

ಪಾಂಡವಪುರ: ಪಟ್ಟಣದ ಪಾಂಡವ ಕ್ರೀಡಾಂಗಣದಲ್ಲಿ ಪಾಂಡವ ಪೆಟ್ ಲವರ್ಸ್ ವತಿಯಿಂದ ಆಯೋಜಿಸಿದ್ದ ರಾಜ್ಯ ಮಟ್ಟದ ಶ್ವಾನ ಪ್ರದರ್ಶನ ಕಾರ್ಯಕ್ರಮಕ್ಕೆ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಭಾನುವಾರ ಚಾಲನೆ ನೀಡಿದರು.
ಪಾಂಡವಪುರದಲ್ಲಿ ಇದೇ ಮೊದಲ ಬಾರಿಗೆ ಆಯೋಜಿಸಿದ್ದ ರಾಜ್ಯ ಮಟ್ಟದ ಶ್ವಾನ ಪ್ರದರ್ಶನ ಕಾರ್ಯಕ್ರಮದಲ್ಲಿ ಮಂಡ್ಯ, ಮೈಸೂರು, ರಾಮನಗರ, ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ 35ಕ್ಕೂ ಅಧಿಕ ಜಾತಿ ಶ್ವಾನಗಳು ಭಾಗವಹಿಸಿ ಪ್ರದರ್ಶನ ನೀಡಿದವು. ಪ್ರದರ್ಶನದಲ್ಲಿ ಭಾಗವಹಿಸಲು ಕರೆತಂದಿದ್ದ ಶ್ವಾನಗಳಿಗೆ ಅದರ ಮಾಲೀಕರು ವಿವಿಧ ವಿನ್ಯಾಸದ ವಸ್ತಗಳಿಂದ ಅಲಂಕಾರಗೊಳಿಸಿ ಪ್ರದರ್ಶಿಸಿದರು.
ಶ್ವಾನ ಪ್ರದರ್ಶನದಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿದ ಶ್ವಾನಕ್ಕೆ ಮೊದಲ ಬಹುಮಾನ 1.50 ಲಕ್ಷ ರೂ. ನೀಡಲಾಯಿತು. ಭಾಗವಹಿಸಿದ ಎಲ್ಲ ಶ್ವಾನಗಳಿಗೂ ಸಮಾಧಾನಕರ ಬಹುಮಾನ ನೀಡಲಾಯಿತು.
ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ, ಪಾಂಡವ ಪೆಟ್ ಲವರ್ಸ್ ವತಿಯಿಂದ ನಡೆಯುತ್ತಿರುವ ರಾಜ್ಯ ಮಟ್ಟದ ಶ್ವಾನ ಪ್ರದರ್ಶನಕ್ಕೆ ರಾಜ್ಯದ ನಾನಾ ಭಾಗಗಳಿಂದ 200ಕ್ಕೂ ಅಧಿಕ ಶ್ವಾನಗಳು ಭಾಗವಹಿದ್ದವು. ನಿಯತ್ತಿಗೆ ಹೆಸರಾಗಿರುವ ಶ್ವಾನಗಳ ಪ್ರದರ್ಶನ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಶ್ವಾನ ಪ್ರಿಯರು ಶ್ವಾನಗಳನ್ನು ತಮ್ಮ ಮಕ್ಕಳಂತೆ ಪಾಲನೆ ಪೋಷಣೆ ಮಾಡಿ ಆರೈಕೆ ಮಾಡುತ್ತಾರೆ. ದೇಶದ ದೊಡ್ಡ ಉದ್ಯಮಿಯಾದ ರತನ್ ಟಾಟಾ ಅವರು ಸಾವನ್ನಪ್ಪಿದ್ದ ಸಂದರ್ಭದಲ್ಲಿ ಅವರು ಸಾಕಿದ್ದ ಶ್ವಾನ ಹೋಗಿ ಅವರ ಮೃತ ದೇಹಕ್ಕೆ ಮುತ್ತಿಡುತ್ತದೆ ಎಂದರೆ ಮನುಷ್ಯರ ಮೇಲೆ ಶ್ವಾನಗಳ ಪ್ರೀತಿ ಎಷ್ಟಿದೆ ಎನ್ನುವುದನ್ನು ನಾವೆಲ್ಲರು ಮನಗಾಣಬೇಕು ಎಂದರು.
ಕಾರ್ಯಕ್ರದಲ್ಲಿ ಮನ್‌ಮುಲ್ ನಿರ್ದೇಶಕ ಸಿ.ಶಿವಕುಮಾರ್, ಪುರಸಭೆ ಅಧ್ಯಕ್ಷೆ ಜ್ಯೋತಿಲಕ್ಷ್ಮೀ, ಸದಸ್ಯ ಆರ್.ಸೋಮಶೇಖರ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಚಲುವೇಗೌಡ, ಬಿಜೆಪಿ ಮುಖಂಡ ಎಚ್.ಎನ್.ಮಂಜುನಾಥ್, ತೀರ್ಪುಗಾರರಾದ ವಿಶ್ವಾಸ್ ಬಸವರಾಜು, ಶೇಖರ್‌ರಾವ್, ಆಯೋಜಕರಾದ ಯೋಗರಾಜು, ಕಿರಣ್ ರಾಜ್, ಚೇತನ್, ರಾಜೇಶ್, ಸೋಮು, ಕುಮಾರ ಸೇರಿದಂತೆ ಹಲವರು ಭಾಗವಹಿಸಿದ್ದರು.