

ಬೆಂಗಳೂರು: ಕಾಶ್ಮೀರದ ಪಹಲ್ಗಾಮ್ ನಲ್ಲಿ ಹಿಂದುಗಳನ್ನು ಹುಡುಕಿ ಉಗ್ರರು ಹತ್ಯೆ ಮಾಡಿರುವುದು ಖಂಡನೀಯ. ಹೀನ ಕೃತ್ಯಕ್ಕೆ ಅಲ್ಲಿನ ಸ್ಲೀಪರ್ ಸೆಲ್ ಗಳು ನೆರವಾಗಿರುವ ಸಾಧ್ಯತೆಗಳಿವೆ. ಭಯೋತ್ಪಾದಕರಿಗೆ ಬಿರಿಯಾನಿ ಕೊಟ್ಟು ಆಧಾರ್, ವೋಟರ್ ಗುರುತುಪತ್ರ ನೀಡುವಂತಹ ಸ್ಲೀಪರ್ ಸೆಲ್ ಗಳು ರಾಜ್ಯದಲ್ಲೂ ಇವೆ. ಇಂತಹ ಸ್ಲೀಪರ್ ಸೆಲ್ ಗಳ ಮೇಲೆ ರಾಜ್ಯ ಸರ್ಕಾರ ನಿಗಾವಹಿಸಬೇಕು ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಸಲಹೆ ನೀಡಿದರು.
ರಾಜ್ಯ ಬಿಜೆಪಿ ಕಚೇರಿಯಲ್ಲಿ ಬುಧವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಶ್ಮೀರದಲ್ಲಿ ವ್ಯಾಪಾರ-ವಹಿವಾಟು ವೃದ್ಧಿಯಾಗಿತ್ತು. ಪ್ರವಾಸೋದ್ಯಮ ಗರಿಗೆದರಿ ಸ್ಥಳೀಯರಿಗೆ ಉತ್ತಮ ಆದಾಯ ಲಭಿಸುತ್ತಿತ್ತು. ಜತೆಗೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಾವಿರಾರು ಕೋಟಿ ರೂ.ಗಳ ಅಭಿವೃದ್ಧಿಗೆ ಕಾರ್ಯಕ್ಕೂ ಚಾಲನೆ ನೀಡಿದ್ದರು.
ಇದನ್ನು ಸಹಿಸಲಾಗದ ಪಾಕಿಸ್ತಾನ ಭಯೋತ್ಪಾದಕರಿಗೆ ಕುಮ್ಮಕ್ಕು ನೀಡಿದೆ. ಸ್ಥಳೀಯ ಸ್ಲೀಪರ್ ಸೆಲ್ ಗಳ ಸಹಾಯವಿಲ್ಲದೆ ಹಿಂದುಗಳ ಮೇಲೆ ಮಾತ್ರ ಕೊಂದು ಹಾಕಿದ್ದಾರೆ. ಇಸ್ಲಾಮಿಕ್ ಉಗ್ರರ ಲಕ್ಷ್ಯ ಏನೆಂಬುದು ನಿಚ್ಚಳವಾಗಿದೆ. ದೇಶದ ಆಂತರಿಕ ಭದ್ರತೆ ದೃಷ್ಟಿಯಿಂದ ಭಯೋತ್ಪಾದಕ ಚಟುವಟಿಕೆಗಳ ಆರೋಪದಡಿ ಜೈಲಿಗೆ ಹೋಗಿ ಹೊರ ಬಂದವರು, ಕೇಸ್ ಗಳಿಂದ ಖುಲಾಸೆಯಾದ ವ್ಯಕ್ತಿಗಳ ಚಲನವಲನಗಳ ಮೇಲೆ ನಿಗಾಯಿಟ್ಟು, ಅಗತ್ಯಬಿದ್ದರೆ ವಶಕ್ಕೆ ಪಡೆಯಬೇಕು ಎಂದು ಆರ್.ಅಶೋಕ್ ಒತ್ತಾಯಿಸಿದರು.
ದುಷ್ಕೃತ್ಯ ಎಸಗಿದ ಪಾಕಿಸ್ತಾನಕ್ಕೆ ಮೋದಿಯವರು ತಕ್ಕ ಉತ್ತರ ಕೊಡುತ್ತಾರೆ. ಈ ಘಟನೆ ಬಗ್ಗೆ ಕೇಂದ್ರ ಸರ್ಕಾರ ಸುಮ್ಮನೆ ಇರುವುದಿಲ್ಲ. ಭಾರತೀಯರೆಲ್ಲ ಒಂದಾಗಿ ಈ ಘಟನೆ ವಿರುದ್ಧ ಒಂದಾಗಿ ಹೋರಾಟ ಮಾಡಬೇಕಾದ ಅಗತ್ಯವಿದೆ.
ಭದ್ರತಾ ವೈಫಲ್ಯದ ಬಗ್ಗೆ ಸಚಿವ ದಿನೇಶ್ ಗುಂಡೂರಾವ್ ಅವರು ಸಾಮಾಜಿಕ ಜಾಲತಾಣದ ತಮ್ಮ ಖಾತೆಯಲ್ಲಿ ಸಂದೇಶ ಹಂಚಿಕೊಂಡಿದ್ದಾರೆ. ದಿನೇಶ್ ಯಾವಾಗ ಇಂಟಲಿಜೆನ್ಸ್ ಆಫೀಸರ್ ಆದರೋ ಗೊತ್ತಿಲ್ಲ. ಸದ್ಯಕ್ಕೆ ಬಾಣಂತಿಯರ ಸಾವುಗಳನ್ನು ತಡೆಯಲಿ. ಭದ್ರತಾ ವೈಫಲ್ಯ ಅಂತ ಆರೋಪ ಮಾಡೋದಲ್ಲ, ಒಟ್ಟಾಗಿ ದೇಶದ ಜತೆ ಕಾಂಗ್ರೆಸ್ ನಿಲ್ಲುವ ಕೆಲಸ ಮಾಡಲಿ ಎಂದು ತೀಕ್ಷ್ಣವಾಗಿ ಹೇಳಿದರು.
ಭಯೋತ್ಪಾದಕರ ಕೃತ್ಯ ಖಂಡಿಸಿ, ಮೃತರ ಆತ್ಮಕ್ಕೆ ಶಾಂತಿ ಕೋರಿ, ನೊಂದವರ ಕುಟುಂಬಗಳೊಂದಿಗೆ ನಾವಿದ್ದೇವೆ ಎಂಬ ಸಾಂತ್ವನ ಹೇಳುವ ಉದ್ದೇಶದಿಂದ ಕೈಗೆ ಕಪ್ಪು ಪಟ್ಟಿ ಧರಿಸಿದ್ದೇವೆ. ರಾಜ್ಯ ಬಿಜೆಪಿ ಕಚೇರಿ ಸೇರಿ ಎಲ್ಲ ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿ ಇಂದು ಸಂಜೆ ಮೋಂಬತ್ತಿ ಹಚ್ಚಿ ಶ್ರದ್ಧಾಂಜಲಿ ಸಲ್ಲಿಸಲಿದ್ದೇವೆ ಎಂದು ಆರ್.ಅಶೋಕ್ ತಿಳಿಸಿದರು.