ಅಮಿತ್ ಷಾ ವಿರುದ್ಧ ರಾಜ್ಯ ಸರ್ಕಾರದ ಪ್ರಾಯೋಜಿತ ಚಳವಳಿ: ಛಲವಾದಿ ಆರೋಪ | Congress party is misleading the organizations

IMG_20250109_121328
Published on

ಬೆಂಗಳೂರು: ಸಂಸತ್ತಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ನೀಡಿದ ಹೇಳಿಕೆಯನ್ನು ಕಾಂಗ್ರೆಸ್ ನವರು ತಿರುಚಿ, ಕೆಲವು ಸಂಘಟನೆಗಳನ್ನು ಎತ್ತಿಕಟ್ಟಿ ಪ್ಯಾಕೇಜ್ ನೀಡಿ ಚಳವಳಿಗೆ ಇಳಿಸಿದೆ. ಡಾ.ಅಂಬೇಡ್ಕರ್ ಗೆ ಅಮಿತ್ ಷಾ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪ್ರಾಯೋಜಿತ ಹೋರಾಟಗಳು ನಡೆದಿವೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಗಂಭೀರ ಆರೋಪ ಮಾಡಿದರು‌.

'ಸಂವಿಧಾನ ಸಮ್ಮಾನ, ನಮ್ಮ ಸಂವಿಧಾನ ನಮ್ಮ ಹೆಮ್ಮೆ' ಕುರಿತು ಬಿಜೆಪಿ ರಾಜ್ಯ ಕಚೇರಿಯಲ್ಲಿ ಏರ್ಪಡಿಸಿದ ರಾಜ್ಯಮಟ್ಟದ ಕಾರ್ಯಾಗಾರ ಉದ್ದೇಶಿಸಿ ಮಾತನಾಡಿದ ಅವರು, ಸಂಸತ್ತಿನಲ್ಲಿ ಅಮಿತ್ ಷಾ ಭಾಷಣದ ಪೂರ್ಣ ಪಾಠ ತಿಳಿದುಕೊಂಡರೆ ಅರ್ಥವಾಗುತ್ತದೆ. ವೋಟ್ ಬ್ಯಾಂಕ್ ಗಾಗಿ ಡಾ.ಅಂಬೇಡ್ಕರ್ ಹೆಸರು ಜಪಿಸುತ್ತಿರುವ ಕಾಂಗ್ರೆಸ್ ಪಕ್ಷ ಹೇಗೆಲ್ಲ ಅಪಮಾನಿಸಿದೆ, ಜನರ ತಪ್ಪಿಸಿದೆ ಎಂದು ವಿವರಿಸಿದ್ದಾರೆ.

ಆದರೆ ಕಾಂಗ್ರೆಸ್ ನವರು ಈ ಭಾಷಣದ ವಿಡಿಯೋ ತುಂಡರಿಸಿ ತಮಗೆ ಬೇಕಾದ ರೀತಿಯಲ್ಲಿ ಜೋಡಿಸಿ ಅಂಬೇಡ್ಕರ್ ಗೆ ಅಮಿತ್ ಷಾ ಅವಮಾನಿಸಿದ್ದಾರೆ ಎಂದು ಕಥೆ ನಿರೂಪಿಸಿ ಅಪಪ್ರಚಾರ ಮಾಡಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ತನ್ನ ಅಧಿಕಾರ ಬಲದಿಂದ ಕೆಲವು ಸಂಘಟನೆಗಳಿಗೆ ಪ್ಯಾಕೇಜ್ ನೀಡಿದೆ. ಸಂಘಟನೆಗಳ ಮುಖಂಡರನ್ನು ಎತ್ತಿ ಕಟ್ಟಿ ಪ್ರಚೋದಿಸಿದೆ ಎಂದು ಛಲವಾದಿ ನಾರಾಯಣಸ್ವಾಮಿ ಕಿಡಿಕಾರಿದರು.

ಮತ್ತೆ ಮತ್ತೆ ಎಡವಿದ್ದೇವೆ

ಕಾಂಗ್ರೆಸ್ ನ ಅಪಪ್ರಚಾರ ತಂತ್ರ, ತಪ್ಪು ಮಾಹಿತಿಗೆ ತಕ್ಕ ಉತ್ತರ ನೀಡಬೇಕಾದ ನಾವು ಮತ್ತೆ ಮತ್ತೆ ಎಡವುತ್ತಿದ್ದೇವೆ. ಅಮಿತ್ ಷಾ ಹೇಳಿದ್ದೇನೆಂದು ವಾಸ್ತವಾಂಶ ಜನರಿಗೆ ತಿಳಿಸಿ, ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡುತ್ತಿಲ್ಲ. ಪಕ್ಷದ ಯಾವೊಬ್ಬ ಮುಖಂಡರು, ಎಸ್ ಸಿ., ಎಸ್ ಟಿ ಮೋರ್ಚಾಗಳಿಂದಲೂ ತಕ್ಕ ಉತ್ತರ ನೀಡುವಲ್ಲಿ ವಿಫಲರಾಗಿದ್ದೇವೆ ಎಂದು ವ್ಯಥೆ ವ್ಯಕ್ತಪಡಿಸಿದರು‌.

ಪಕ್ಷದ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್ ಮಾತನಾಡಿ ಡಾ.ಅಂಬೇಡ್ಕರ್ ಗೆ ಅಪಮಾನ, ಸಂವಿಧಾನ ಬದಲಾವಣೆ ಮಾಡಿದ್ದು ಯಾರೆಂಬುದು ಜನರಿಗೆ ಸತ್ಯ ತಿಳಿಸದೇ ಹೋದರೆ, ಕಾಂಗ್ರೆಸ್ ನ ಸುಳ್ಳುಗಳೇ ಹಿಂದಿನಂತೆ ಮುಂದೆಯೂ ಸತ್ಯವಾಗುವ ಅಪಾಯವಿದೆ ಎಂಬ ಕಳವಳ ವ್ಯಕ್ತಪಡಿಸಿದರು‌.

ಬಾಬಾಸಾಹೇಬರ ಬೆಳವಣಿಗೆಯನ್ನು ಸಹಿಸದ ಕಾಂಗ್ರೆಸ್ ಪಕ್ಷ ಹೆಜ್ಜೆ ಹೆಜ್ಜೆಗೂ ಅವಮಾನಿಸಿದೆ. ಸಂವಿಧಾನಕ್ಕೆ ಈವರೆಗೆ 106 ತಿದ್ದುಪಡಿಗಳಾಗಿವೆ. ಈ ಪೈಕಿ ಕಾಂಗ್ರೆಸ್ ಅವಧಿಯಲ್ಲಿ 75ಕ್ಕೂ ಹೆಚ್ಚು ತಿದ್ದುಪಡಿಗಳಾಗಿದ್ದು, ಬಹುತೇಕವು ಅಧಿಕಾರ ಲಾಲಸೆ, ಸ್ವಾರ್ಥಕ್ಕೆ ಮಾಡಿದವುಗಳಾಗಿವೆ. ಆದರೆ ವಾಜಪೇಯಿ ಅವರಿಂದ ಹಿಡಿದು ನರೇಂದ್ರ ಮೋದಿಯವರೆಗೆ 22 ತಿದ್ದುಪಡಿಗಳಾಗಿವೆ. ಅಂಬೇಡ್ಕರ್ ಆಶಯಕ್ಕೆ ಪೂರಕವಾದ ತಿದ್ದುಪಡಿಗಳಾಗಿವೆ. ಅಂಬೇಡ್ಕರ್ ಹಾಗೂ ಸಂವಿಧಾನಕ್ಕೆ ಬಿಜೆಪಿ ಬಹು ಎತ್ತರದ ಗೌರವ ಸ್ಥಾನ ನೀಡಿದೆ ಎಂದು ಎನ್.ಮಹೇಶ್ ಹೇಳಿದರು‌.

ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅಧ್ಯಕ್ಷತೆವಹಿಸಿದ್ದರು. ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಕೇಂದ್ರ ಸಚಿವ ವಿ.ಸೋಮಣ್ಣ, ಸಂಸದರಾದ ಬಸವರಾಜ ಬೊಮ್ಮಾಯಿ, ಸುಮಲತಾ ಅಂಬರೀಷ್ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net