

ಕೊಳ್ಳೇಗಾಲ: ಪಟ್ಟಣದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜಯಂತಿ ಅಂಗವಾಗಿ ಎಂಜಿಎಸ್‌ವಿ ಸ್ಪೋಟ್ಸ್ ಕ್ಲಬ್ ವತಿಯಿಂದ ಬಾಲಕ ಮತ್ತು ಬಾಲಕಿಯರಿಗೆ ಅಂಬೇಡ್ಕರ್ ತತ್ವಗಳ ಕಡೆ ನಮ್ಮ ಓಟ ಶೀರ್ಷಿಕೆಯಡಿ ಮಿನಿ ಮ್ಯಾರಥಾನ್ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ಎಂಜಿಎಸ್‌ವಿ ಜೂನಿಯರ್ ಕಾಲೇಜು ಮೈದಾನದಲ್ಲಿ ಶಾಸಕ ಎ.ಆರ್.ಕೃಷ್ಣಮೂರ್ತಿ ಮಿನಿ ಮ್ಯಾರಥಾನ್ ಸ್ಪರ್ಧೆಗೆ ಚಾಲನೆ ನೀಡಿದರು. ಬಾಲಕರಿಗೆ 6 ಕಿ.ಮೀ., ಬಾಲಕಿಯರಿಗೆ 3 ಕಿ.ಮೀ. ಓಟದ ಸ್ಪರ್ಧೆಯಲ್ಲಿ 70 ಬಾಲಕರು ಹಾಗೂ 40 ಬಾಲಕಿಯರು ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ ಭಗವಾನ್ ಬುದ್ಧ ಮತ್ತು ಅಂಬೇಡ್ಕರ್ ಅವರ ಭಾವಚಿತ್ರದ ಮುದ್ರಣವುಳ್ಳ ಟಿ ಶರ್ಟ್ ಧರಿಸಿ ಗಮನ ಸೆಳೆದರು.
ಮ್ಯಾರಥಾನ್‌ನಲ್ಲಿ ವಿಜೇತರಾದ ಮಕ್ಕಳಿಗೆ ಶಾಸಕ ಎ.ಆರ್.ಕೃಷ್ಣಮೂರ್ತಿ ಬಹುಮಾನ ವಿತರಣೆ ಮಾಡಿ ಮಾತನಾಡಿ, ಕೊಳ್ಳೇಗಾಲ ಕಲೆಯ ತವರಾಗಿದೆ. ಕ್ರೀಡಾ ಪ್ರೇಮಿಗಳು ಹೆಚ್ಚಿದ್ದಾರೆ. ನನಗೂ ಕ್ರೀಡೆ ಮೇಲೆ ಆಸಕ್ತಿ ಹೆಚ್ಚಿದೆ. ಮಕ್ಕಳು ಶಿಕ್ಷಣ ಜತೆಗೆ ಕ್ರೀಡೆಗೆ ಆದ್ಯತೆ ನೀಡಬೇಕು. ಮಾನಸಿಕ ಹಾಗೂ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿಯಾಗಿದೆ. ಇಂದು ಅಂಬೇಡ್ಕರ್ ಜಯಂತಿ ಅಂಗವಾಗಿ ಮ್ಯಾರಥಾನ್ ಸ್ಪರ್ಧೆ ಆಯೋಜಿಸಿರುವುದು ಅರ್ಥಪೂರ್ಣವಾಗಿದೆ ಎಂದು ಶ್ಲಾಘಿಸಿದರು.
ಡಿವೈಎಸ್ಪಿ ಎಂ.ಧಮೇಂದ್ರ ಮಾತನಾಡಿ, ಶಿಕ್ಷಣ ಜತೆ ಕ್ರೀಡೆಯಲ್ಲೂ ಸಾಧನೆ ಮಾಡಿದರೆ ಉಜ್ವಲವಾದ ಭವಿಷ್ಯ ನಿಮ್ಮದಾಗುತ್ತದೆ ಎಂದರು. ದೈಹಿಕ ಶಿಕ್ಷಣ ಶಿಕ್ಷಕ ವಿನ್‌ಸೆಂಟ್ ಆಶೀರ್ವಾದ್ ಮಾತನಾಡಿ, ಯುವಕರ ಆಲೋಚನೆಗಳೇ ಬೇರೆಯಾಗಿದೆ. ತಾಳ್ಮೆ ಕಳೆದು ಕೊಂಡಿದ್ದಾರೆ. ಹಣ ಸಂಪಾದನೆ ಮತ್ತು ಹೆಸರು ಸಂಪಾದಿಸಬೇಕೆಂಬ ದಾವಂತ ಹೆಚ್ಚಿದೆ. ದೇಶದ ಭವಿಷ್ಯವಾದ ಯುವಕರು ಮೌಲ್ಯಯುತ ಜೀವನಕ್ಕೆ ಪ್ರಾಮುಖ್ಯತೆ ನೀಡಬೇಕು. ಕ್ರೀಡೆಗೆ ಹೆಚ್ಚು ಆದ್ಯತೆ ನೀಡಿದರೆ ಆರೋಗ್ಯವಂತ ದೇಶ ನಮ್ಮದಾಗುತ್ತದೆ. ಚೇತನ್ ದೊರೈರಾಜ್ ಹಾಗೂ ಸುಮನ್ ತಂಡ ಮ್ಯಾರಥಾನ್ ಸ್ಪರ್ಧೆ ಸೇರಿದಂತೆ ಇನ್ನಿತರ ಕ್ರೀಡೆಗಳನ್ನು ಆಯೋಜಿಸಿ ಉತ್ತಮ ವೇದಿಕೆಯನ್ನು ಮಕ್ಕಳಿಗೆ ನೀಡುತ್ತಿದ್ದಾರೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ತೋಟೇಶ್, ಪಟ್ಟಣ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಶಿವಮಾದಯ್ಯ, ನಗರಸಭೆ ಸ್ಥಾಯಿ ಸಮಿತಿ ಸದಸ್ಯ ಸುರೇಶ್, ಸದಸ್ಯರಾದ ಮಂಜುನಾಥ್, ಪ್ರಕಾಶ್ ಶಂಕನಪುರ, ರಾಘವೇಂದ್ರ, ನಾಮನಿರ್ದೇಶನ ಸದಸ್ಯ ಶಿವಮಲ್ಲು, ದೇವಾನಂದ್, ಸ್ವಾಮಿ ನಂಜಪ್ಪ, ಮಾಜಿ ಉಪಾಧ್ಯಕ್ಷ ಹರ್ಷ, ಗ್ಯಾರಂಟಿ ಯೋಜನೆಗಳ ಜಿಲ್ಲಾ ಉಪಾಧ್ಯಕ್ಷ ರವಿ ಬಸ್ತೀಪುರ, ಮುಖಂಡ ಪ್ರಭುಸ್ವಾಮಿ, ಜಗದೀಶ್, ಕಾರ್ಯಕ್ರಮ ಆಯೋಜಕ ರಾಜ್ಯ ಯುವ ಕಾಂಗ್ರೆಸ್ ಮಾಜಿ ಕಾರ್ಯದರ್ಶಿ ಚೇತನ್ ದೊರೈರಾಜ್, ಸುಮನ್, ದರ್ಶನ್, ವಿನೋದ್, ಹರ್ಷ, ಅಜಯ್, ಶರತ್ ಮತ್ತಿತರಿದ್ದರು.