2 ತಿಂಗಳ ಪಡಿತರ ಒಂದೇ ಬಾರಿಗೆ ವಿತರಣೆ: ಆಹಾರ ಇಲಾಖೆ ಕಾರ್ಯದರ್ಶಿ ಎಂ.ಕನಗವಲ್ಲಿ ಹೇಳಿಕೆ- 2 months' ration

ಎಂ.ಕನಗವಲ್ಲಿ
ಎಂ.ಕನಗವಲ್ಲಿ
Published on

ಬೆಂಗಳೂರು: ಅಕ್ಕಿ ದಾಸ್ತಾನು ಮತ್ತು ಸಂಗ್ರಹ ಕಾರ್ಯ ಹಿನ್ನೆಲೆಯಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ (ಎನ್‌ಎಫ್ಎ​​ಸ್​​ಎ) ಆಗಸ್ಟ್-ಸೆಪ್ಟೆಂಬರ್ ತಿಂಗಳ ಪಡಿತರ ಒಂದೇ ಬಾರಿ ಕಾರ್ಡ್‌ದಾರರಿಗೆ ವಿತರಣೆಯಾಗಲಿದೆ.

ಕೇಂದ್ರ ಸರ್ಕಾರದ ಪಾಲಿನ ಪಡಿತರ ಇದಾಗಿದ್ದು, ಕೇಂದ್ರದ ಸೂಚನೆಗೆ ಮೇರೆಗೆ ಬಿಪಿಎಲ್ ಕಾರ್ಡ್‌ದಾರರಿಗೆ ತಲಾ 6 ಕೆಜಿ ರಾಗಿ ಮತ್ತು 4 ಕೆಜಿ ಅಕ್ಕಿ ವಿತರಣೆಯಾಗಲಿದೆ. ಮುಂದಿನ ತಿಂಗಳಲ್ಲಿ ರಾಜ್ಯ ಸರ್ಕಾರದ ಪಾಲಿನ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ಪಡಿತರವನ್ನು ಒಂದೇ ಬಾರಿಗೆ ವಿತರಿಸಲಾಗುವುದು. ಪಡಿತರ ಚೀಟಿದಾರರು 2 ತಿಂಗಳ ಧಾನ್ಯ ಪಡೆಯಲು ತಾಂತ್ರಿಕ ದಾಖಲೀಕರಣಕ್ಕಾಗಿ ಎರಡು ಬಾರಿ ಪ್ರತ್ಯೇಕವಾಗಿ ಬಯೋಮೆಟ್ರಿಕ್ ನೀಡುವುದು ಕಡ್ಡಾಯ. ಸರ್ವರ್ ಸಮಸ್ಯೆ ಉಂಟಾಗದಂತೆ ಕ್ರಮ ಕೈಗೊಳ್ಳಲಾಗುವುದು ಆಹಾರ ಇಲಾಖೆ ಕಾರ್ಯದರ್ಶಿ ಎಂ.ಕನಗವಲ್ಲಿ ತಿಳಿಸಿದ್ದಾರೆ.
ಮೇ ಮತ್ತು ಜೂನ್ ತಿಂಗಳ ಪಡಿತರವನ್ನು ಒಂದೇ ಬಾರಿ ವಿತರಿಸಲಾಗಿತ್ತು. ಪಡಿತರ ವಿತರಣೆಗೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಜಿಲ್ಲಾ, ತಾಲೂಕು ಮಟ್ಟದಲ್ಲಿ ಪಡಿತರ ಕಳ್ಳಸಾಗಣೆ ತಡೆಗೆ ಪೊಲೀಸ್, ಆಹಾರ ಹಾಗೂ ಕಂದಾಯ ಇಲಾಖೆಗಳ ಅಧಿಕಾರಿ, ಸಿಬ್ಬಂದಿ ಒಳಗೊಂಡ ನಿಗ್ರಹ ಪಡೆ ರಚಿಸಬೇಕೆಂದು ಪತ್ರದಲ್ಲಿ ಉಲ್ಲೇಖಿಸಿದ್ದೇನೆ ಎಂದರು.
ಬೆಂಬಲ ಬೆಲೆ ಯೋಜನೆಯಡಿ ಕೇಂದ್ರವು, ಹೆಚ್ಚಿನ ಪ್ರಮಾಣದಲ್ಲಿ ರಾಗಿ ಸೇರಿ ಇತ್ಯಾದಿ ಆಹಾರ ಧಾನ್ಯಗಳನ್ನು ಖರೀದಿ ಮಾಡಿದೆ. ಹೀಗಾಗಿ, 2 ತಿಂಗಳ ಪಡಿತರವನ್ನು ಒಟ್ಟಿಗೆ ಕೊಡಲಾಗುತ್ತಿದೆ. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಮಾಹಿತಿ ಒದಗಿಸಲು ಜಿಲ್ಲಾಧಿಕಾರಿಗಳು ಕ್ರಮ ವಹಿಸಬೇಕು. ಜಿಲ್ಲೆಯ ಜಂಟಿ ನಿರ್ದೇಶಕರು ಮತ್ತು ಉಪನಿರ್ದೇಶಕರು ತಮ್ಮ ವ್ಯಾಪ್ತಿಯ ತಾಲೂಕುಗಳಿಗೆ ಭೇಟಿ ನೀಡಿ ಈ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ಎಲ್ಲ ನ್ಯಾಯಬೆಲೆ ಅಂಗಡಿಗಳಲ್ಲಿ 1967 ಸಹಾಯವಾಣಿ ಸಂಖ್ಯೆಯನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂದು ಸೂಚಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net