

ಬೆಂಗಳೂರು: ಈ ವರ್ಷದ ಮೊದಲ ಹಾಗೂ ಬೊಮ್ಮಾಯಿ ಸರ್ಕಾರದ ಕೊನೆಯ ವಿಧಾನ ಮಂಡಲದ ಅಧಿವೇಶನಕ್ಕೆ ದಿನಾಂಕ ನಿಗದಿಯಾಗಿದೆ. ಫೆ.10ರಂದು ರಾಜ್ಯಪಾಲರು ವಿಧಾನ ಮಂಡಲ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲಿದ್ದು, 17ಕ್ಕೆ 2023-24ನೇ ಸಾಲಿನ ಆಯವ್ಯಯ ಮಂಡನೆಯಾಗಲಿದೆ. ಶುಕ್ರವಾರ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಕಲ್ಲು ಕ್ವಾರಿ ಮರು ಹೊಂದಾಣಿಕೆಗೆ ಅವಕಾಶ, ರಾಜ್ಯದ 100 ಕಡೆಗಳಲ್ಲಿ ಅಂಬೇಡ್ಕರ್ ಹಾಸ್ಟೆಲ್ ನಿರ್ವಣಕ್ಕೆ 600 ಕೋಟಿ ರೂ. ನೀಡುವುದು ಸೇರಿ ಹಲವು ಮಹತ್ವದ ನಿರ್ಣಯಗಳಿಗೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.
ಫೆ.10ರಂದು ಶುಕ್ರವಾರ ರಾಜ್ಯಪಾಲರು ಮಾಡುವ ಜಂಟಿ ಅಧಿವೇಶನದ ಭಾಷಣ ಕುರಿತು ಫೆ.13ರಿಂದ 16ರವರೆಗೂ ಚರ್ಚೆಗೆ ಅವಕಾಶ ಸಿಗಲಿದೆ. ಬಳಿಕ 17ರಂದು ಬಜೆಟ್ ಮಂಡನೆಯಾಗಲಿದೆ. ಫೆ.20ರಿಂದ 24ರವರೆಗೂ ಬಜೆಟ್ ಮೇಲಿನ ಚರ್ಚೆಗೆ ಅವಕಾಶ ನೀಡಲಾಗುತ್ತದೆ. ಸದ್ಯಕ್ಕೆ ಸರ್ಕಾರ ಅಧಿವೇಶನ ಕೊನೆಗೊಳಿಸುವ ದಿನವನ್ನು ನಿಗದಿ ಮಾಡಿಲ್ಲ. ಅಂದರೆ, ಕಲಾಪದಲ್ಲಿ ಶಾಸಕರ ಹಾಜರಾತಿ ಮತ್ತು ಆಸಕ್ತಿ ಮೇಲೆ ಕೊನೆಗೊಳಿಸುವ ದಿನವನ್ನು ನಿಗದಿಮಾಡಲು ಸರ್ಕಾರ ನಿರ್ಣಯಿಸಿದೆ.
100 ಕಡೆ ಅಂಬೇಡ್ಕರ್ ಹಾಸ್ಟೆಲ್: ರಾಜ್ಯದ 100 ಕಡೆಗಳಲ್ಲಿ ಅಂಬೇಡ್ಕರ್ ಹಾಸ್ಟೆಲ್ ಕಟ್ಟಡ ನಿರ್ವಿುಸಲು 600 ಕೋಟಿ ಅನುದಾನ ಬಿಡುಗಡೆಗೆ ಸಮ್ಮತಿಸಲಾಗಿದೆ. ಸಮಾಜ ಕಲ್ಯಾಣ ಇಲಾಖೆ ಅಧೀನದಲ್ಲಿ ನಿರ್ವಹಣೆಯಾಗುತ್ತಿರುವ ಹಾಸ್ಟೆಲ್ನಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದ್ದು, ಹಾಸ್ಟೆಲ್ ಪ್ರವೇಶಕ್ಕೆ ಸಾಕಷ್ಟು ಬೇಡಿಕೆ ಇದೆ. ಈ ಹಿನ್ನೆಲೆಯಲ್ಲಿ ಹೆಚ್ಚು ಅಗತ್ಯ ಇರುವ ಕಡೆ ಆದ್ಯತೆ ಮೇಲೆ ಹಾಸ್ಟೆಲ್ ಕಟ್ಟಡ ನಿರ್ವಿುಸಲು ಸಂಪುಟ ಒಪ್ಪಿದೆ. ಅದೇ ರೀತಿ ಉಡುಪಿ, ಶಿವಮೊಗ್ಗ, ಉತ್ತರ ಕನ್ನಡದಲ್ಲಿ ನಾರಾಯಣ ಗುರು ಸ್ಮರಣಾರ್ಥ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗಾಗಿ ವಸತಿ ಶಾಲೆ ಸ್ಥಾಪನೆಗೆ 72 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ.
ಸೆಸ್ ಪರಿಷ್ಕರಣೆ: ಸಕ್ಕರೆ, ಕಬ್ಬು ಸಂಶೋಧನೆಗಾಗಿ ಸ್ಥಾಪಿತವಾಗಿರುವ ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆ ನಡೆಸಲು ಸೆಸ್ ಸಂಗ್ರಹಿಸುತ್ತಿದ್ದು, ಸೆಸ್ ದರವನ್ನು ಪರಿಷ್ಕರಿಸಲು ನಿರ್ಧರಿಸಲಾಗಿದೆ. ಕಬ್ಬು ಅರೆಯುವ ಸಾಮರ್ಥ್ಯದ ಮೇಲೆ ಸೆಸ್ ಬೇರೆ ಬೇರೆ ರೂಪದಲ್ಲಿದೆ. 30-40 ವರ್ಷದ ಹಿಂದೆ ನಿಗದಿಯಾದ ಸೆಸ್ ಆಗಿದ್ದು, ಸಕ್ಕರೆ ಕಾರ್ಖಾನೆಗಳು 50 ಸಾವಿರ, ಒಂದು ಲಕ್ಷ ರೂ. ನೀಡುವುದು ಕಷ್ಟವಾಗಲ್ಲ ಎಂಬ ಕಾರಣಕ್ಕೆ ಸಂಸ್ಥೆ ನಡೆಸಲು ದರ ಪರಿಷ್ಕರಣೆ ಮಾಡಿರುವುದಾಗಿ ಸರ್ಕಾರ ಹೇಳಿಕೊಂಡಿದೆ.
ಕಲ್ಲು ಕ್ವಾರಿ ಮರು ಹೊಂದಾಣಿಕೆ: ಕಲ್ಲು ಕ್ವಾರಿ (ಮ್ಯಾನುವಲ್) ಜಾಗ ನಿಗದಿಯಲ್ಲಿನ ಗೊಂದಲ ಸರಿಪಡಿಸಿ, ವ್ಯತ್ಯಾಸ ಇರುವ ಕಡೆ ಅಕ್ರಮವನ್ನು ಸಕ್ರಮ ಮಾಡಿಕೊಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಕಲ್ಲು ಗಣಿ ಗುತ್ತಿಗೆ ಮಂಜೂರಾತಿ ಪ್ರದೇಶದಲ್ಲಿ ಸಕ್ಷಮ ಕಂದಾಯ ನ್ಯಾಯಾಲಯದಲ್ಲಿ ಉದ್ಭವಿಸುವ ಮೂಲ ಮಂಜೂರಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ನಿರ್ಣಯ ಕೈಗೊಂಡಿದೆ. ಕ್ವಾರಿ ನಡೆಸಲು ಸರ್ಕಾರ ಗುತ್ತಿಗೆ ನೀಡಿದ್ದು, ಕೆಲವು ಸಲ ಪ್ರದೇಶ ವ್ಯತ್ಯಾಸವಾಗುತ್ತಿತ್ತು. ಗುತ್ತಿಗೆ ಪಡೆದವರು ಅರಿಯದೆ ಕೆಲಸ ಮಾಡಿಕೊಂಡು ಹೋಗುತ್ತಿದ್ದರು. ಒಂದೊಮ್ಮೆ ಸ್ಥಳ ಬದಲಾವಣೆಯಾಗಿದ್ದರೆ ಅದನ್ನು ಸಕ್ರಮ ಮಾಡಿಕೊಟ್ಟು, ಗಣಿಗಾರಿಕೆ ಮುಂದುವರಿಸಲು ಅವಕಾಶವಿರಲಿದೆ. ಸ್ಕೆಚ್ನಲ್ಲಿ ವ್ಯತ್ಯಾಸವಾಗಿದ್ದು, ಇಲಾಖೆಯವರಿಗೆ ಸರಿ ಎಂದು ಕಂಡುಬಂದರೆ ಮಾತ್ರ ಅಲ್ಲಿ ಮುಂದುವರಿಸಲು ಅವಕಾಶ ನೀಡಲಾಗುತ್ತದೆ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಸಂಪುಟ ಸಭೆ ಬಳಿಕ ವಿವರಿಸಿದರು. ಇನ್ನು ಕ್ವಾರಿ ವಿಚಾರದಲ್ಲಿ 4-5 ವಿಷಯಗಳಿವೆ, ಆ ಸಮಸ್ಯೆಯನ್ನು ಸಭೆ ನಡೆಸಿ ಬಗೆಹರಿಸಲಾಗುತ್ತದೆ. ಅಕ್ರಮ ಸಂಬಂಧ ದಂಡದ ಮೊತ್ತ ಹೆಚ್ಚಿಸಿರುವುದು, ಡ್ರೋನ್ ಸರ್ವೆ ವರದಿ ಆಧಾರದಲ್ಲಿ ಪರಿಗಣನೆಯಲ್ಲಿನ ದೋಷ, ಗುತ್ತಿಗೆದಾರರಿಂದ ರಾಯಲ್ಟಿ ಸ್ವೀಕಾರದ ಬಗ್ಗೆ ಆಕ್ಷೇಪಣೆ ಇದೆ. ಈ ಎಲ್ಲ ಸಮಸ್ಯೆ ಬಗೆಹರಿಸಲಾಗುತ್ತದೆ ಎಂದು ಹೇಳಿದರು.
ಮತ್ತೆ 114 ನಮ್ಮ ಕ್ಲಿನಿಕ್ ಶುರು: ಪಿಎಂ ಅಭೀಮ್ ಯೋಜನೆಯಡಿ ಬಿಡುಗಡೆಯಾಗಿರುವ ಅನುದಾನದಲ್ಲಿ 114 ನಗರ ಯೋಗ ಕ್ಷೇಮ ಕೇಂದ್ರಗಳನ್ನು ‘ನಮ್ಮ ಕ್ಲಿನಿಕ್’ಗೆ ಪರಿವರ್ತಿಸಲು ಅವಕಾಶ ಮಾಡಿಕೊಡಲಾಗಿದೆ. ಈ ಹಿಂದೆ 300 ನಮ್ಮ ಕ್ಲಿನಿಕ್ ಸ್ಥಾಪನೆಗೆ ಅನುಮೋದನೆ ನೀಡಲಾಗಿತ್ತು. ಒಟ್ಟಾರೆ ಕೇಂದ್ರ ಸರ್ಕಾರದಿಂದ 500 ಕೇಂದ್ರಗಳನ್ನು ತೆರೆಯಲು ಅವಕಾಶ ಸಿಗಲಿದೆ. ಹಾಗೆಯೇ, ಗ್ರಾಮೀಣ ಭಾಗದಲ್ಲಿ ಆರೋಗ್ಯ ಉಪ ಕೇಂದ್ರ (ಎಎನ್ಎಂ ಸೆಂಟರ್) ಆರೋಗ್ಯ ಮತ್ತು ಕ್ಷೇಮ ಕೇಂದ್ರವಾಗಿ ಮೇಲ್ದರ್ಜೆಗೇರಿಸಲು ಉದ್ದೇಶಿಸಲಾಗಿದೆ.
ಎನ್ಪಿಎ 1 ಬಾರಿಗೆ ತೀರುವಳಿ: ಕರ್ನಾಟಕ ರಾಜ್ಯ ಹಣಕಾಸು ನಿಗಮದ ಒಂದಾವರ್ತಿ ತೀರುವಳಿ ಯೋಜನೆ ಪ್ರಕಾರ, 2003ರಿಂದ ಎನ್ಪಿಎ ಆದ, ಪ್ರಸ್ತುತ ಸಾಲ ಮರುಪಾವತಿ ಮಾಡಲು ಶಕ್ತರಾಗಿಲ್ಲದವರು, ಸಾಲ ಪಡೆದು ಮೃತರಾದವರ ಪ್ರಕರಣದಲ್ಲಿ ಒಂದಾವರ್ತಿ ರಿಯಾಯಿತಿ ನೀಡಲು ಅವಕಾಶ ಮಾಡಲಾಗುತ್ತಿದೆ. ಈ ಹಿಂದೆ ನೀಡಿದಷ್ಟು ರಿಯಾಯಿತಿ ನೀಡುತ್ತಿಲ್ಲ. ಬದಲಿಗೆೆ, ಸುಸ್ತಿ ಸಾಲ ಕಡಿಮೆ ಮಾಡುವುದು ಅಥವಾ ಬಡ್ಡಿ ದರದಲ್ಲಿ ರಿಯಾಯಿತಿ ನೀಡಲಾಗುತ್ತದೆ. ಸದ್ಯ ನಿಗಮದಲ್ಲಿ ಅಸಲು 127 ಕೋಟಿ ರೂ. ಬಾಕಿ ಇದ್ದರೆ, 217.65 ಕೋಟಿ ಬಡ್ಡಿ ಮೊತ್ತ ಬಾಕಿ ಇದೆ. ಒಟ್ಟಾರೆ 345 ಕೋಟಿ ರೂ. ಬಾಕಿ ಇದೆ. ಹಾಗೆಯೇ, ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಗೆ 54.6 ಕೋಟಿ ಶೇರು ಬಂಡವಾಳ ಎತ್ತುವಳಿ ಮಾಡಲು ಸಂಪುಟ ಅನುಮತಿ ನೀಡಿದೆ.