ಜನ ಜಾಗೃತಿಗಾಗಿ ರಾಜ್ಯ ಬಿಜೆಪಿ 14 ತಂಡಗಳು ಸನ್ನದ್ಧ | Misappropriation of funds by the Congress government

BJP
Published on

ಬೆಂಗಳೂರು: ರಾಜ್ಯ ಸರ್ಕಾರ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಯೋಜನೆಗಳಿಗೆ ಮೀಸಲಾದ ಅನುದಾನವನ್ನು ಅನ್ಯಉದ್ದೇಶಕ್ಕೆ ಬಳಸುತ್ತಿರುವುದರ ವಿರುದ್ಧ ಬಿಜೆಪಿ ಜನಜಾಗೃತಿ ಆಂದೋಲನ ಹಮ್ಮಿಕೊಂಡಿದ್ದು, 14 ತಂಡಗಳನ್ನು ರಚಿಸಿದೆ. ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಪದಾಧಿಕಾರಿಗಳು, ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳು ತಂಡದಲ್ಲಿದ್ದಾರೆ.

ತಂಡ 1- (ಕೊಪ್ಪಳ, ಬಳ್ಳಾರಿ) ಛಲವಾದಿ ನಾರಾಯಣಸ್ವಾಮಿ, ತಂಡ-2 (ಬೀದರ್, ಕಲಬುರಗಿ) ಗೋವಿಂದ ಕಾರಜೋಳ, ತಂಡ 3- (ಚಿಕ್ಕೋಡಿ, ಬೆಳಗಾವಿ) ಎನ್.ಮಹೇಶ್, ತಂಡ 4 (ರಾಯಚೂರು, ಯಾದಗಿರಿ) ಬಸವರಾಜ ಬೊಮ್ಮಾಯಿ, ತಂಡ-5 (ಬಾಗಲಕೋಟೆ, ವಿಜಯಪುರ) ಆರ್.ಅಶೋಕ, ತಂಡ 6 (ಉತ್ತರ ಕನ್ನಡ, ಹುಬ್ಬಳ್ಳಿ ಧಾರವಾಡ) ಸುನೀಲ್ ಕುಮಾರ್, ತಂಡ 7- (ಮಂಡ್ಯ, ಹಾಸನ) ಕೋಟಾ ಶ್ರೀನಿವಾಸ ಪೂಜಾರಿ, ತಂಡ 8- (ಮೈಸೂರು, ಚಾಮರಾಜನಗರ) ಬಿ.ಶ್ರೀರಾಮುಲು, ತಂಡ 9- (ಉಡುಪಿ, ಮಂಗಳೂರು) ಎನ್.ರವಿಕುಮಾರ್.

ತಂಡ 10- (ಬೆಂಗಳೂರು, ರಾಮನಗರ) ಬಿ.ವೈ.ವಿಜಯೇಂದ್ರ , ತಂಡ 11- (ಚಿತ್ರದುರ್ಗ, ತುಮಕೂರು) ಮುನಿಸ್ವಾಮಿ, ತಂಡ 12- (ಚಿಕ್ಕಬಳ್ಳಾಪುರ, ಕೋಲಾರ) ಕೆ.ನಾರಾಯಣಸ್ವಾಮಿ, ತಂಡ 13- (ಶಿವಮೊಗ್ಗ, ದಾವಣಗೆರೆ) ಪಿ.ರಾಜೀವ, ತಂಡ 14- (ಹಾವೇರಿ, ಗದಗ) ಸುನೀಲ್ ವಲ್ಯಾಪುರೆ ನೇತೃತ್ವದಲ್ಲಿ ತಂಡ ರಚಿಸಲಾಗಿದೆ. ಪ್ರತಿ ತಂಡದಲ್ಲಿ 9-10 ಪ್ರಮುಖರಿದ್ದು, ತಮಗೆ ವಹಿಸಿದ ಜಿಲ್ಲೆಗಳಲ್ಲಿ ಪ್ರವಾಸ ನಡೆಸಿ ಸಭೆಗಳಲ್ಲಿ ಪಾಲ್ಗೊಳ್ಳುವರು.

ಮುನಿದವರಿಗೂ ಮಣೆ

ಪಕ್ಷದ ಬೆಳವಣಿಗೆ ಕುರಿತು ಅಸಮಾಧಾನಗೊಂಡಿದ್ದ ಮಾಜಿ ಸಚಿವ ಬಿ.ಶ್ರೀರಾಮುಲು ಮತ್ತು ಮಾಜಿ ಸಂಸದ ಬಿ.ವಿ.ನಾಯಕ್ ಅವರಿಗೆ ತಂಡದಲ್ಲಿ ಅವಕಾಶ ನೀಡಲಾಗಿದೆ. ಹಾಗೆಯೇ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ಮುಕ್ತಗೊಳಿಸುವಂತೆ ಕೋರಿದ್ದ ವಿ.ಸುನಿಲ್ ಕುಮಾರ್ ಅವರಿಗೆ ಒಂದು ತಂಡದ ಜವಾಬ್ದಾರಿಯನ್ನೇ ನೀಡಲಾಗಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ೆ.27, 28, ಮಾ.1 ಮತ್ತು 2ರಂದು ಈ ತಂಡಗಳು ಪ್ರವಾಸ ಕೈಗೊಳ್ಳಲಿವೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಎಸ್‌ಸಿಎಸ್‌ಪಿ- ಟಿಎಸ್‌ಪಿ ಯೋಜನೆಗೆ ಹಣಕಾಸು ವರ್ಷದಲ್ಲಿ ಪರಿಶಿಷ್ಟರ ಉಪ ಯೋಜನೆಗಾಗಿ 39,914 ಕೋಟಿ ರೂ. ಘೋಷಿಸಿದ್ದರು. ಆದರೆ, 23,485 ಕೋಟಿ ರೂ. ಮಾತ್ರ ಬಿಡುಗಡೆ ಮಾಡಿದ್ದಾರೆ. ಅದರಲ್ಲಿ 20,404 ಕೋಟಿ ರೂ. ಮಾತ್ರ ವೆಚ್ಚವಾಗಿದೆ. ಅನ್ಯ ಉದ್ದೇಶಕ್ಕೂ ಅನುದಾನ ಬಳಸಿದ್ದಾರೆ. ಕಳೆದ ಆರ್ಥಿಕ ವರ್ಷದಲ್ಲೂ ಬೇರೆ ಉದ್ದೇಶಕ್ಕಾಗಿ ಬಳಸಲಾಗಿತ್ತು. ಈ ಸಂಗತಿ ಜನರಿಗೆ ಗೊತ್ತಾಗಬೇಕೆಂಬ ಕಾರಣಕ್ಕೆ ಆಂದೋಲನ ಹಮ್ಮಿಕೊಂಡಿರುವುದಾಗಿ ಬಿ.ವೈ.ವಿಜಯೇಂದ್ರ ಹೇಳಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net