

ಬೆಂಗಳೂರು: ರಾಜಕೀಯ ವೃತ್ತಿಯಲ್ಲಿ ಮೋದಿಯಷ್ಟು ಸುಳ್ಳು ಹೇಳುವ ಪ್ರಧಾನಿಯನ್ನು ನಾನು ನೋಡಿಲ್ಲ ಎಂದು ಸಿಎಂ ಸಿದ್ದರಾಮಯ್ಯ(CM Siddarmaiah) ಅವರು ನೀಡಿದ ಹೇಳಿಕೆಯನ್ನು ಉಲ್ಲೇಖಿಸಿ ಟ್ವೀಟ್(Tweet) ಮಾಡಿರುವ ಬಿಜೆಪಿ, ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ನೀವು ರಾಜ್ಯದ ಜನತೆಗೆ ಮೋಸ ಮಾಡಿದ್ದೀರಿ ಎಂದು ಟ್ವೀಟ್ ಮಾಡುವ ಮೂಲಕ ಸಿದ್ದರಾಮಯ್ಯ ಅವರನ್ನು ಟೀಕಿಸಿದೆ.
ಬಿಜೆಪಿ(BJP) ಮಾಡಿರುವ ಟ್ವೀಟ್ ಹೀಗಿದೆ, "ಗ್ಯಾರಂಟಿ ಹೆಸರಿನಲ್ಲಿ ರಾಜ್ಯದ ಜನರಿಗೆ ಕಿವಿ ಮೇಲೆ ಹೂವಿಟ್ಟು ಮುಖ್ಯಮಂತ್ರಿ ಆದವರು ತಾವು ಸಿದ್ದರಾಮಯ್ಯನವರೆ, ತಮಗೆ ಪ್ರಧಾನಿ ಮೋದಿ ಅವರ ಬಗ್ಗೆ ಮಾತನಾಡುವ ಯಾವುದೇ ಅರ್ಹತೆ ಉಳಿದಿಲ್ಲ" ಎಂದು ಟ್ವೀಟ್ ಮಾಡಿದೆ.
"21ನೇ ಶತಮಾನದ ಸತ್ಯಹರಿಶ್ಚಂದ್ರರಂತೆ ವರ್ತಿಸುವ ತಮ್ಮ ಈ ಹಾಸ್ಯಾಸ್ಪದ ಹೇಳಿಕೆ ಕೇಳಿ ‘ನಾನು ಮುಖ್ಯಮಂತ್ರಿಯಾಗಿ ಮುಂದುವರಿತೀನೋ ಇಲ್ವೊ ಬೇರೆ ವಿಚಾರ, ಡಿ.ಕೆ.ಶಿವಕುಮಾರ್(DK Shivakumar) ಎಂದಿಗೂ ಮುಖ್ಯಮಂತ್ರಿ ಆಗಲ್ಲ’ ಎಂದು ತಾವು ಹೇಳಿರುವುದೊಂದೇ ತಮ್ಮ ಜೀವನದಲ್ಲಿ ತಾವು ನುಡಿದಿರುವ ಸತ್ಯ ಎಂದು ಅನೇಕ ಕಾಂಗ್ರೆಸ್(Congress) ನಾಯಕರು ಪಿಸುಗುಡುತ್ತಿದ್ದಾರೆ. ಈ ಬಗ್ಗೆ ಮಹಾದೇವಪ್ಪನವರಿಗೋ, ಎಂ.ಬಿ. ಪಾಟೀಲರಿಗೋ ಪರಿಶೀಲಿಸುವುದಕ್ಕೆ ಹೇಳಿ" ಎಂದು ಟ್ವೀಟ್ ಮೂಲಕ ವ್ಯಂಗ್ಯವಾಡಿದೆ.