

ಬೆಂಗಳೂರು: ಇಂದು ಬೆಳಗ್ಗೆ 10.15ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಜೆಟ್ ಮಂಡನೆ ಆರಂಭಿಸುತ್ತಿದ್ದಂತೆ ಪ್ರತಿಪಕ್ಷ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿ ಸದನದಲ್ಲಿ ಗದ್ದಲ ಸೃಷ್ಟಿಸಿದೆ.
ಕಲಾಪಕ್ಕೆ ಆಗಮಿಸಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕಿವಿ ಮೇಲೆ ಹೂ ಇಟ್ಟುಕೊಂಡು ಬಂದಿರುವುದನ್ನು ಉಲ್ಲೇಖಿಸಿದ ಸಿಎಂ ಬೊಮ್ಮಾಯಿ, ಕಿವಿ ಮೇಲೆ ಹೂ ಇಟ್ಟುಕೊಳ್ಳುವುದು ಬೇಡ ಎಂದು ನಾನು ಹೇಳುತ್ತೇನೆ. ಆದರೂ ಅವರು ಹೂ ಇಟ್ಟುಕೊಂಡು ಬಂದಿದ್ದಾರೆ. ಇದು ಸರಿಯಲ್ಲ ಎಂಬುದು ನನ್ನ ಭಾವನೆ. ಇಷ್ಟು ದಿನ ಜನಗಳ ಕಿವಿ ಮೇಲೆ ಹೂ ಇಡುತ್ತಿದ್ದರು. ಈಗ ಜನ ಅವರ ಕಿವಿ ಮೇಲೆ ಹೂ ಇಟ್ಟುಕೊಳ್ಳುತ್ತಿದ್ದಾರೆ. ಮುಂದೆಯು ಇಡುತ್ತಾರೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಈ ಬಜೆಟ್ ಮೂಲಕ ರಾಜ್ಯದ 7 ಕೋಟಿ ಜನರ ಕಿವಿಗೆ ಹೂ ಇಡಲು ಹೊರಟಿದ್ದಾರೆ ಎಂದು ತಿರುಗೇಟು ನೀಡಿದರು. ಈ ವೇಳೆ ಸದನದಲ್ಲಿ ಗದ್ದಲ ಏರ್ಪಟ್ಟಿತು. ಬಳಿಕ ಸ್ಪೀಕರ್ ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಸರ್ಕಾರದ ಅವಧಿಯ ಕೊನೆಯ ಬಜೆಟ್ ಮಂಡನೆ ಮಾಡುತ್ತಿದ್ದಾರೆ. ಹಣಕಾಸು ಖಾತೆಯನ್ನೂ ಹೊಂದಿರುವ ಸಿಎಂ ಬೊಮ್ಮಾಯಿ ಅವರ ಪಾಲಿಗೆ ಇದು 2ನೇ ಬಜೆಟ್ ಮಂಡನೆಯಾಗಿದೆ.