನ್ಯಾಯಾಲಯವು ಆರೋಪಿಯು ತನ್ನನ್ನು ಸಮರ್ಥಿಸಿಕೊಳ್ಳಲು ಅಥವಾ ವಿಚಾರಣೆ ಎದುರಿಸಲು ಅಸಮರ್ಥರಾಗಿದ್ದಾರೆ ಎಂದು 2015ರ ಸೆ.3ರಂದು ಘೋಷಿಸಿತ್ತು. ವಿಚಾರಣೆ ಸ್ಥಗಿತಗೊಳಿಸಿ, ಬೆಂಗಳೂರಿನ ಕೇಂದ್ರ ಕಾರಾಗೃಹದ ಮನೋ ವೈದ್ಯಕಿಯ ವಾರ್ಡ್​ ಅಥವಾ ಧಾರವಾಡದ ಮಾನಸಿಕ ಆಸ್ಪತ್ರೆಗೆ ಅವರನ್ನು ಸ್ಥಳಾಂತರಿಸುವಂತೆ ಆದೇಶಿಸಿತ್ತು. ಚೇತರಿಸಿಕೊಂಡ ನಂತರ ವಿಚಾರಣೆ ಆರಂಭಿಸುವುದಾಗಿ ತಿಳಿಸಿತ್ತು. ಆದರೆ, ಆ ಬಳಿಕ ಯಾವುದೇ ಬೆಳವಣಿಗೆಗಳು ಆಗಿಲ್ಲ. 

ದಾಖಲೆಗಳು ನಾಪತ್ತೆ 

2026ರ ಆ.19ರಂದು ಕೋಲಾರದ ವಿಚಾರಣಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ಆರೋಪಿ ಪರ ವಕೀಲರು, ಪ್ರಕರಣದ ದಾಖಲೆಗಳನ್ನು ಕೇಳಿದ್ದರು. ಆದರೆ, ದಾಖಲೆಗಳು ನ್ಯಾಯಾಲಯದ ರೆಕಾರ್ಡ್​ ಕೊಠಡಿಗೆ ಬಂದಿಲ್ಲ ಎಂಬ ಹಿಂಬರಹದೊಂದಿಗೆ ಅರ್ಜಿ ವಾಪಾಸ್​ ಆಗಿತ್ತು. ಸಾಮಾನ್ಯವಾಗಿ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೊಳಗಾದ ಕೈದಿಗಳು 14 ವರ್ಷದ ಶಿಕ್ಷೆ ಮುಗಿಸಿ ಹೊರಬರುತ್ತಿದ್ದಾರೆ. ಹಾಗಿರುವಾಗ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ಆರೋಪಿಯೊಬ್ಬ, 21 ವರ್ಷಗಳಿಂದ ನ್ಯಾಯಾಂಗ ಬಂಧನದಲ್ಲಿರುವುದು ಎಷ್ಟು ಸರಿ ಎಂಬ ಪ್ರಶ್ನೆಯೊಂದಿಗೆ ಯುವ ವಕೀಲರು ಹೈಕೋರ್ಟ್​ ಮೆಟ್ಟಿಲೇರಿದ್ದಾರೆ.

ಕೋರ್ಟ್​ ನಿರ್ದೇಶನವೇನು?
ಸರ್ಕಾರದ ಪರ ವಕೀಲರು, ಶ್ರೀನಿವಾಸ ಅವರಿಗೆ ಬೆಂಗಳೂರಿನ ಕೇಂದ್ರ ಕಾರಾಗೃಹದ ಮನೋವೈದ್ಯಕಿಯ ವಾರ್ಡ್​ನಲ್ಲಿ ನೀಡಲಾಗಿರುವ ಚಿಕಿತ್ಸೆಗೆ ಸಂಬಂಧಿಸಿದ ದಾಖಲೆಗಳನ್ನು ಗುರುವಾರ ಹೈಕೋರ್ಟ್​ಗೆ ಸಲ್ಲಿಸಿದರು. ಇದನ್ನು ದಾಖಲಿಸಿಕೊಂಡ ನ್ಯಾಯಪೀಠ, ಮುಂದಿನ ವಿಚಾರಣೆ ವೇಳೆಗೆ ಕೆಎಸ್​ಎಲ್​ಎಸ್​ಎಯಿಂದ ಜವಾಬ್ದಾರಿಯುತ ಅಧಿಕಾರಿಯನ್ನು ನಿಯೋಜಿಸಬೇಕು. ಅವರು ಬೆಂಗಳೂರಿನ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ ಕೈದಿಯ ಸ್ಥಿತಿ ಪರಿಶೀಲಿಸಬೇಕು. ಅವರಿಗೆ ಈವರೆಗೆ ಒದಗಿಸಿರುವ ಕಾನೂನು ಮತ್ತು ವೈದ್ಯಕಿಯ ನೆರವಿನ ವಿವರಗಳ ವರದಿ ಸಲ್ಲಿಸಬೇಕು ಎಂದು ನ್ಯಾಯಪೀಠ ಸೂಚಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net