21ರಿಂದ ರಾಜ್ಯಾದ್ಯಂತ ವಿಜಯಸಂಕಲ್ಪ ಯಾತ್ರೆ

21ರಿಂದ ರಾಜ್ಯಾದ್ಯಂತ ವಿಜಯಸಂಕಲ್ಪ ಯಾತ್ರೆ
Published on

ರಾಮನಗರ: ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರದ ಸಾಧನೆಗಳನ್ನು ಮನೆಮನೆಗೆ ತಲುಪಿಸುವ ನಿಟ್ಟಿನಲ್ಲಿ ಜ.21ರಿಂದ 29ರವರೆಗೆ 9 ದಿನ ವಿಜಯ ಸಂಕಲ್ಪ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ.ಎನ್.ಅಶ್ವತ್ಥ ನಾರಾಯಣ ತಿಳಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಜಯಪುರದ ಸಿಂಧಗಿಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಯಾತ್ರೆಗೆ ಚಾಲನೆ ನೀಡಲಿದ್ದಾರೆ. ರಾಜ್ಯದ 39 ಸಂಘಟನಾ ಜಿಲ್ಲೆಗಳ ಒಟ್ಟು 58 ಸಾವಿರ ಬೂತ್‌ಗಳಲ್ಲಿ ಕಾರ್ಯಕ್ರಮ ನಡೆಯಲಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೆ ತಂದಿರುವ ಜನೋಪಯೋಗಿ ಕಾರ್ಯಕ್ರಮಗಳ ಮಾಹಿತಿಯನ್ನು ಕರಪತ್ರಗಳ ಮೂಲಕ ಮನೆ ಮನೆಗೆ ತಲುಪಿಸಲಾಗುವುದು. ಈ ಸಂಬಂಧ ಈಗಾಗಲೇ ಪೂರ್ವಭಾವಿ ಸಭೆ ನಡೆಸುವ ಮೂಲಕ ಎಲ್ಲ ಹಂತದ ತಯಾರಿ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ಮುಖಂಡರಾದ ರವೀಶ್, ಗೌತಮ್‌ಗೌಡ, ಶಿವಮಾದು, ಮಲವೇಗೌಡ, ರಾಜೇಶ್, ರುದ್ರದೇವರು, ಮುರಳೀಧರ್, ಹುಲುವಾಡಿ ದೇವರಾಜು ಮುಂತಾದವರು ಇದ್ದರು.

ಒಂದು ಕೋಟಿ ಸದಸ್ಯತ್ವ ಅಭಿಯಾನ: ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎನ್ನುವ ನಿಟ್ಟಿನಲ್ಲಿ ಎಲ್ಲ ಮಾಧ್ಯಮಗಳ ಮೂಲಕ ಪ್ರಚಾರ ಕೈಗೊಳ್ಳಲಾಗುತ್ತಿದೆ. ರಾಜ್ಯದಲ್ಲಿ ಒಂದು ಕೋಟಿ ಫಲಾನುಭವಿಗಳ ಮನೆಗೆ ಮಾಹಿತಿ ತಲುಪಿಸಲಾಗುತ್ತದೆ. ಇದರ ಜತೆಗೆ ಒಂದು ಕೋಟಿ ಸದಸ್ಯತ್ವ ಮಾಡಿಸುವ ಅಭಿಯಾನ ಸಹ ಕೈಗೊಳ್ಳಲಾಗುತ್ತಿದೆ. ಮಿಸ್ಡ್ ಕಾಲ್ ಮೂಲಕ ಸದಸ್ಯತ್ವ ನೋಂದಣಿ ನಡೆಯಲಿದ್ದು, ಇದರ ಮಾಹಿತಿಯನ್ನು ಪ್ರತಿನಿತ್ಯ ವೆಬ್‌ಸೈಟ್ ಮೂಲಕ ಹಂಚಿಕೊಳ್ಳಲಾಗುವುದು ಎಂದು ಅಶ್ವತ್ಥನಾರಾಯಣ ತಿಳಿಸಿದರು.

ರಾಜ್ಯ ಮತ್ತು ದೇಶಕ್ಕೆ ಬಿಜೆಪಿಯೇ ಭರವಸೆ, ಈ ಹಿನ್ನೆಲೆಯಲ್ಲಿ ಪಕ್ಷವನ್ನು ಅತಿ ಹೆಚ್ಚು ಮತಗಳು ಹಾಗೂ ಸೀಟುಗಳಲ್ಲಿ ಗೆಲ್ಲುವಂತೆ ಮಾಡುವುದೇ ಈ ಅಭಿಯಾನದ ಉದ್ದೇಶವಾಗಿದ್ದು, ಕೇಂದ್ರ, ರಾಜ್ಯದ ಸಚಿವರು ಸೇರಿ ಎಲ್ಲ ಹಂತದ ನಾಯಕರು, ಕಾರ್ಯಕರ್ತರು ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net