

ಬೆಂಗಳೂರು: ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆಗೆ ಸಂಬಂಧಿಸಿದಂತೆ ಹಿಂದಿನ ಸರ್ಕಾರ ನೇಮಿಸಿದ್ದ ಮ್ಯಾಜಿಸ್ಟ್ರೇಟ್, ಪೊಲೀಸರು ತೆಗೆದುಕೊಂಡ ಕ್ರಮ ಸರಿಯಾಗಿದೆ ಎಂದು ನೀಡಿದ್ದ ವರದಿಯನ್ನು ರಾಜ್ಯ ಸರ್ಕಾರ ಯಥಾವತ್ತಾಗಿ ಒಪ್ಪಿಕೊಂಡದ್ದು ಸರಿಯಾದ ಕ್ರಮವಾಗಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ಅವರು, ಕೆಜಿ ಹಳ್ಳಿ, ಡಿಜೆ ಹಳ್ಳಿಯಲ್ಲಿ ಹಿಂಸೆ, ದಾಂಧಲೆ, ಪೊಲೀಸರ ಮೇಲೆ ದಾಳಿ ಹಿನ್ನೆಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಪೊಲೀಸರು ತೆಗೆದುಕೊಂಡ ಕ್ರಮ ಸರಿಯಾಗಿದೆ ಎಂದು ಮ್ಯಾಜಿಸ್ಟ್ರೇಟ್ ವರದಿ ಸಲ್ಲಿಸಿದ್ದಾರೆ.
ಅಂದಿನ ಘಟನೆಗಳೆಲ್ಲ ಮಾಧ್ಯಮಗಳಲ್ಲಿ ಸ್ಪಷ್ಟವಾಗಿ ಕಂಡುಬಂದಿದ್ದವು. ಕಾಂಗ್ರೆಸ್ ಪಕ್ಷದ ಶಾಸಕರ ಮೇಲೆ ದಾಳಿಯಾದರೂ ರಕ್ಷಣೆಗೆ ಅವರ ಪಕ್ಷದವರು ಬರಲಿಲ್ಲ. ಆದರೆ ಗೋಲಿಬಾರ್ ಮಾಡಿದ್ದನ್ನು ಪ್ರಶ್ನಿಸಿದರು.
ಹಿಂದಿನ ಸರ್ಕಾರ ನೇಮಿಸಿದ್ದ ಅಧಿಕಾರಿ ವರದಿಯಿಂದ ಸತ್ಯ ಹೊರಬಂದಿದೆ. ಸರ್ಕಾರ ಅದನ್ನು ಒಪ್ಪಿಕೊಂಡಿದೆ. ಪೊಲೀಸ್ ಠಾಣೆ ಮೇಲೆ ದಾಳಿ ಮಾಡುವುದು ಅಕ್ಷಮ್ಯ ಅಪರಾಧ. ಇಂತಹ ಕೃತ್ಯ ಮರುಳಿಸಬಾರದು. ಸರ್ಕಾರ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಬೊಮ್ಮಾಯಿ ಒತ್ತಾಯಿಸಿದರು.
ಈ ದುರಂತದಲ್ಲಿ ಸಾರ್ವಜನಿಕ ಆಸ್ತಿಪಾಸ್ತಿ ಹಾನಿಯಾಗಿರುವುದಕ್ಕೆ ನೇಮಿಸಿದ್ದ ಕಮಿಷನ್ ಸಲ್ಲಿಸಿದ ಶಿಾರಸುಗಳನ್ನು ಸರ್ಕಾರ ಸ್ವೀಕರಿಸಿ, ಸಾರ್ವಜನಿಕ ಆಸ್ತಿ ಕಟ್ಟಿಕೊಡುವ ಕೆಲಸ ಮಾಡಬೇಕು ಎಂದರು.
ಮುಸ್ಲಿಮ್ ಸಮುದಾಯಕ್ಕೆ 10 ಸಾವಿರ ಕೋಟಿ ರೂ. ಮೀಸಲಿಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿರುವುದು ಅಲ್ಪಸಂಖ್ಯಾತರನ್ನು ಮತ್ತೊಮ್ಮೆ ಯಾಮಾರಿಸುವ ಕೆಲಸ.
ಪರಿಶಿಷ್ಟ ಜಾತಿ, ಪಂಗಡಗಳಿಗೆ ಮೀಸಲಿರಿಸಿದ ಅನುದಾನದಲ್ಲಿ 11 ಸಾವಿರ ಕೋಟಿ ರೂ.ಗಳನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡು ದಲಿತರಿಗೆ ವಂಚಿಸಿದ್ದಾರೆ.
ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಿಸಿದರೆ ಹೆಚ್ಚುವರಿ ವೆಚ್ಚದ ಹೊರೆ ಬೀಳಲಿದೆ ಎಂದು ಏಳನೇ ವೇತನ ಆಯೋಗದ ವರದಿ ತಡವಾಗಲಿ ಎಂದು ಬಯಸುತ್ತಿದ್ದಾರೆ. ಮುಸ್ಲಿಮರ ಓಲೈಕೆಗೆ 10 ಸಾವಿರ ಕೋಟಿ ರೂ. ಅನುದಾನ ಮೀಸಲಿಡುವುದಾಗಿ ಸಿದ್ದರಾಮಯ್ಯ ರಾಜಕೀಯ ಹೇಳಿಕೆ ನೀಡಿದ್ದಾರೆ ಎಂದು ಟೀಕಿಸಿದರು.
ಬಿಜೆಪಿ-ಜೆಡಿಎಸ್ ಮೈತ್ರಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ವಿರೋಧ ಆ ಪಕ್ಷದ ಆಂತರಿಕ ವಿಚಾರವಾಗಿದ್ದು, ಪ್ರತಿಕ್ರಿಯಿಸಲ್ಲ. ಕಾಂಗ್ರೆಸ್ ಸರ್ಕಾರದಲ್ಲಿ ಲಿಂಗಾಯತ ಅಧಿಕಾರಿಗಳಿಗೆ ರಕ್ಷಣೆಯಿಲ್ಲವೆಂಬ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ಉತ್ತರಿಸಲಿ ಎಂದು ಬೊಮ್ಮಾಯಿ ಹೇಳಿದರು.