

ಪ್ರಮುಖ ಮುಖ್ಯಾಂಶಗಳು
ವರದಕ್ಷಿಣೆ ಪಡೆಯುವುದು, ನೀಡುವುದು ಎರಡಕ್ಕೂ ಕಾನೂನಾತ್ಮಕವಾಗಿ ನಿಷೇಧವಿದ್ದರೂ ಕಡಿವಾಣ ಇಲ್ಲದಂತಾಗಿದೆ. ನೇರವಾಗಿ ವರದಕ್ಷಿಣೆ ಪಡೆಯದಿದ್ದರೂ ವಿವಿಧ ಆಚರಣೆ, ಉಡುಗೊರೆ ಹೆಸರಿನಲ್ಲಿ ದುಬಾರಿ ವೆಚ್ಚಗಳನ್ನು ಮಾಡಿಸುವುದು ತಪ್ಪುತ್ತಿಲ್ಲ. ಅದರಲ್ಲೂ ಬಂಜಾರ ಸಮುದಾಯದಲ್ಲಿ ವರದಕ್ಷಿಣೆ ಮತ್ತು ದುಬಾರಿ ಮದುವೆಗಳಿಂದ ಪಾಲಕರು ಮಗಳ ಮದುವೆಗೆಂದು ಮಾಡಿದ ಸಾಲ ತೀರಿಸಲಾಗದ ಸ್ಥಿತಿ ನಿರ್ಮಾಣವಾಗಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ರಾಜ್ಯದಲ್ಲೇ ಮೊದಲ ಬಾರಿಗೆ ‘ವರದಕ್ಷಿಣೆ ಹಟಾವೋ-ತಾಂಡಾ ಬಚಾವೋ’ ಆಂದೋಲನವನ್ನು ಜಿಲ್ಲೆಯ ಬಂಜಾರ ಸಮುದಾಯ ಆರಂಭಿಸಿದೆ.
ಕರ್ನಾಟಕ ಪ್ರದೇಶ ಬಂಜಾರ (ಲಂಬಾಣಿ) ಸೇವಾ ಸಂಘದ ಜಿಲ್ಲಾ ಘಟಕದ ನೇತೃತ್ವದಲ್ಲಿ ಈ ಆಂದೋಲನ ಜಾರಿಗೆ ಬಂದಿದೆ. ನಾಲ್ಕು ತಿಂಗಳ ಕಾಲ ಜಿಲ್ಲೆಯ ಒಟ್ಟು 35 ತಾಂಡಾಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸಲಾಗಿದೆ. ಜು.30ರಂದು ಯರಗಟ್ಟಿ ಪಟ್ಟಣದಲ್ಲಿ ತಾಂಡಾ ಪ್ರಮುಖರ ಸಭೆ ನಡೆಸಿ ‘ವರದಕ್ಷಿಣೆ ನಿಷೇಧ’ ಠರಾವು ಮಂಡಿಸಲಾಗಿದೆ. ಈ ನಿರ್ಣಯದ ಪ್ರಕಾರ ಯಾರೇ ವರದಕ್ಷಿಣೆ ಪಡೆದು ಮದುವೆ ಮಾಡಿಕೊಂಡಲ್ಲಿ 11 ಲಕ್ಷ ರೂ. ದಂಡ ಪಾವತಿಸಬೇಕಾಗುತ್ತದೆ ಎಂದು ಘೊಷಿಸಲಾಗಿದೆ.
ಸಮುದಾಯದಲ್ಲಿ ವಧುವಿನ ಕಡೆಯವರು ವರನಿಗೆ ಮಾತ್ರವಲ್ಲ, ವರನ ತಾಯಿಗೂ ಚಿನ್ನ ಕೊಡಿಸಬೇಕಿತ್ತು. ಇದರಿಂದ ವಧುವಿನ ಪಾಲಕರು ಮದುವೆಗೆ ಕನಿಷ್ಠ 6 ತೊಲ ಚಿನ್ನ ಖರೀದಿಸಬೇಕಿತ್ತು. ಮದುವೆ ಖರೀದಿಗೆ ಎರಡೂ ಕಡೆಯಿಂದ ತಂಡೋಪತಂಡವಾಗಿ ಹಿರಿಯರು ಬರುತ್ತಿದ್ದರು. ಇದು ಕೂಡ ಮದುವೆ ಖರ್ಚನ್ನು ಹೆಚ್ಚಿಸಿತ್ತು. ಮದುವೆಗೆ ಸಮಾನವಾಗಿ ಅದ್ದೂರಿ ನಿಶ್ಚಿತಾರ್ಥ ಮಾಡಿಕೊಡಬೇಕಿತ್ತು. ವರದಕ್ಷಿಣೆಗಾಗಿಯೇ ಕನಿಷ್ಠ 10 ಲಕ್ಷ ರೂ. ನೀಡಬೇಕಿತ್ತು ಎಂದು ಸಮುದಾಯದ ಮುಖಂಡರು ತಿಳಿಸಿದ್ದಾರೆ.
ವರದಕ್ಷಿಣೆ ಮಾತ್ರವಲ್ಲದೆ ಬಾಲ್ಯವಿವಾಹ, ಆಡಂಬರದ ಮದುವೆ, ದುಬಾರಿ ಖರ್ಚಿನ ನಿಶ್ಚಿತಾರ್ಥ, ಡಿಜೆ ನಿಷೇಧ ಮುಂತಾದ ನಿರ್ಣಯ ತೆಗೆದು ಕೊಳ್ಳಲಾಗಿದೆ. ಈ ನಿರ್ಣಯಗಳ ಅನುಷ್ಠಾನದ ಸಂಪೂರ್ಣ ಜವಾಬ್ದಾರಿ ತಾಂಡಾಗಳ ಮುಖಂಡರಾದ ಕಾರಬಾರಿ ಹಾಗೂ ಉಪ ಮುಖಂಡರಾದ ಡಾವ್ಗಳದ್ದಾಗಿರುತ್ತದೆ. ಎಲ್ಲ ತಾಂಡಾ ನಿವಾಸಿಗಳು ಇದಕ್ಕೆ ಒಪ್ಪಿಗೆ ನೀಡಿದ್ದು, ಪ್ರತಿ ತಾಂಡಾದಲ್ಲೂ ನಾನುಸಾದ ಮಹಾರಾಜ, ಸಂತ ಸೇವಾಲಾಲ್ ಮಹಾರಾಜ, ನೀಲಾಸಾದ ಮಹಾರಾಜ, ಆದಿಶಕ್ತಿ ಜಗದಂಬಾ, ಆದಿಶಕ್ತಿ ರೇಣುಕಾದೇವಿ ಹೆಸರಿನಲ್ಲಿ ನಿರ್ಣಯ ಪಾಲಿಸುವುದಾಗಿ ಪ್ರತಿಜ್ಞೆ ಸ್ವೀಕರಿಸಿದ್ದಾರೆ.
ಹೆಣ್ಣು ಹೆತ್ತ ಪಾಲಕರು ಕಣ್ಣೀರಿನಲ್ಲಿ ಕೈ ತೊಳೆಯುವ ಪರಿಸ್ಥಿತಿ ಇತ್ತು. ಸಮುದಾಯದಲ್ಲಿ ವರದಕ್ಷಿಣೆ ಮತ್ತು ದುಬಾರಿ ಮದುವೆ ಪ್ರತಿಷ್ಠೆಯಾಗಿ ಪರಿಣಮಿಸಿತ್ತು. ಹೀಗಾಗಿ, ಇದಕ್ಕೆ ಕಡಿವಾಣ ಹಾಕುವ ನಿರ್ಣಯ ಕೈಗೊಂಡಿದ್ದೇವೆ. ಯಾರಾದರೂ ನಿಯಮ ಮೀರಿದರೆ 11 ಲಕ್ಷ ರೂ. ದಂಡ ವಿಧಿಸುವುದಲ್ಲದೆ, ವರದಕ್ಷಿಣೆ ನಿಷೇಧ ಕಾನೂನಿನ ಮೂಲಕ ಅವರಿಗೆ ಪಾಠ ಕಲಿಸುತ್ತೇವೆ. ವಿವಾಹಪೂರ್ವ ಮತ್ತು ನಂತರದ ಕಾರ್ಯಕ್ರಮಗಳನ್ನೂ ದುಂದುವೆಚ್ಚ ಇಲ್ಲದೆ ಸರಳವಾಗಿ ಮುಗಿಸಬೇಕು. ಇದೇ ವಾರದಲ್ಲಿ ಮೂರು ನಿಶ್ಚಿತಾರ್ಥಗಳು ಸರಳವಾಗಿ ನಡೆದಿವೆ.
| ಮಾನಪ್ಪ ರಾಥೋಡ್ ಜಿಲ್ಲಾಧ್ಯಕ್ಷ, ಬಂಜಾರ (ಲಂಬಾಣಿ) ಸೇವಾ ಸಂಘ