

ಶಿವಮೊಗ್ಗ: ಈ ಹಿಂದೆ ಆಡಳಿತ ನಡೆಸಿದ ಬಿಜೆಪಿ ಸರ್ಕಾರಕ್ಕಿಂತಲೂ ಪ್ರಸ್ತುತ ಆಡಳಿತದಲ್ಲಿರುವ ರಾಜ್ಯ ಸರ್ಕಾರ ಗುತ್ತಿಗೆದಾರರ ಪಾಲಿಗೆ ಶಾಪವಾಗಿ ಪರಿಣಮಿಸಿದೆ. ಹಿಂದಿನ ಸರ್ಕಾರಕ್ಕಿಂತ ಈ ಸರ್ಕಾರದಲ್ಲೇ ಭ್ರಷ್ಟಾಚಾರ ಹೆಚ್ಚಿದೆ. ಹಿಂದಿನ ಸರ್ಕಾರದಲ್ಲಿ ಎಲ್ಲ ಹಂತದ ಕಮೀಷನ್ ಸೇರಿ ಶೇ.40 ಆಗುತ್ತಿತ್ತು. ಆದರೆ ಈಗ ಅದಕ್ಕಿಂತಲೂ ಕಮೀಷನ್ ಹೆಚ್ಚಾಗಿದೆ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಆರ್.ಮಂಜುನಾಥ್ ಬಾಂಬ್ ಸಿಡಿಸಿದ್ದಾರೆ.
ಕರ್ನಾಟಕ ನೀರಾವರಿ ನಿಗಮ, ತುಂಗಾ ಮೇಲ್ದಂಡೆ ಮತ್ತು ಭದ್ರಾ ಗುತ್ತಿಗೆದಾರರ ಹೋರಾಟ ಸಮಿತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಸಮಾರಂಭ ಉದ್ಘಾಟಿಸಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಕಳೆದ ಎರಡು ವರ್ಷಗಳಿಂದ ರಾಜ್ಯದಲ್ಲಿ 9 ಇಲಾಖೆಗಳಿಂದ ಗುತ್ತಿಗೆದಾರರಿಗೆ ಸುಮಾರು 32 ಸಾವಿರ ಕೋಟಿ ರೂ. ಪಾವತಿಯಾಗಬೇಕಿದೆ ಎಂದರು.
ಗುತ್ತಿಗೆದಾರರು ಬಹಳ ಸಂಕಷ್ಟದಲ್ಲಿದ್ದಾರೆ. ಯಾರಿಗೂ ಬಿಲ್ ಪಾವತಿಯಾಗುತ್ತಿಲ್ಲ. 20 ಪರ್ಸೆಂಟ್ ನೀಡಿದ ಕೆಲವೊಬ್ಬರಿಗೆ ಬಿಲ್ ಮಂಜೂರಾಗುತ್ತಿದೆ. ಸಂಬಂಧಿಸಿದ ಸಚಿವರು ಮಾತ್ರವಲ್ಲದೆ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈಗ ಕೆಲಸ ಮಾಡುವುದು ಸುಲಭವಲ್ಲ. ನೂರಾರು ಮೂಕರ್ಜಿಗಳು ಬರುತ್ತವೆ. ನಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾರೆ. ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಕೆಲವೇ ಕೆಲವು ಗುತ್ತಿಗೆದಾರರಿಗೆ ಬೆಂಗಳೂರಿನಲ್ಲಿ ಗುತ್ತಿಗೆ ನೀಡುತ್ತಿದ್ದಾರೆ ಎಂಬುದು ನಿಜ. ಈ ಬಗ್ಗೆ ಸುರೇಶ್ ಅವರೊಂದಿಗೂ ಮಾತನಾಡಲಾಗಿದೆ ಎಂದರು.
ರಾಜ್ಯ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಎನ್.ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರಿಯ ಗುತ್ತಿಗೆದಾರರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಹಿರಿಯ ಮಹಿಳಾ ಗುತ್ತಿಗೆದಾರರಾದ ರಕ್ಷಮ್ಮ ಮತ್ತು ಶಕುಂತಲಾ ಅವರನ್ನು ಗೌರವಿಸಲಾಯಿತು.
ಕರ್ನಾಟಕ ನೀರಾವರಿ ನಿಗಮ, ತುಂಗಾ ಮೇಲ್ದಂಡೆ ಮತ್ತು ಭದ್ರಾ ಗುತ್ತಿಗೆದಾರರ ಹೋರಾಟ ಸಮಿತಿ ಅಧ್ಯಕ್ಷ ಜಿ.ಎಂ.ಜಗದೀಶ್ ಗುಡಮಘಟ್ಟ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಸ್ಟೇಟ್ ಕಂಟ್ರಾೃಕ್ಟರ್ಸ್ ಅಸೋಸಿಯೇಷನ್ ಕಾರ್ಯಾಧ್ಯಕ್ಷ ಎಂ.ಎಸ್.ಸಂಕಗೌಡಶಾನಿ, ಗೌರವಾಧ್ಯಕ್ಷ ಜಗನ್ನಾಥ್ ಬಿ. ಶೇಗಜಿ ಮುಂತಾದವರಿದ್ದರು.