ನಿಟ್ಟೂರಿನ ರಾಜ್ಯ ಮಹಿಳಾ ನಿಲಯದಲ್ಲಿ ಮದುವೆ ಸಂಭ್ರಮ

udp-20-state home 2
Published on

ಉಡುಪಿ: ನಿಟ್ಟೂರು ಸರ್ಕಾರಿ ರಾಜ್ಯ ಮಹಿಳಾ ನಿಲಯ ಸತತ 2ನೇ ವರ್ಷವೂ ಮದುವೆ ಮನೆಯಾಗಿ ಪರಿವರ್ತನೆಗೊಂಡಿದ್ದು, ಬುಧವಾರ ಎರಡು ಜೋಡಿಗಳು ಹೊಸ ಬದುಕಿಗೆ ಪಾದಾರ್ಪಣೆ ಮಾಡಿದರು.

ತುಮಕೂರು ಮೂಲದ ಶೀಲಾ (32) ಮೊಳಹಳ್ಳಿಯ ಕೃಷಿಕ ಗಣೇಶ್​ ಶಾಸ್ತ್ರಿ (42) ಹಾಗೂ ಭದ್ರಾವತಿ ಮೂಲದ ಕುಮಾರಿ (21) ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದ ಸತ್ಯನಾರಾಯಣ ಭಟ್​ ಅವರ ಕೈಹಿಡಿದರು. ಸ್ವತ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಅವರೇ ಬಂದು ಕನ್ಯಾದಾನ ನೆರವೇರಿಸಿ, ಉಡುಗೊರೆ ನೀಡಿದರು. ಉಡುಪಿ ಜಿಲ್ಲಾಡಳಿತ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳೇ ಮುಂದೆ ನಿಂತು ಶಾಸೊಕ್ತವಾಗಿ ವಿವಾಹ ನಡೆಸಿಕೊಟ್ಟರು.

ಈ ಸಂದರ್ಭದಲ್ಲಿ ಮಾತನಾಡಿದ ನಿಲಯ ಅಧೀಕ್ಷಕಿ ಪುಷ್ಟಾರಾಣಿ, ಯುವಕ ಮತ್ತು ಯುವತಿಗೆ ಒಪ್ಪಿಕೊಂಡ ಬಳಿಕ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ, ವರರ ಆರೋಗ್ಯದೃಢೀಕರಣ ಹಾಗೂ ಪೊಲೀಸ್​ ವರದಿಯೊಂದಿಗೆ ಊರಿನವರಿಂದ ನಡೆದ ಪ್ರಮಾಣಪತ್ರ ಮತ್ತು ಆದಾಯ ಪ್ರಮಾಣಪತ್ರ ತೆಗೆದುಕೊಳ್ಳಲಾಗಿದೆ. ಇಲಾಖೆಯ ಪರಿವೀಕ್ಷಣಾಧಿಕಾರಿಗಳಿಂದ ಗೃಹ ತನಿಖೆ ವರದಿ ಪಡೆದು ಬುಧವಾರ ವಿವಾಹ ನೋಂದಣಿ ಮಾಡಲಾಗಿದೆ. ಹುಡುಗಿ ಖಾತೆಯಲ್ಲಿ ಸರ್ಕಾರದಿಂದ 15 ಸಾವಿರ ರೂ. ನಿಖರ ಠೇವಣಿ ಇಡಲಾಗಿದ್ದು, 3 ವರ್ಷದ ಬಳಿಕ ಈ ಹಣವನ್ನು ಮಧು ಬಳಸಿಕೊಳ್ಳಬಹುದು. ಮಹಿಳಾ ನಿಲಯದಲ್ಲಿ ಈವರೆಗೆ 24 ಮದುವೆಗಳು ನಡೆದಿವೆ. ಮದುವೆ ಬಳಿಕವೂ ಯುವತಿ 3 ವರ್ಷ ಮಹಿಳಾ ನಿಲಯದ ಪರಿವೀಕ್ಷಣೆಗೆ ಒಳಪಡಲಿದ್ದಾಳೆ ಎಂದು ತಿಳಿಸಿದರು.

ದಾನಿಗಳ ನೆರವು
ಮದುವೆಗಾಗಿ ಸರ್ಕಾರದಿಂದ 5 ಸಾವಿರ ರೂ. ನೀಡಲಾಗುತ್ತದೆ. ಉಳಿದ ಖರ್ಚುವೆಚ್ಚಗಳಿಗೆ ದಾನಿಗಳ ನೆರವು ಪಡೆಯಲಾಗಿದೆ. ಅಂಬಲಪಾಡಿ ದೇವಸ್ಥಾನದಿಂದ 300 ಮಂದಿಗೆ ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು. ಸಹೃಹಯರ ಬಳಗದವರು ಇಬ್ಬರೂ ಮದುಮಕ್ಕಳಿಗೆ ಚಿನ್ನದ ಬೆಂಡೊಲೆ, ಮಾಜಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್​, ಮದುಮಗಳಿಗೆ ಸೀರೆ ನೀಡಿದ್ದಾರೆ. ಐಸ್​ಕ್ರೀಂ, ಮದುಮಗಳ ಮೇಕಪ್​, ತರಕಾರಿ, ತಂಪುಪಾನೀಯ, ಸ್ವಾಗತ ಅಲಂಕಾರಕ್ಕೆ ದಾನಿಗಳು ಸಹಕರಿಸಿದ್ದಾರೆ.

ಶಾಸಕ ಯಶ್​ ಪಾಲ್​ ಸುವರ್ಣ, ಅಪರ ಜಿಲ್ಲಾಧಿಕಾರಿ ಮಮತಾ ದೇವಿ, ಪೊಲೀಸ್​ ವರಿಷ್ಠಾಧಿಕಾರಿ ಡಾ.ಅರುಣ್​ ಕೆ., ಜಿಪಂ ಸಿಇಒ ಪ್ರಸನ್ನ, ಉಪವಿಭಾಗಾಧಿಕಾರಿ ರಶ್ಮಿ, ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೆಶಕಿ ಶಾಮಲಾ, ಶಿಶು ಅಭಿವೃದ್ಧಿ ಅಧಿಕಾರಿ ವೀಣಾ ವಿವೇಕಾನಂದ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net