

ಸಾಲಿಗ್ರಾಮ : ನಮ್ಮ ಕಾಂಗ್ರೆಸ್ ಸರ್ಕಾರದ ಬಜೆಟ್ ರಾಜ್ಯದ ಎಲ್ಲ ಜನರ ಅಭಿವೃದ್ಧಿಗೆ ಮುನ್ನುಡಿ ಆಗಿದ್ದು, ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಆದರೆ ವಿರೋಧ ಪಕ್ಷದವರ ಟೀಕೆ ಸಹಜ ಎಂದು ಶಾಸಕ ಡಿ.ರವಿಶಂಕರ್ ತಿಳಿಸಿದರು.
ಸಾಲಿಗ್ರಾಮ ಪಟ್ಟಣದ ಹಾರಂಗಿ ಇಲಾಖೆ ಬಳಿ ಅಗ್ನಿಶಾಮಕ ದಳ ಕಟ್ಟಡ ನಿರ್ಮಾಣ ಕಾಮಗಾರಿಗೆ ಶನಿವಾರ ಭೂಮಿ ಪೂಜೆ ಮಾಡಿ ಮಾತನಾಡಿದರು. ಕಳೆದ ಬಾರಿ ಬಜೆಟ್ ನಲ್ಲಿ ಗ್ಯಾರಂಟಿ ಪಂಚ ಯೋಜನೆಗಳಿಗೆ 52,000 ಕೋಟಿ ರೂ. ಹಣವನ್ನು ಮೀಸಲಿಟ್ಟಿದ್ದರು. ಆದರೆ ಈ ಬಜೆಟ್‌ನಲ್ಲಿ 51,000 ಕೋಟಿ ರೂ. ಮೀಸಲಿಟ್ಟಿದ್ದಾರೆ. ಆದ್ದರಿಂದ ಬೇರೆ ಯಾವುದೇ ಇಲಾಖೆ ಹಣವನ್ನು ಪಂಚ ಯೋಜನೆಗಳಿಗೆ ಬಳಕೆ ಮಾಡಿಲ್ಲ. ಪ್ರತಿ ಇಲಾಖೆಯಲ್ಲಿ ಪ್ರತಿ ವರ್ಷ ಆಗಬೇಕಾದ ಕೆಲಸ ಕಾರ್ಯಗಳು ಎಂದಿನಂತೆ ಆಗುತ್ತಿವೆ. ಎಲ್ಲ ಕಾರ್ಯಕ್ರಮಗಳಿಗೂ ಅನುದಾನ ದೊರೆಯುತ್ತಿದೆ ಎಂದರು.
ಪ್ರಸ್ತುತವ ವರ್ಷದ ಬಜೆಟ್‌ನಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಕಪ್ಪಡಿ ಬಳಿ 25 ಕೋಟಿ ರೂ. ವೆಚ್ಚದಲ್ಲಿ ಸೇತುವೆ ನಿರ್ಮಾಣ ಮಾಡಲು ಹಣ ಕಾಯ್ದಿರಿಸಲಾಗಿದೆ. ಜತೆಗೆ ನೂತನ ತಾಲೂಕು ಸಾಲಿಗ್ರಾಮದಲ್ಲಿ ಪ್ರಜಾಸೌಧ ಕಟ್ಟಲು ಬಜೆಟ್‌ನಲ್ಲಿ ಘೋಷಣೆಯಾಗಿದ್ದು, ಶೀಘ್ರವೇ ಪಟ್ಟಣದ ಸೂಕ್ತ ಸ್ಥಳದಲ್ಲಿ ಪ್ರಜಾಸೌಧ ನಿರ್ಮಾಣ ಮಾಡಲಾಗುವುದು ಎಂದರು.
ಪಟ್ಟಣದ ತಾಲೂಕು ಆಸ್ಪತ್ರೆಯನ್ನು 100 ಬೇಡ್ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲು ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅದರ ಜತೆಯಲ್ಲಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಾಣಕ್ಕೆ 65 ಕೋಟಿ ರೂ. ವೆಚ್ಚ ನಿಗದಿ ಪಡಿಸಲಾಗಿದೆ.ಇದಕ್ಕೆ ಎಲ್ಲ ಸಿದ್ಧತೆಗಳು ಮಾಡಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಕೆ.ಆರ್.ನಗರ ಪಟ್ಟಣದಿಂದ ಹೊಸಕೋಟೆ ವರೆಗೆ ಗುಣಮಟ್ಟದ ರಸ್ತೆ ನಿರ್ಮಾಣ ಮಾಡಲು ಲೋಕೋಪಯೋಗಿ ಸಚಿವರಿಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ 35 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದು, ಕಾಮಗಾರಿ ಆರಂಭವಾಗಿದೆ. ಕರ್ಪೂರವಳ್ಳಿ, ಕಾಳಮ್ಮನ ಕೊಪ್ಪಲು, ಹರದನಹಳ್ಳಿ, ಸಾಲುಕೊಪ್ಪಲು, ಕುಲುಮೆ ಹೊಸೂರು, ಮುಂಡೂರು, ತಂದ್ರೆ, ಅಂಕನಹಳ್ಳಿ, ತಂದ್ರೆಕೊಪ್ಪಲು ಸೇರಿದಂತೆ ಈ ಭಾಗದ ಎಲ್ಲ ರಸ್ತೆಗಳನ್ನು ಅಭಿವೃದ್ಧಿ ಮಾಡಲು ಅನುದಾನ ಬಿಡುಗಡೆ ಮಾಡುತ್ತಿದ್ದೇನೆ ಎಂದರು.
ಕಾರ್ಯಕ್ರಮದಲ್ಲಿ ತಾಪಂ ಇಒ ರವಿಕುಮಾರ್, ಗ್ರಾಪಂ ಅಧ್ಯಕ್ಷೆ ಸುವರ್ಣಾ, ಉಪಾಧ್ಯಕ್ಷ ಶಶಿಕಲಾ, ಸದಸ್ಯ ಹೇಮಂತ್, ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಉದಯ್ ಕುಮಾರ್, ಎಂ.ಎಸ್.ಮಹದೇವ್, ನಗರ ಕಾಂಗ್ರೆಸ್ ಅಧ್ಯಕ್ಷ ಎಸ್.ಕೆ. ಪ್ರಭಾಕರ್, ರಮೇಶ್, ಎಸ್ಸಿ ಘಟಕದ ತಾಲೂಕು ಅಧ್ಯಕ್ಷ ಕಂಠಿಕುಮಾರ್, ತಾಪಂ ಮಾಜಿ ಅಧ್ಯಕ್ಷ ಚಂದು, ಸಿಡಿಸಿ ಸದಸ್ಯ ಸಂತೋಷ್, ಪರೀಕ್ಷಿತ್, ಅರುಣ್ ರಾಜ್, ಡಿ.ದೇವರಾಜ್, ಗ್ರಾಪಂ ಮಾಜಿ ಅಧ್ಯಕ್ಷ ತೇಜಮೂರ್ತಿ. ಎಸ್.ಎಲ್.ಗಿರೀಶ್, ಬಲರಾಮ್, ಕೊತ್ವಾಲ್ ಮಂಜು, ಬಸವರಾಜು, ಅಗ್ನಿಶಾಮಕ ದಳ ಠಾಣಾಧಿಕಾರಿ ಲಕ್ಷ್ಮಿಕಾಂತ್, ಹಾರಂಗಿ ಎಇಇ ಕುಶುಕುಮಾರ್, ರಕ್ಷಾ ಸಮಿತಿ ಅಧ್ಯಕ್ಷ ಲಕ್ಕಿಕುಪ್ಪೆ ಮಂಜೇಗೌಡ, ಶೌಕತ್, ಗುತ್ತಿಗೆದಾರ ನವೀನ್, ಲಕ್ಷ್ಮಿಪುರ ಸೈಯದ್. ಮೂಂಡೂರ್ ನಾಗರಾಜ್, ಶಾಂತಿರಾಜಯ್ಯ, ಇತರರು ಇದ್ದರು.