15 ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆಲುವು-BDCC

BDCC Election
BDCC Election
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಚುನಾವಣೆ ಫಲಿತಾಂಶ ಪ್ರಕಟ
  • 18 ಕ್ಷೇತ್ರಗಳ ಪೈಕಿ 15 ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆಲುವು
  • ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ಹೇಳಿಕೆ
ಬೆಂಗಳೂರು:ಡಿಸಿಎಂ ಡಿ.ಕೆ.ಶಿವಕುಮಾರ್‌ ನೇತೃತ್ವದಲ್ಲಿ ಬೆಂಗಳೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ (ಬಿಡಿಸಿಸಿ) ಚುನಾವಣೆಯಲ್ಲಿ 18 ಕ್ಷೇತ್ರಗಳ ಪೈಕಿ 15 ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ ಎಂದು ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ಹೇಳಿದ್ದಾರೆ.
ಚಾಮರಾಜಪೇಟೆಯ ಬಿಡಿಸಿಸಿ ಬ್ಯಾಂಕ್‌ನಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ, ಕನಕಪುರ, ಮಾಗಡಿ ಕ್ಷೇತ್ರದಲ್ಲಿ ತಲಾ 2, ಚನ್ನಪಟ್ಟಣದ 1 ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳು ಗೆಲುವು ಕಂಡಿದ್ದಾರೆ. ನಮ್ಮ ಜೊತೆ ಕೈಜೋಡಿಸಿದ್ದ ಸೋಮಶೇಖರ್ ಸಹ ಗೆದ್ದಿದ್ದಾರೆ. ಬೆಂಗಳೂರು ಉತ್ತರ ಜಿಲ್ಲೆಯ ಹೊಸಕೋಟೆ 2, ದೇವನಹಳ್ಳಿ, ದೊಡ್ಡಬಳ್ಳಾಪುರ, ಆನೇಕಲ್, ಬೆಂಗಳೂರು ಉತ್ತರ ಕ್ಷೇತ್ರದ 1 ಕ್ಷೇತ್ರದಲ್ಲಿ ಮತ್ತು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ.ರೇವಣ್ಣ ಸಹಕಾರದಿಂದ ಇತರ 1 ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಯಭೇರಿ ಬಾರಿಸಿದ್ದಾರೆ ಎಂದರು.
ನೆಲಮಂಗಲ, ಸೋಲೂರು ಕ್ಷೇತ್ರದ 2 ಸ್ಥಾನಗಳನ್ನು ಬಿಜೆಪಿ ಸಹಕಾರದೊಂದಿಗೆ ಜೆಡಿಎಸ್ ಅಭ್ಯರ್ಥಿಗಳು ಗೆದ್ದಿದ್ದಾರೆ. ಡಿಸಿಎಂ ಡಿಕೆಶಿ, ಸಚಿವರಾದ ರಾಮಲಿಂಗಾರೆಡ್ಡಿ, ಕೆ.ಎಚ್.ಮುನಿಯಪ್ಪ, ಕೃಷ್ಣಬೈರೇಗೌಡ. ಶಾಸಕರಾದ ಶಿವಣ್ಣ, ಶರತ್‌ಬಚ್ಚೇಗೌಡ, ಇಕ್ಬಾಲ್ ಹುಸೇಸ್, ಬಾಲಕೃಷ್ಣ, ಸಿ.ಪಿ. ಯೋಗೇಶ್ವರ್, ಶ್ರೀನಿವಾಸ್, ಮುಖಂಡರಾದ ಆರ್.ಕೆ.ರಮೇಶ್, ವೆಂಕಟರಮಣಪ್ಪ ಸೇರಿ ಇತರ ಮುಖಂಡರ ಸಹಕಾರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಪ್ರಾಬಲ್ಯ ಸಾಧಿಸಿದ್ದಾರೆ ಎಂದು ಡಿ.ಕೆ.ಸುರೇಶ್ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಸಚಿವ ಮಂಕಾಳ ಎಸ್.ವೈದ್ಯ, ಎಂಎಲ್ಸಿ ರವಿ, ಶಾಸಕ ಶರತ್‌ಬಚ್ಚೇಗೌಡ ಮತ್ತಿತರರಿದ್ದರು.
36 ವಿಧಾನಸಭಾ ಕ್ಷೇತ್ರದ ಬ್ಯಾಂಕ್:
ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ ಮತ್ತು ಬೆಂಗಳೂರು ನಗರ ಜಿಲ್ಲೆಗಳ ಒಟ್ಟು 36 ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬರಲಿರುವ ಬಿಡಿಸಿಸಿ ಬ್ಯಾಂಕ್, ಹಲವು ಇತಿಹಾಸ ಹೊಂದಿದೆ. ಅನೇಕ ಏಳು ಬೀಳು ಕಂಡಿದೆ. ಪ್ರಸ್ತುತ ಉತ್ತಮವಾಗಿ ಆಡಳಿತ ನಡೆಸಿಕೊಂಡು ಬಂದಿರುವ ಬ್ಯಾಂಕ್‌ನಿಂದ ರೈತರಿಗೆ ಮತ್ತು ಗ್ರಾಹಕರಿಗೆ ಉತ್ತಮ ಸೇವೆ ಒಗಿಸುವುದಾಗಿ ಡಿ.ಕೆ.ಸುರೇಶ್ ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net