ವಿಶ್ವದಲ್ಲೇ ರಾಜ್ಯ ಪೊಲೀಸ್ ಪಡೆ ಅತ್ಯುತ್ತಮವಾದ ಪಡೆ: ಅಲೋಕ್ ಮೋಹನ್ ಮೆಚ್ಚುಗೆ

DGP Alok Mohan
Published on

ಬೆಂಗಳೂರು: ವಿಶ್ವದಲ್ಲೇ ಕರ್ನಾಟಕ ರಾಜ್ಯ ಪೊಲೀಸ್ ಪಡೆ ಅತ್ಯುತ್ತಮವಾದ ಪಡೆಯಾಗಿದೆ ಎಂದು ನಿರ್ಗಮಿತ ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕೋರಮಂಗಲದ ಕೆಎಸ್‌ಆರ್‌ಪಿ ಮೈದಾನದಲ್ಲಿ ಪೊಲೀಸ್ ಇಲಾಖೆ ಆಯೋಜಿಸಿದ್ದ ಡಿಜಿ-ಐಜಿಪಿ ಪ್ರಶಂಸನಾ ಸೇವಾ ಪದಕ ಪ್ರದಾನ ಮತ್ತು ಕವಾಯಿತು ಕಾರ್ಯಕ್ರಮದಲ್ಲಿ ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು.

ರಾಜ್ಯ ಪೊಲೀಸ್ ಇಲಾಖೆಯಲ್ಲಿ ೩೮ ವರ್ಷಗಳು ಸೇವೆ ಸಲ್ಲಿಸಿದ್ದಕ್ಕೆ ಗೌರವವಿದೆ. ರಾಜ್ಯ ಪೊಲೀಸ್ ಕೇಂದ್ರ ಕಚೇರಿ, ಸಿಐಡಿ, ಬೆಂಗಳೂರು ನಗರ, ಐಜಿಪಿ ವಲಯ ಹಾಗೂ ಜಿಲ್ಲೆ ಹೀಗೆ ಪ್ರತಿ ವಿಭಾಗದಲ್ಲಿ ನಾನು ಕೆಲಸ ಮಾಡಿದ್ದೇನೆ. ವಿದೇಶದಲ್ಲಿ ಸಹ ರಾಜ್ಯ ಪೊಲೀಸ್ ಇಲಾಖೆಯಿಂದ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸಿದ್ದೇನೆ ಎಂದು ತಿಳಿಸಿದರು.

ನನಗೆ ಕೃತಜ್ಞತಾಭಾವವಿದೆ:

ದೇಶ-ವಿದೇಶಗಳಲ್ಲಿ ಪೊಲೀಸ್ ಇಲಾಖೆಯನ್ನು ನೋಡಿದಾಗ ಕರ್ನಾಟಕ ಪೊಲೀಸ್ ಪಡೆ ಉತ್ತಮ ಪಡೆಯಾಗಿದೆ. ನಮಗೆ ಜರ್ಮನ್ ದೇಶದ ಪೊಲೀಸ್ ಇಲಾಖೆ ಜತೆ ಸಹಭಾಗಿತ್ವವಿತ್ತು. ಆಗ ಆ ದೇಶದ ಪೊಲೀಸ್ ಅಧಿಕಾರಿಗಳು ಹಾಗೂ ಸಂಸದರ ತಂಡವು ರಾಜ್ಯಕ್ಕೆ ಭೇಟಿ ನೀಡಿ ಪೊಲೀಸ್ ಕಾರ್ಯನಿರ್ವಹಣೆ ಕುರಿತು ಮಾಹಿತಿ ಪಡೆದರು. ನಮ್ಮ ರಾಜ್ಯದ ಪೊಲೀಸ್ ಪಡೆ ಕೆಲಸಗಳನ್ನು ನೋಡಿ ಯೂರೋಪಿಯನ್ ದೇಶಗಳಿಗಿಂತ ಅತ್ಯುತ್ತಮ ಪೊಲೀಸ್ ಪಡೆ ಎಂದು ಜರ್ಮನ್ ದೇಶದ ಪ್ರತಿನಿಧಿಗಳು ಪ್ರಶಂಸೆ ವ್ಯಕ್ತಪಡಿಸಿದ್ದರು. ವಿಶ್ವದ ಅತ್ಯುತ್ತಮ ಪೊಲೀಸ್ ಪಡೆಯಾಗಿರುವ ಕರ್ನಾಟಕ ಪೊಲೀಸ್ ಪಡೆಯ ಮುಖ್ಯಸ್ಥನಾಗಿ ಎರಡು ವರ್ಷಗಳು ಸೇವೆ ಸಲ್ಲಿಸಿದ್ದಕ್ಕೆ ನನಗೆ ಕೃತಜ್ಞತಾಭಾವವಿದೆ ಎಂದು ಸ್ಮರಿಸಿದರು.

ಇದೇ ಮೊದಲ ಬಾರಿಗೆ ಡಿಜಿ-ಐಜಿಪಿ ಪದಕ ಪ್ರದಾನ ಮಾಡುತ್ತಿರುವುದಕ್ಕೆ ನನಗೆ ಖುಷಿ ಇದೆ. ಈ ಪುರಸ್ಕಾರಕ್ಕೆ ರಾಜ್ಯದ ಪ್ರತಿಯೊಬ್ಬ ಪೊಲೀಸ್ ಕೂಡ ಅರ್ಹತೆ ಹೊಂದಿದ್ದಾರೆ. ಆದರೆ ಈ ಪದಕಕ್ಕೆ ೨೦೦ ಮಂದಿಯನ್ನು ಮಾತ್ರ ಆಯ್ಕೆ ಮಾಡುವಂತೆ ಸರ್ಕಾರ ನಿಗಪಡಿಸಿದ್ದರಿಂದ ಕೆಲವರಿಗೆ ಮಾತ್ರ ಪುರಸ್ಕಾರ ಸಿಕ್ಕಿದೆ ಎಂದು ಹೇಳಿದರು.

ಪದಕ ಪ್ರದಾನ:

ಇದೇ ವೇಳೆ ಪೊಲೀಸ್ ಇಲಾಖೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ್ದ ೨೦೦ ಮಂದಿ ಅಧಿಕಾರಿ-ಸಿಬ್ಬಂದಿಗೆ ಡಿಜಿ-ಐಜಿಪಿ ಪ್ರಶಂಸನಾ ಪದಕ ಪ್ರದಾನ ಮಾಡಲಾಯಿತು. ಲೋಕಾಯುಕ್ತ ಐಜಿಪಿ ಸುಬ್ರಹ್ಮಣ್ಯೇಶ್ವರ ರಾವ್, ಕೇಂದ್ರ ವಲಯ ಐಜಿಪಿ ಲಾಬೂರಾಮ್, ಕೆಎಸ್‌ಆರ್‌ಪಿ ಐಜಿಪಿ ಸಂದೀಪ್ ಪಾಟೀಲ್, ಬೆಂಗಳೂರು ನಗರ ಹೆಚ್ಚುವರಿ ಆಯುಕ್ತ (ಗುಪ್ತದಳ) ರಮಣ ಗುಪ್ತ, ಉತ್ತರ ವಲಯ ಐಜಿಪಿ ಚೇತನ್ ಸಿಂಗ್ ರಾಥೋಡ್, ಐಜಿಪಿ ತ್ಯಾಗರಾಜನ್, ಸಿಸಿಬಿ ಮುಖ್ಯಸ್ಥ ಡಾ.ಚಂದ್ರಗುಪ್ತ, ದಕ್ಷಿಣ ವಲಯ ಡಿಐಜಿ ಡಾ.ಬೋರಲಿಂಗಯ್ಯ, ಕಲಬುರಗಿ ಆಯುಕ್ತ ಎಸ್.ಡಿ.ಶರಣಪ್ಪ, ಜಂಟಿ ಆಯುಕ್ತ (ಸಂಚಾರ) ಎಂ.ಎನ್.ಅನುಚೇತ್, ಜಂಟಿ ಆಯುಕ್ತರಾದ ಬಿ.ರಮೇಶ್, ಕುಲದೀಪ್ ಕುಮಾರ್.ಆರ್.ಜೈನ್, ಡಿಐಜಿಗಳಾದ ಭೂಷಣ ಬೊರಸೆ, ವಂಶಿಕೃಷ್ಣ, ಎಐಜಿಪಿ ಸಂಜೀವ್ ಪಾಟೀಲ್, ಡಿಸಿಪಿ ಶಿವಪ್ರಕಾಶ್, ಸಿಐಡಿ ಎಸ್ಪಿ ರಾಘವೇಂದ್ರ ಹೆಗಡೆ, ತುಮಕೂರು ಎಸ್ಪಿ ಅಶೋಕ್, ಡಿವೈಎಸ್ಪಿ ಬಿ.ಬಾಲರಾಜ್ ಹಾಗೂ ಎಸಿಪಿ ಟಿ.ಮಹದೇವ್ ಸೇರಿ ಮತ್ತಿತರರು ಪುರಸ್ಕಾರಕ್ಕೆ ಪಾತ್ರರಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net