

ಸಿಂಧನೂರು: ತಾಲೂಕಿನಲ್ಲಿ ಕೇಂದ್ರೀಯ ವಿದ್ಯಾಲಯ ಆರಂಭಿಸಬೇಕೆಂಬ ದಶಕದ ಕೂಗಿಗೆ ಕೊನೆಗೂ ಹಸಿರು ನಿಶಾನೆ ದೊರೆತಿದ್ದು, ಆ.19 ರಿಂದ ಪ್ರವೇಶ ನೋಂದಣಿಗೆ ಅವಕಾಶ ನೀಡಿರುವುದು ಈ ಭಾಗದ ಜನರ ಸಂತಸಕ್ಕೆ ಕಾರಣವಾಗಿದೆ.
ಕಳೆದ ದಶಕದಿಂದ ತಾಲೂಕಿಗೆ ಕೇಂದ್ರೀಯ ವಿದ್ಯಾಲಯ ನೀಡಬೇಕೆಂದು ಅಂದಿನ ಕೊಪ್ಪಳ ಸಂಸದ ಸಂಗಣ್ಣ ಕರಡಿ ಅವರಿಗೆ ಸ್ಥಳೀಯರು ಬೇಡಿಕೆ ಇಟ್ಟಿದ್ದರು. ಮೊದಲ ಅವಧಿಯಲ್ಲಿ ಸಂಸದರು ಸಾಕಷ್ಟು ಬಾರಿ ಕೇಂದ್ರದ ಮುಂದೆ ಪ್ರಸ್ತಾಪವಿಟ್ಟರೂ, ಮಂಜೂರಾತಿ ದೊರೆತಿರಲಿಲ್ಲ. ಆದಾಗ್ಯೂ ಸಿಂಧನೂರು ತಾಲೂಕಿನ ಸ್ಥಿತಿಗತಿ, ಕೇಂದ್ರೀಯ ವಿದ್ಯಾಲಯದ ಅಗತ್ಯ ಕುರಿತು ಮನವರಿಕೆ ಮಾಡಿದ್ದರಿಂದ ಮೂರು ವರ್ಷಗಳ ಹಿಂದೆ ತಾಲೂಕಿಗೆ ಕೇಂದ್ರೀಯ ವಿದ್ಯಾಲಯ ಮಂಜೂರಾಗಿತ್ತು. ಅಂದುಕೊಂಡಂತೆ ಆಗಿದ್ದರೆ ಕೇಂದ್ರೀಯ ವಿದ್ಯಾಲಯ ಆರಂಭಗೊಂಡು ಎರಡು ವರ್ಷ ಆಗಬೇಕಾಗಿತ್ತು.
ಆದರೆ, ವಿದ್ಯಾಲಯ ನಿರ್ಮಾಣಕ್ಕೆ ಜಾಗದ ಕೊರತೆ ಕಾರಣ ಒಂದು ವರ್ಷ ವಿಳಂಬವಾಯಿತು. ಕೊನೆಗೆ ಮಸ್ಕಿ ರಸ್ತೆಯ ಏಳುರಾಗಿ ಕ್ಯಾಂಪ್‌ನಲ್ಲಿ ಸ್ಥಳ ಗುರುತಿಸಲಾಯಿತು. ಅಲ್ಲಿಯೂ ಅಡೆತಡೆ ಉಂಟಾಯಿತು. ನಂತರ ಪಿಡಬ್ಲ್ಯುಡಿ ಕ್ಯಾಂಪ್‌ನ ಆರ್‌ಎಂಎಸ್ ಶಾಲೆ ಕೇಂದ್ರೀಯ ವಿದ್ಯಾಲಯ ಆರಂಭಿಸುವ ಸಂಬಂಧ ನಾಮಫಲಕ ಅಳವಡಿಸಿತಾದರೂ ಶಾಲೆ ಆರಂಭಿಸಲು ಮತ್ತಷ್ಟು ವಿಘ್ನ ಉಂಟಾಯಿತು.
ಸಿಂಧನೂರು ನಾಗರಿಕರು ಮತ್ತೆ ಕೊಪ್ಪಳ ಸಂಸದ ಬಸವರಾಜ ಹಿಟ್ನಾಳ ಗಮನಕ್ಕೆ ತಂದರು. ಸಂಸದರು ಕೂಡ ಕೇಂದ್ರ ಸರ್ಕಾರದ ಮುಂದೆ ಕೇಂದ್ರೀಯ ವಿದ್ಯಾಲಯ ಆರಂಭಿಸಬೇಕೆಂದು ಬೇಡಿಕೆಯಿಟ್ಟು ಬೆಂಬಲಿಸಿ ಸ್ಥಳೀಯ ಶಾಸಕರು, ಎಂಎಲ್ಸಿ, ಮಾಜಿ ಸಂಸದ, ಶಾಸಕರು ಕೂಡ ಮನವಿ ಮಾಡಿದರು. ಕೊನೆಗೆ ಸರ್ಕಾರಿ ಮಹಾವಿದ್ಯಾಲಯದ ಪಕ್ಕದಲ್ಲಿ ತಾತ್ಕಾಲಿಕ ಕಟ್ಟಡ ಪಡೆದು ಈಗ ಕೇಂದ್ರೀಯ ವಿದ್ಯಾಲಯ ಆರಂಭಕ್ಕೆ ಮುಂದಾಗಿದೆ. ಈ ಸಂಬಂಧ ಪ್ರವೇಶದ ಅಧಿಸೂಚನೆಯು ಪ್ರಕಟಗೊಂಡಿರುವುದು ತಾಲೂಕಿನ ಜನರಲ್ಲಿ ಸಂಭ್ರಮ ಮನೆ ಮಾಡಿದೆ.
ಸೆ.15ರಂದು ತರಗತಿಗಳು ಆರಂಭ ಸಿಂಧನೂರಿನಲ್ಲಿ ಆರಂಭಿಸರುವ ಕೇಂದ್ರೀಯ ವಿದ್ಯಾಲಯದಲ್ಲಿ 2025-26ನೇ ಸಾಲಿಗೆ 1 ರಿಂದ 5 ನೇ ತರಗತಿ ಪ್ರವೇಶ ಪ್ರಕ್ರಿಯೆ ನಡೆದಿದೆ. ಆ.19ರಿಂದ ನೋಂದಣಿಗೆ ಅವಕಾಶ ನೀಡಿದ್ದು, ಅರ್ಜಿ ಸಲ್ಲಿಸಲು ಆ.29 ಕೊನೇ ದಿನ. ಸೆ.4ರಂದು ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟವಾಗಲಿದೆ. ಎಲ್ಲ ತರಗತಿಗಳ ದಾಖಲಾತಿ ಪ್ರಕಿಯೆ ಸೆ.5 ರಿಂದ 12 ವರೆಗೆ ಇದ್ದು, ಸೆ.15 ಕ್ಕೆ ತರಗತಿ ಆರಂಭವಾಗಲಿವೆ. ಒಟ್ಟಿನಲ್ಲಿ ಬಹು ವರ್ಷಗಳ ಬೇಡಿಕೆ ಈಡೇರಿದೆ. ಅಗತ್ಯ ಸೌಲಭ್ಯದ ಜತೆಗೆ ಬೋಧಕ ವರ್ಗವನ್ನು ಒದಗಿಸಬೇಕೆಂಬುದು ಜನರ ಒತ್ತಾಯವಾಗಿದೆ.
ಕೆಲ ಕಾರಣಗಳಿಂದ ಕೇಂದ್ರೀಯ ವಿದ್ಯಾಲಯ ಆರಂಭ ವಿಳಂಬವಾಗಿದೆ. ಈಗ ತಾತ್ಕಾಲಿಕವಾಗಿ ಸರ್ಕಾರಿ ಮಹಾವಿದ್ಯಾಲಯದ ಪಕ್ಕದ ಕಟ್ಟಡದಲ್ಲಿ ಆರಂಭಕ್ಕೆ ಎಲ್ಲ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ಪ್ರವೇಶಾತಿ ಅಧಿಸೂಚನೆ ಹೊರಡಿಸಲಾಗಿದೆ. ಶಾಶ್ವತ ಜಾಗದ ಸಮಸ್ಯೆ ಇತ್ಯರ್ಥವಾಗಿದೆ. ಎರಡ್ಮೂರು ದಿನಗಳಲ್ಲಿ ಹೊಸ ಕಟ್ಟಡ ನಿರ್ಮಾಣ ಕಾರ್ಯ ಆರಂಭಗೊಳ್ಳಲಿದೆ. ಅರುಣ್ ದೇಸಾಯಿ ತಹಸೀಲ್ದಾರ್, ಸಿಂಧನೂರು