ರಾಜ್ಯದ ಜಾತಿ ಗಣತಿ ವರದಿ ಗೊಂದಲಗಳಿಗೆ ಇತಿಶ್ರೀ: ವಿಜಯೇಂದ್ರ ವಿಶ್ವಾಸ | Original report missing out

B Y Vijayendra
Published on

ಬೆಂಗಳೂರು: ಜನಗಣತಿ ಜತೆಗೆ ಜಾತಿ ಗಣತಿಗೂ ಕೇಂದ್ರ ಸರ್ಕಾರ ಐತಿಹಾಸಿಕ ನಿರ್ಧಾರ ಕೈಗೊಂಡಿದೆ. ನೈಜ ಸಾಮಾಜಿಕ ನ್ಯಾಯ ವಿತರಣೆಗೆ ಸಿಎಂ ಸಿದ್ದರಾಮಯ್ಯ ಬದ್ಧವಾಗಿ ಕೇಂದ್ರದ ನಿರ್ಧಾರಕ್ಕೆ ಸಹಕರಿಸಬೇಕು ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದರು.

ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿದ ಅವರು, ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೆಸಿದೆ ಎನ್ನುತ್ತಿದ್ದರು. ಕೇಂದ್ರ ಸರ್ಕಾರ ನಿರ್ಧಾರ ಪ್ರಕಟಿಸಿದ ನಂತರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಜಾತಿ ಜನಗಣತಿ ಎಂದು ಹೇಳುತ್ತಿರುವುದಕ್ಕೆ ಆಕ್ಷೇಪಿಸಿದರು.

ಜಾತಿ ಜನಗಣತಿ ನಡೆಸುವ ಅಧಿಕಾರ ರಾಜ್ಯಕ್ಕಿಲ್ಲ. ಆದರೂ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಹೆಸರಿನಲ್ಲಿ ಜಾತಿಗಳ ನಡುವೆ ವಿಷ ಬೀಜ ಬಿತ್ತುವ ಕುತಂತ್ರ ಹೂಡಿದ್ದರು. ಗೊಂದಲ ಸೃಷ್ಟಿಸಿದ್ದರು, ಇವೆಲ್ಲವಕ್ಕೂ ಕೇಂದ್ರದ ನಿರ್ಣಯದಿಂದ ಇತಿಶ್ರೀಯಾಗಲಿದೆ ಎಂದು ಅಭಿಪ್ರಾಯಪಟ್ಟರು.

ಸ್ವಾತಂತ್ರ್ಯದ ಬಳಿಕ ದೀರ್ಘಾವಧಿಗೆ ಕೇಂದ್ರದಲ್ಲಿ ಕಾಂಗ್ರೆಸ್ ಆಡಳಿತ ನಡೆಸಿದೆ. ಈ ಅವಧಿಯಲ್ಲಿ ಜಾತಿ ಜನಗಣತಿ ಕಾರ್ಯಕ್ಕೆ ಕೈ ಹಾಕಿರಲಿಲ್ಲ. ಕೇಂದ್ರ ಸರ್ಕಾರ ತೆಗೆದುಕೊಂಡ ನಿರ್ಧಾರದಿಂದ ಕಾಂಗ್ರೆಸ್‌ನವರಿಗೂ ಅಚ್ಚರಿಯಾಗಿದೆ ಎಂದು ಬಿ.ವೈ.ವಿಜಯೇಂದ್ರ ವಿಶ್ಲೇಷಿಸಿದರು.

ಅವಧಿ ಮೀರಿದ ವರದಿ

ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಆಯೋಗ 10 ವರ್ಷಗಳ ಹಿಂದೆ ಸಮೀಕ್ಷೆ ನಡೆಸಿದೆ. ಇದು, ಅವಧಿ ಮೀರಿದ ವರದಿಯಾಗಿದೆ ಎಂದು ಕಾಂಗ್ರೆಸ್‌ನ ಮಾಜಿ ಸಿಎಂ ವೀರಪ್ಪ ಮೊಯಿಲಿ ಸ್ವತಃ ಹೇಳಿದ್ದಾರೆ. ಇಷ್ಟಕ್ಕೂ ಸಿಎಂ ಸಿದ್ದರಾಮಯ್ಯ ಈ ಹಿಂದೆ ಜಾತಿ ಗಣತಿಯಲ್ಲ, ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಎಂದಿದ್ದವರು ಈಗ ಜಾತಿ ಗಣತಿ ಎನ್ನುತ್ತಿದ್ದಾರೆ.

ರಾಜ್ಯ ಸರ್ಕಾರದ ಕಾಂತರಾಜು ವರದಿಯೇ ಇಲ್ಲ. ಮೂಲ ವರದಿ ಇಲ್ಲದೆ ವರದಿ ಸಲ್ಲಿಸುವುದು ಹೇಗೆ ? ಎಂದು ಕೇಳಿ ಕೆ.ಜಯಪ್ರಕಾಶ್ ಹೆಗ್ಡೆ ಸರ್ಕಾರಕ್ಕೆ ಈ ಹಿಂದೆ ಪತ್ರ ಬರೆದಿದ್ದರು. ಅವರೇ ದತ್ತಾಂಶಗಳ ವರದಿ ಎಂದು ಸಲ್ಲಿಸಿದ್ದು, ಮತ್ತೆ ಸಮೀಕ್ಷೆ ಮಾಡಿಯೇ ಕೊಟ್ಟರೆ? ಯಾವಾಗ ಮನೆ ಮನೆಗೆ ಹೋಗಿ ಸಮೀಕ್ಷೆ ನಡೆಸಲಾಯಿತು ಎಂಬುದನ್ನೂ ತಿಳಿಸಲಿ ಎಂದು ಒತ್ತಾಯಿಸಿದರು.

ವರದಿ ಇಲ್ಲದೇ ಇದ್ದರೂ ಸಮಾಜದ ನಡುವೆ ಕಂದಕ, ಗೊಂದಲ ಸೃಷ್ಟಿಸಲು ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿತ್ತು. ಕೇಂದ್ರದ ನಿರ್ಧಾರಕ್ಕೆ ಸ್ಪಂದಿಸಿ, ಗೊಂದಲಗಳಿಗೆ ಸಿಎಂ ಸಿದ್ದರಾಮಯ್ಯ ತೆರೆ ಎಳೆಯುವ ವಿಶ್ವಾಸವಿದೆ ಎಂದರು.

ಪ್ರಚಾರದ ಹುಚ್ಚು

ಕಾಶ್ಮೀರದ ಪಹಲ್ಗಾಂನಲ್ಲಿ ಉಗ್ರರ ದುಷ್ಕೃತ್ಯದ ವಿರುದ್ಧ ಇಡೀ ದೇಶ ಒಂದಾಗಿದೆ. ದುಷ್ಟರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮಕೈಗೊಳ್ಳಲು ಒತ್ತಾಯಿಸುತ್ತಿದ್ದಾರೆ. ಆದರೆ ಪ್ರಚಾರದ ಹುಚ್ಚಿನಿಂದ ಕಾಂಗ್ರೆಸ್‌ನ ಕೆಲವು ನಾಯಕರು ಮನಬಂದಂತೆ ಹೇಳಿಕೆ ನೀಡುತ್ತಿದ್ದು, ಅಂತಹವರಿಗೆ ಪ್ರತಿಕ್ರಿಯ ನೀಡಬೇಕಿಲ್ಲ ಎಂದು ಬಿ.ವೈ.ವಿಜಯೇಂದ್ರ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net