ರಾಜ್ಯ ಬಜೆಟ್​: ಮಣ್ಣು ಪರೀಕ್ಷೆಗೆ ಅನುಕೂಲವಾಗುವಂತೆ 'ಸಂಚಾರಿ ಕೃಷಿ ಹೆಲ್ತ್​ ಕ್ಲಿನಿಕ್​'ಗಳ ಪ್ರಾರಂಭ; ಸಾವಯವ ಕೃಷಿ ಉತ್ತೇಜನಕ್ಕೆ 200 ಕೋಟಿ ರೂ.ಅನುದಾನ

Soil Test 5 March 20
Published on

ಬೆಂಗಳೂರು: ಕೃಷಿಯಲ್ಲಿ ಮಣ್ಣು ತುಂಬ ಮುಖ್ಯ. ಕಾಲಕಾಲಕ್ಕೆ ಮತ್ತು ನೀರಿನ ಪರೀಕ್ಷೆ ಮಾಡಿ, ಅಗತ್ಯ ತಾಂತ್ರಿಕತೆ ನೆರವಿಗಾಗಿ ಸರ್ಕಾರದಿಂದ ಸಂಚಾರಿ ಕೃಷಿ ಹೆಲ್ತ್​ ಕ್ಲಿನಿಕ್​ಗಳನ್ನು ಪ್ರಾರಂಭಿಸಲು ಉದ್ದೇಶಿಸಲಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.

ಈ ಕ್ಲಿನಿಕ್​ ಹಳ್ಳಿಗಳ್ಳಿಗಳಿಗೆ ಭೇಟಿ ನೀಡಿ, ಅಲ್ಲಿನ ಮಣ್ಣು, ಕೃಷಿಗೆ ಬಳಸುತ್ತಿರುವ ನೀರನ್ನು ಸ್ಥಳದಲ್ಲಿಯೇ ಪರಿಶೀಲನೆ ಮಾಡಿಕೊಡಲಿದೆ. ರೈತರ ಮನೆ ಬಾಗಿಲಿಗೆ ತೆರಳಿ ಕೀಟನಾಶಕ, ಬೆಳೆ ರೋಗಗಳು ಬಗ್ಗೆ ಮಾಹಿತಿ, ಪರಿಹಾರ ನೀಡಲಿದೆ ಎಂದು ಹೇಳಿದರು.

ಹಾಗೇ ರಾಸಾಯನಿಕ ಕೃಷಿಯನ್ನು ದೂರವಿಟ್ಟು ಸಾವಯವ ಕೃಷಿಗೆ ಹೆಚ್ಚು ಒತ್ತು ನೀಡಲು ನಿರ್ಧರಿಸಲಾಗಿದೆ. ಹಾಗಾಗಿ ರೈತರು ನೀರಿನಲ್ಲಿ ಕರಗುವ ಗೊಬ್ಬರ, ಸೂಕ್ಷ್ಮ ಪೌಷ್ಟಿಕಾಂಶ, ಹೈಡ್ರೋಜನ್​​ಗಳನ್ನು ಬಳಸಲು ನೆರವು ನೀಡಲಾಗುವುದು. ಸಾವಯವ ಕೃಷಿ ಉತ್ತೇಜನಕ್ಕಾಗಿ 200 ಕೋಟಿ ರೂಪಾಯಿ ಒದಗಿಸಲಾಗುವುದು ಎಂದು ತಿಳಿಸಿದರು.

ರಾಜ್ಯ ಸರ್ಕಾರ ಈಗಾಗಲೇ ಕೃಷಿಕರಿಗೆ 163 ಲಕ್ಷ ಮಣ್ಣು ಆರೋಗ್ಯ ಕಾರ್ಡ್​ಗಳನ್ನು ಒದಗಿಸಿದೆ. ರೈತರಿಗೆ ಪ್ರದೇಶವಾರು ಸೂಕ್ತ ಬೆಳೆಗಳನ್ನು ಬೆಳೆಯಲು ಅಗತ್ಯ ಬೀಜಗಳು, ರಸಗೊಬ್ಬರಗಳು, ಸಣ್ಣ ಪೌಷ್ಟಿಕಾಂಶಗಳನ್ನು ಉಪಯೋಗಿಸುವಂತಹ ಶಿಫಾರಸುಗಳನ್ನೊಳಗೊಂಡ ನೀತಿ ರೂಪಿಸಲಾಗುವುದು ಎಂದು ಹೇಳಿದರು.

ರಾಜ್ಯಾದ್ಯಂತ 40 ಪ್ರಾತ್ಯಕ್ಷಿಕಾ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸಿ ಅದರ ಮೂಲಕ, ಉತ್ತಮ ಕೃಷಿ ಪದ್ಧತಿಗಳು, ನೂತನ ತಂತ್ರಜ್ಞಾನ, ಕೊಯ್ಲೋತ್ತರ ನಿರ್ವಹಣೆಗಳ ಬಗ್ಗೆ ಕೃಷಿಕರಿಗೆ ಪ್ರಾತ್ಯಕ್ಷಿಕೆ ನೀಡಲಾಗುವುದು. ಆಹಾರ ಸಂಸ್ಕರಣಾ ವಲಯದ ಬಲವರ್ಧನೆ ಮತ್ತು ಕೃಷಿ ಉತ್ಪನ್ನ ಆಧಾರಿತ ರಫ್ತುಗಳನ್ನು ಹೆಚ್ಚಿಸಲು ಆದ್ಯತೆ ನೀಡಲಾಗುವುದು. ಆಹಾರ ಮೌಲ್ಯವರ್ಧನೆ, ಸಂಸ್ಕರಣೆ, ದಾಸ್ತಾನು ಮತ್ತು ಪ್ಯಾಕೇಜಿಂಗ್​ಗಳಿಗಾಗಿ ಹೊಸ ತಂತ್ರಜ್ಞಾನ ಪರಿಚಯಿಸಲಾಗುವುದು ಎಂದರು.

ವಿಶ್ವಬ್ಯಾಂಕ್ ಪ್ರಾಯೋಜಿತ ಸುಜಲಾ-III ಯೋಜನೆಯನ್ನು ಜಾರಿಗೊಳಿಸಿರುವ 12 ಮಳೆ ಆಶ್ರಿತ ಜಿಲ್ಲೆಗಳ 2500 ಗ್ರಾಮಗಳ ಒಂದು ಲಕ್ಷಕ್ಕೂ ಹೆಚ್ಚು ರೈತರಿಗೆ ಭೂ ಸಂಪನ್ಮೂಲ ಯಾದಿಯ ತರಬೇತಿ ನೀಡಿ, ಕಾರ್ಡ್ ವಿತರಿಸಲು 10 ಕೋಟಿ ರೂ. ಅನುದಾನ ಮೀಸಲಿಡುವುದಾಗಿ ಘೋಷಿಸಿದರು.

ಹಾಗೇ ವಿಶ್ವಬ್ಯಾಂಕ್​ನಿಂದ ಅನುದಾನ ಪಡೆದಿರುವ ಹೊಸ ಬಹು-ರಾಜ್ಯ ಜಲಾನಯನ ಯೋಜನೆಯಲ್ಲಿ ಮುಂದಿನ ಆರುವರ್ಷದ ಅವಧಿಗೆ ಕರ್ನಾಟಕವೂ ಭಾಗಿಯಾಗಲಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net