ಬೇಲೂರು ಕ್ಷೇತ್ರದಲ್ಲಿ ಈಗಾಗಲೇ ಶೇ.100 ಎನ್ಯುಮರೇಷನ್ ಫಾರ್ಮ್ ವಿತರಿಸಲಾಗಿದ್ದು
ಬೇಲೂರು: ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಬೇಲೂರು ಕ್ಷೇತ್ರದಲ್ಲಿ ಈಗಾಗಲೇ ಶೇ.100 ಎನ್ಯುಮರೇಷನ್ ಫಾರ್ಮ್ ವಿತರಿಸಲಾಗಿದ್ದು, ಪ್ರಸ್ತುತ 1,11,423 ಫಾರ್ಮ್‌ಗಳ ಡಿಜಿಟಲೀಕರಣ ಪೂರ್ಣಗೊಂಡಿದೆ ಎಂದು ಬೇಲೂರು ವಿಧಾನಸಭಾ ಕ್ಷೇತ್ರದ ಇಆರ್‌ಒ ರಜನಿಕಾಂತ್ ಮಾಹಿತಿ ನೀಡಿದರು.
ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ(ಎಸ್‌ಐಆರ್) ಸಂಬಂಧ ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ವಿವಿಧ ಪಕ್ಷಗಳ ಬಿಎಲ್‌ಎಗಳ ಸಭೆಯಲ್ಲಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಒಟ್ಟು 2,04,786 ಮತದಾರರಿದ್ದು, 270 ಮತಗಟ್ಟೆಗಳನ್ನು ಗುರುತಿಸಲಾಗಿದೆ. ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿಯನ್ನು ಸಂಪೂರ್ಣ ನವೀಕರಿಸುವ ಕಾರ್ಯ ನಡೆಯುತ್ತಿದ್ದು, ಜು.18 ರಿಂದ 20 ರೊಳಗೆ ಶೇ.100 ಡಿಜಿಟಲೀಕರಣ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಪರಿಶೀಲನೆ ಸಂದರ್ಭ 421 ಜನರನ್ನು ಗೈರು ಎಂದು ಗುರುತಿಸಲಾಗಿದ್ದು, 1,914 ಜನ ಬೇರೆಡೆಗೆ ಸ್ಥಳಾಂತರಗೊಂಡಿರುವ ಬಗ್ಗೆ ದಾಖಲಾಗಿದೆ. 3,387 ಜನರು ಮೃತಪಟ್ಟಿರುವುದು ದೃಢಪಟ್ಟಿದೆ ಎಂದ ಅವರು, ಬಿಎಲ್‌ಒಗಳು ಮನೆಗಳಿಗೆ ಭೇಟಿ ನೀಡಿ ಅರ್ಜಿ ವಿತರಿಸದಿದ್ದರೆ ಅಥವಾ ಅರ್ಜಿ ಭರ್ತಿ ಮಾಡುವಲ್ಲಿ ಗೊಂದಲವಾದರೆ ಸಾರ್ವಜನಿಕರು ನೇರವಾಗಿ ಸಹಾಯಕ ಚುನಾವಣಾ ನೋಂದಣಾಧಿಕಾರಿ ಅಥವಾ ಚುನಾವಣಾ ನೋಂದಣಿ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಹೇಳಿದರು.
ತಹಸೀಲ್ದಾರ್ ಶ್ರೀಧರ್ ಕಂಕನವಾಡಿ ಮಾತನಾಡಿ, ಬೇಲೂರು ಕ್ಷೇತ್ರದಲ್ಲಿ ಪರಿಷ್ಕರಣೆ ಕಾರ್ಯ ವೇಗವಾಗಿ ನಡೆಯುತ್ತಿದೆ. ಈವರೆಗೆ ಒಟ್ಟು 1,11,423 ಎನ್ಯುಮರೇಷನ್ ಅರ್ಜಿಗಳನ್ನು ಯಶಸ್ವಿಯಾಗಿ ಡಿಜಿಟಲೀಕರಣ ಗೊಳಿಸಲಾಗಿದೆ. ಅರ್ಜಿಗಳ ಡಿಜಿಟಲೀಕರಣದ ಪ್ರಗತಿಯಲ್ಲಿ ಜಿಲ್ಲೆಯಲ್ಲಿ ಅರಸೀಕೆರೆ ಪ್ರಥಮ ಸ್ಥಾನದಲ್ಲಿದ್ದು, ಬೇಲೂರು ಎರಡನೇ ಸ್ಥಾನದಲ್ಲಿದೆ. ನಿಗದಿತ ಅವಧಿಯೊಳಗೆ ಕೆಲಸ ಪೂರ್ಣಗೊಳಿಸಿ ಶೇ.100 ಡಿಜಿಟಲೀಕರಣ ಸಾಧಿಸಲು ಅಧಿಕಾರಿಗಳು, ಬಿಎಲ್‌ಒಗಳು ಹಾಗೂ ಸಿಬ್ಬಂದಿ ಶ್ರಮಿಸುತ್ತಿದ್ದಾರೆ ಎಂದರು.
ಬಿಎಸ್‌ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಗಂಗಾಧರ್ ಬಹುಜನ್ ಮಾತನಾಡಿ, ಪಡುವಳಲು ಬೂತ್‌ನಲ್ಲಿ ಎರಡು ಅರ್ಜಿ ಕೊಡಿ ಎಂದಿದ್ದರೂ ಕೊಡದೆ ಬಿಎಲ್‌ಒಗಳೇ ಆಧಾರ್ ಕಾರ್ಡ್ ಪಡೆದು ಅರ್ಜಿಗಳನ್ನು ತುಂಬುತ್ತಿರುವುದು ಎಷ್ಟು ಸರಿ. ಅರ್ಜಿ ತುಂಬುವ ಸಂದರ್ಭ ತಪ್ಪಾದರೆ ಯಾರೂ ಹೊಣೆ. ತಪ್ಪು ಮಾಹಿತಿ ಇದ್ದರೆ ದಂಡ ವಿಧಿಸಲಾಗುವುದು ಎಂದು ಚುನಾವಣಾ ಆಯೋಗ ಹೇಳಿದೆ. ಆದರೆ, ಇಲ್ಲಿ ಬಿಎಲ್‌ಒಗಳು ತಪ್ಪು ಮಾಡಿದರೆ ಮತದಾರರಿಗೆ ಶಿಕ್ಷೆಯಾಗುತ್ತದೆ. ಈ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕು ಎಂದರು.
ಕಾಂಗ್ರೆಸ್ ಬಿಎಲ್‌ಒ ಜಮಾಲ್, ಬಿಜೆಪಿ ಬಿಎಲ್‌ಒ ರಂಗನಾಥ್, ಬಿಜೆಪಿ ತಾಲೂಕು ಅಧ್ಯಕ್ಷ ಸಂಜಯ್ ಕೌರಿ, ಬಿಎಸ್‌ಪಿ ತಾಲೂಕು ಅಧ್ಯಕ್ಷ ಪ್ರಕಾಶ್, ಪುರಸಭೆ ಮುಖ್ಯಾಧಿಕಾರಿ ಬಸವರಾಜ್ ಸಿಗ್ಗಾವಿ, ಕಂದಾಯಾಧಿಕಾರಿ ಗೋಪಿ, ಆರ್‌ಒ ಲಕ್ಷ್ಮಣ್, ಚುನಾವಣಾ ಶಿರಸ್ತೇದಾರ್ ದೇವರಾಜ್, ಸಿಬ್ಬಂದಿ ರಾಘವೇಂದ್ರ ಇದ್ದರು.