ಆರಂಭವಾಗದ ಉದ್ದಿಮೆಗಳು

AKSHAYA FOOD PRAK
Published on

ಡಿಪಿಎನ್ ಶ್ರೇಷ್ಠಿ ಚಿತ್ರದುರ್ಗ: ಹಿರಿಯೂರು ತಾಲೂಕು ಹುಚ್ಚವ್ವನಹಳ್ಳಿ ಅಕ್ಷಯ ಫುಡ್‌ಪಾರ್ಕ್‌ನಲ್ಲಿ ಈವರೆಗೂ ನಿರೀಕ್ಷಿತ ಮಟ್ಟದಲ್ಲಿ ಉದ್ದಿಮೆಗಳು ಪ್ರಾರಂಭವಾಗದಿರುವ ಕುರಿತಂತೆ ನಡೆಸಿರುವ ಜಂಟಿ ತಪಾಸಣೆ ವರದಿಯನ್ನು ಕೈಗಾರಿಕೆ ಮತ್ತು ವಾಣಿಜ್ಯಇಲಾಖೆ ಜಂಟಿ ನಿರ್ದೇಶಕರ ನೇತೃತ್ವದ ಸಮಿತಿ, ಕೆಐಡಿಬಿಗೆ ಸಲ್ಲಿಸಿದೆ.

ರಾಜ್ಯ ಸರ್ಕಾರ 2005ರಿಂದ ಹಂತ, ಹಂತವಾಗಿ 106 ಎಕರೆ ಜಮೀನನ್ನು ಪಾರ್ಕ್‌ಗೆ 10 ವರ್ಷಗಳ ಅವಧಿಗೆ ಗುತ್ತಿಗೆ ನೀಡಿದ್ದರೂ ಉದ್ದಿಮೆದಾರರಿಗೆ ಕೊಟ್ಟಿದ್ದ 3 ವರ್ಷಗಳ ಸಬ್‌ಲೀಸ್ ಅವಧಿಯನ್ನು 10 ವರ್ಷಗಳಿಗೆ ವಿಸ್ತರಿಸದೆ ಇರುವುದು ಸೇರಿ ನಾನಾ ಲೋಪ ದೋಷಗಳನ್ನು ಗುರುತಿಸಿರುವ ಕೈಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಬಿ.ಆನಂದ್ ನೇತೃತ್ವದ ಸಮಿತಿ, ಸೆ.14ರಂದು ಕೆಐಡಿಬಿ ಸಿಇಒಗೆ ವರದಿ ಸಲ್ಲಿಸಿದೆ.

ಪಾರ್ಕ್‌ನಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಉದ್ದಿಮೆಗಳ ಆರಂಭ ಆಗದಿರುವ ಕುರಿತಂತೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಜಿಲ್ಲಾಮಟ್ಟದ ಏಕಗವಾಕ್ಷಿ ಸಮಿತಿ ಸಭೆಗಳಲ್ಲಿ ಪರಿಸ್ಥಿತಿ ಅವಲೋಕಿಸಿದ್ದರೂ ಸಮಸ್ಯೆಗಳಿಗೆ ಪರಿಹಾರ ದೊರೆತಿಲ್ಲವೆಂಬ ಅಸಹಾಯಕದ ಮಾತುಗಳು ಕೈಗಾರಿಕೆ ಇಲಾಖೆ ವಲಯದಲ್ಲಿ ವ್ಯಕ್ತವಾಗಿದೆ.

ಕಳೆದ ತಿಂಗಳು 28ರಂದು ಜಿಲ್ಲಾಧಿಕಾರಿ ದಿವ್ಯಾಪ್ರಭು ಅವರು ನಡೆಸಿದ್ದ ಏಕಗವಾಕ್ಷಿ ಸಭೆಯಲ್ಲಿ ಸಮಸ್ಯೆಗಳನ್ನು ವಿಶ್ಲೇಷಿಸಿ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿದ್ದಾರೆ. ಪಾರ್ಕ್‌ನವರಿಗೂ ಎಚ್ಚರಿಕೆ ಕೊಟ್ಟಿದ್ದರು. ಸಬ್‌ಲೀಸ್ ಪಡೆದ ಉದ್ದಿಮೆದಾರರಿಗೆ ಪಾರ್ಕ್, ಎನ್‌ಒಸಿ ಕೊಡದೆ ಇರುವುದರಿಂದ ಸಾಲ ಸೌಲಭ್ಯ ಪಡೆಯಲು ಸಾಧ್ಯವಾಗಿಲ್ಲ ಹಾಗೂ 3 ವರ್ಷಗಳ ಸಬ್‌ಲೀಸ್ ಅವಧಿ ವಿಸ್ತರಿಸಲು ಕೂಡ ನಿರಾಕರಿಸಿದೆ. ಇದರಿಂದಾಗಿ ಉದ್ದಿಮೆದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಪರಿಶಿಷ್ಟ ಜಾತಿ, ಪಂಗಡದ ಉದ್ದಿಮೆದಾರರಿಗೆ ಕೈಗಾರಿಕೆ ಇಲಾಖೆಯ ಸಾಫ್ಟ್‌ಸೀಡ್ ಕ್ಯಾಪಿಟಲ್ ಮತ್ತು ಸಹಾಯಧನ ಪಡೆಯಲು 10 ವರ್ಷಗಳ ಸಬ್‌ಲೀಸ್ ಅಗತ್ಯವಿದ್ದು, ಇವರಿಗೂ ಸಾಕಷ್ಟು ಅನ್ಯಾಯವಾಗುತ್ತಿದೆ ಎಂಬ ಅಸಮಾಧಾನವನ್ನು ಸಮಿತಿ ತನ್ನ ವರದಿಯಲ್ಲಿ ವ್ಯಕ್ತ ಪಡಿಸಿದೆ.

ಸಮಸ್ಯೆಗಳ ಕುರಿತಂತೆ ಫುಡ್‌ಪಾರ್ಕ್ ವ್ಯವಸ್ಥಾಪಕ ನಿರ್ದೇಶಕರಿಗೆ ಹಲವು ಬಾರಿ ಮಾಡಿ ಮನವಿ ಮಾಡಿದ್ದರೂ ನಿರ್ಲಕ್ಷೃ ಧೋರಣೆ ಪ್ರದರ್ಶಿಸುತ್ತಿದೆ ಎಂಬ ಉದ್ದಿಮೆದಾರರ ದೂರಿನ ಕುರಿತಂತೆಯೂ ಸಮಿತಿ ತನ್ನ ವರದಿಯಲ್ಲಿ ಕೆಐಎಡಿಬಿ ಸಿಇಒ ಅವರ ಗಮನಕ್ಕೆ ತಂದಿದೆ.

ಲೀಸ್ ಕಂ ಸೇಲ್ ಅಗ್ರಿಮೆಂಟ್ ಕಂಡಿಷನ್‌ಗಳ ಪ್ರಕಾರ ಉದ್ದಿಮೆಗಳ ಆರಂಭವಾಗದಿರುವ ಕುರಿತಂತೆ, ಪಾರ್ಕ್ ಯಾವುದೇ ಕ್ರಮ ವಹಿಸಿಲ್ಲ. ರಸ್ತೆ, ಚರಂಡಿ, ಬೀದಿದೀಪ ಮೊದಲಾದ ಮೂಲ ಸೌಕರ್ಯಗಳನ್ನು ಸಮರ್ಪಕವಾಗಿ ಒದಗಿಸಿಲ್ಲ. ಕೆಐಎಡಿಬಿ 2022ಮೇ 31ರಂದು ಪಾರ್ಕ್‌ಗೆ 10 ವರ್ಷಗಳ ಗುತ್ತಿಗೆ ಅವಧಿ ವಿಸ್ತರಿಸುವುದರೊಂದಿಗೆ ಒಂದು ವರ್ಷದೊಳಗೆ ಮೂಲ ಸೌಕರ್ಯಗಳನ್ನು ಒದಗಿಸಬೇಕೆಂಬ ಹಲವು ಗುತ್ತಿಗೆ ಷರತ್ತುಗಳನ್ನು ಉಲ್ಲಂಘಿಸಲಾಗಿದೆ.

ಜಿಲ್ಲಾಧಿಕಾರಿ/ಕೈಗಾರಿಕೆ ಇಲಾಖೆ ಜಂಟಿ ನಿರ್ದೇಶಕರ ಗಮನಕ್ಕೆ ತಾರದೆ ಹಾಗೂ ಏಕಗವಾಕ್ಷಿ ಸಮಿತಿ ಅನುಮೋದನೆಯನ್ನೂ ಪಡೆಯದೇ, ಏಕಪಕ್ಷೀಯವಾಗಿ ವಿವಿಧ ದರಗಳಲ್ಲಿ ಘಟಕಗಳಿಗೆ ರಿಯಲ್ ಎಸ್ಟೇಟ್‌ನಂತೆ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಇಲ್ಲಿ 96 ಕೈಗಾರಿಕೆ ಪ್ಲಾಟ್‌ಗಳಿವೆ. ಇವುಗಳಲ್ಲಿ 89 ಹಂಚಿಕೆಯಾಗಿವೆ, 13 ಕಾರ‌್ಯನಿರ್ವಹಿಸುತ್ತಿವೆ. 7 ಸ್ಥಾಪನೆಯ ಪ್ರಗತಿಯಲ್ಲಿವೆ. ಹೊಸದುರ್ಗ ರಸ್ತೆಯಿಂದ ಪಾರ್ಕ್‌ವರೆಗೆ ಭಾರಿ ವಾಹನಗಳ ಓಡಾಟಕ್ಕೆ ಅಗತ್ಯ ರಸ್ತೆ ಕೂಡ ನಿರ್ಮಾಣವಾಗಬೇಕಿದೆ ಎಂದು ಸಮಿತಿ ತಿಳಿಸಿದೆ.

ಹಂಚಿಕೆಯಾಗಿರುವ ಜಮೀನು (ಎಕರೆ)
2005 ಜುಲೈ 16-50
2008-ಏಪ್ರಿಲ್-26-28.37
2009-ಡಿಸೆಂಬರ್ 27.30

ತಪಾಸಣಾ ಸಮಿತಿ: ಜಿಲ್ಲಾ ಕೈಗಾರಿಕೆ ಇಲಾಖೆ ಜಂಟಿ ನಿರ್ದೇಶಕ, ತುಮಕೂರು ಕೆಐಎಡಿಬಿ ಕಾರ‌್ಯನಿರ್ವಾಹಕ ಇಂಜಿನಿಯರ್, ಹಿರಿಯೂರು ತಹಸೀಲ್ದಾರ್ ಅವರನ್ನು ಒಳಗೊಂಡ ತಪಾಸಣೆ ಸಮಿತಿಯನ್ನು ರಚಿಸಲಾಗಿತ್ತು.

ತೊಂದರೆ: ಅಕ್ಷಯ ಫುಡ್ ಪಾರ್ಕ್‌ನಲ್ಲಿ ಉದ್ದಿಮೆಗಳ ಆರಂಭಕ್ಕೆ ಆಗಿರುವ ಲೋಪದೋಷಗಳನ್ನು ಗುರುತಿಸಿ ಕೆಐಡಿಬಿಗೆ ಜಂಟಿ ತಪಾಸಣಾ ವರದಿ ಸಲ್ಲಿಕೆಯಾಗಿದೆ. ಎನ್‌ಒಸಿ ಸಿಗದೆ ಉದ್ದಿಮೆದಾರರಿಗೆ ಸಾಲ ಸೌಲಭ್ಯ, ಎಸ್‌ಸಿ, ಎಸ್‌ಟಿ ಉದ್ದಿಮೆದಾರರಿಗೆ ಸಾಫ್ಟ್ ಸೀಡ್ ಕ್ಯಾಪಿಟಲ್ ಮತ್ತು ಸಹಾಯಧನಕ್ಕೂ ತೊಂದರೆಯಾಗಿದೆ.- ಬಿ.ಆನಂದ್, ಜಂಟಿ ನಿರ್ದೇಶಕ, ಜಿಲ್ಲಾ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಚಿತ್ರದುರ್ಗ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net