

ಬೆಂಗಳೂರು:
ದೇಶದ ಯಂತ್ರೋಪಕರಣಗಳಲ್ಲಿ ಶೇ.50ರಷ್ಟು ಉತ್ಪಾದನೆ ಪಾಲನ್ನು ರಾಜ್ಯವೇ ಹೊಂದಿದೆ ಎಂದು
ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ಬೆಂಗಳೂರಿನ ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ನಡೆದ ಭಾರತೀಯ ಯಂತ್ರೋಪಕರಣ ತಂತ್ರಜ್ಞಾನ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು.
ಯಂತ್ರೋಪಕರಣ ಕ್ಷೇತ್ರಕ್ಕೆ ಕರ್ನಾಟಕವು ಐದು ದಶಕಗಳ ಹಿಂದೆಯೇ ಬಲಿಷ್ಟವಾದ ಅಡಿಪಾಯ ಹಾಕಿದೆ. ಹಿಂದೂಸ್ತಾನ್ ಮಷಿನ್ ಅಂಡ್ ಟೂಲ್ಸ್ (ಏ) ಈ ಕ್ಷೇತ್ರಕ್ಕೆ ಮಹೋನ್ನತ ಕೊಡುಗೆ ನೀಡಿತ್ತು. ಪ್ರಸ್ತುತ, ಯಂತ್ರೋಪಕರಣ ಕ್ಷೇತ್ರಕ್ಕೆ ಮೋದಿ ಅವರ ಸರ್ಕಾರ ಎಲ್ಲಾ ಆಯಾಮಗಳಲ್ಲಿಯೂ ಉತ್ತೇಜನ ನೀಡುತ್ತಿದೆ ಎಂದರು.
ತಂತ್ರಜ್ಞಾನದ ಉನ್ನತೀಕರಣ, ಕೌಶಲ್ಯ ಅಭಿವೃದ್ಧಿ ಮತ್ತು ಮೂಲಸೌಕರ್ಯ ಅಭಿವೃದ್ಧಿಯ ಬಗ್ಗೆ ಭಾರತ ಸ್ಪಷ್ಟ ಗುರಿಯನ್ನು ಹೊಂದಿದ್ದು, ಆ ನಿಟ್ಟಿನಲ್ಲಿ ಭಾರತೀಯ ಬಂಡವಾಳ ಸರಕುಗಳ ವಲಯದಲ್ಲಿ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವ ಮಹತ್ವದ ಯೋಜನೆಯನ್ನು ಅನುಷ್ಠಾನಕ್ಕೆ ತಂದಿದೆ ಎಂದರು.
ತುಮಕೂರಿನಲ್ಲಿ ಮಷಿನ್ ಅಂಡ್ ಟೂಲ್ ಪಾರ್ಕ್ ಸ್ಥಾಪನೆಗೆ ಉತ್ತೇಜನ ನೀಡಿದೆ ಮತ್ತು ಐಐಟಿ-ಮದ್ರಾಸ್‌ನಲ್ಲಿ ಸುಧಾರಿತ ಉತ್ಪಾದನಾ ತಂತ್ರಜ್ಞಾನ ಅಭಿವೃದ್ಧಿ ಕೇಂದ್ರದಂತಹ ಉತ್ಕೃಷ್ಟತೆಯ ಕೇಂದ್ರಗಳನ್ನು ಸ್ಥಾಪಿಸಲು ಉದ್ಯಮ ಮತ್ತು ಅಕಾಡೆಮಿಗಳೊಂದಿಗೆ ಪಾಲುದಾರಿಕೆ ಹೊಂದಿದೆ ಎಂದರು.
ರಾಷ್ಟ್ರೀಯ ಬಂಡವಾಳ ಸರಕುಗಳ ನೀತಿ:
ರಾಷ್ಟ್ರೀಯ ಬಂಡವಾಳ ಸರಕುಗಳ ನೀತಿ- 2025 ರೂಪಿಸಲು ನಮ್ಮ ಸಚಿವಾಲಯದ ಕೆಲಸ ಮಾಡುತ್ತಿದೆ. ಈ ವಲಯದಲ್ಲಿ ಭಾರತವನ್ನು ಜಾಗತಿಕ ಶಕ್ತಿಯನ್ನಾಗಿ ಮಾಡುವತ್ತ ಮೋದಿ ಅವರ ನೇತೃತ್ವದಲ್ಲಿ ಪ್ರಯತ್ನ ಮಾಡುತ್ತಿದ್ದೇವೆ. ಆದಷ್ಟು ಬೇಗ ಈ ನೀತಿಯು ಹೊರಬರಲಿದೆ ಎಂದರು.
ರಾಷ್ಟ್ರೀಯ ಬಂಡವಾಳ ಸರಕುಗಳ ನೀತಿಯು ನಾವೀನ್ಯತೆಯನ್ನು ಉತ್ತೇಜಿಸಲು, ಆಮದುಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಮತ್ತು ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ವ್ಯವಸ್ಥಿತವಾದ ಚೌಕಟ್ಟನ್ನು ಒದಗಿಸುತ್ತದೆ ಎಂದ ಸಚಿವರು, ಈ ಪ್ರದರ್ಶನದಲ್ಲಿ 23 ದೇಶಗಳಿಂದ 1,100ಕ್ಕೂ ಹೆಚ್ಚು ಪ್ರದರ್ಶಕರು ಪಾಲ್ಗೊಂಡಿದ್ದಾರೆ. ಯಂತ್ರೋಪಕರಣ ಉದ್ಯಮಕ್ಕೆ ಇದು ಅತ್ಯುತ್ತಮ ವೇದಿಕೆ ಆಗಿದೆ ಎಂದರು.
ಮಳಿಗೆಗಳಿಗೆ ಭೇಟಿ:
ಪ್ರದರ್ಶನದಲ್ಲಿನ ಮಳಿಗೆಗಳಿಗೆ ಭೇಟಿ ನೀಡಿದ ಸಚಿವ ಕುಮಾರಸ್ವಾಮಿ ಅವರು ಯತ್ರೋಪಕರಣ ಉದ್ಯಮದ ಆವಿಷ್ಕಾರ ಮತ್ತು ನಾವೀಣ್ಯತೆಯನ್ನು ಖುದ್ದು ವೀಕ್ಷಿಸಿದರು.
ಕೈಗಾರಿಕೆ ಉತ್ಪಾದನೆಗೆ ಬಹಳಷ್ಟು ಉತ್ತೇಜನ, ಶಕ್ತಿ ತುಂಬುವ ಈ ಕ್ಷೇತ್ರದಲ್ಲಿನ ಹೊಸ ಹೊಸ ಆವಿಷ್ಕಾರಗಳ ಬಗ್ಗೆ ಸಂಬಂಧಪಟ್ಟ ಕಂಪನಿಗಳ ನಿಪುಣರಿಂದ ಮಾಹಿತಿ ಪಡೆದುಕೊಂಡರು. ಇದೇ ವೇಳೆ ಅವರು ಬೃಹತ್ ಕೈಗಾರಿಕೆ ಸಚಿವಾಲಯದ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹೆಚ್‌ಎಂಟಿ ಮಳಿಗೆಗೆ ಭೇಟಿ ನೀಡಿದರು.
ಕೈಗಾರಿಕಾಖಾತೆ ಸಚಿವ ಎಂ.ಬಿ.ಪಾಟೀಲ್ ಸೇರಿ ಅನೇಕರು ಸಚಿವರ ಜತೆಯಲ್ಲಿ ಇದ್ದರು.