ತುರ್ತಾಗಿ ಪ್ರೀಪೇಯ್ಡ್ ಆಟೋ ಸೇವೆ ಆರಂಭಿಸಿ

RTO meeting in dc office
ಆಟೋರಿಕ್ಷಾ ಪರವಾನಗಿ ನೀಡುವ ಕುರಿತ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ, ಎಸ್.ಎನ್.ಚನ್ನಬಸಪ್ಪ, ಅನಿಲ್‌ಕುಮಾರ್ ಭೂಮರಡ್ಡಿ, ರಂಗಪ್ಪ, ಕೆ.ವಿ.ವಸಂತಕುಮಾರ್, ಅಶೋಕ್‌ಕುಮಾರ್ ಇದ್ದರು.
Published on

ಶಿವಮೊಗ್ಗ: ಮೊದಲ ಹಂತದಲ್ಲಿ ಶಿವಮೊಗ್ಗದ ಮುಖ್ಯ ರೈಲ್ವೆ ನಿಲ್ದಾಣ ಮತ್ತು ಖಾಸಗಿ ಬಸ್ ನಿಲ್ದಾಣದಲ್ಲಿ 20 ದಿನದೊಳಗೆ ಆಟೋರಿಕ್ಷಾ ಪ್ರೀಪೇಯ್ಡ್ ಕೌಂಟರ್ ತೆರೆಯಲು ವ್ಯವಸ್ಥೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಅವರು ಆರ್‌ಟಿಒಗೆ ಸೂಚಿಸಿದರು.

ಡಿಸಿ ಕಚೇರಿಯಲ್ಲಿ ಗುರುವಾರ ಆಟೋರಿಕ್ಷಾ ಪರವಾನಗಿ ನೀಡುವ ಕುರಿತ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಮಾತನಾಡಿ, ಪ್ರೀಪೇಯ್ಡ ಸೇವೆ ಆರಂಭಿಸುವುದರಿಂದ ಪ್ರಯಾಣಿಕರಿಗೂ ಅನುಕೂಲ ಆಗಲಿದೆ. ನಿಗದಿತ ಎರಡು ಸ್ಥಳದಲ್ಲಿ ತ್ವರಿತವಾಗಿ ಕೌಂಟರ್‌ಗಳನ್ನು ತೆರೆಯಬೇಕು. ಆನಂತರ ಅಗತ್ಯವಿದ್ದ ಕಡೆಗಳಲ್ಲಿ ಕೌಂಟರ್‌ಗಳನ್ನು ತೆರೆಯಬಹುದು ಎಂದರು.
ಬಸ್ ನಿಲ್ದಾಣದ ಬಳಿ ಆಟೋಗಳ ಪ್ರೀಪೇಯ್ಡ ಕೌಂಟರ್ ಸ್ಥಳ ನಿಗದಿ ಕುರಿತು ಆರ್‌ಟಿಒ, ಆಟೋ ಮತ್ತು ಬಸ್ ಚಾಲಕರ ಸಂಘ, ಸಂಚಾರ ಪೊಲೀಸರು, ಕೆಎಸ್‌ಆರ್‌ಟಿಸಿ ಅವರು ಸರ್ವೇ ಮಾಡಿ ನಿಗದಿಪಡಿಸಬೇಕು. ಜತೆಗೆ ರೈಲು ನಿಲ್ದಾಣದಿಂದ ಶಿವಮೊಗ್ಗ ಬಸ್ ನಿಲ್ದಾಣಕ್ಕೆ ಕೆಎಸ್‌ಆರ್‌ಟಿಸಿ ಬಸ್ ಕಾರ್ಯಾಚರಣೆಯನ್ನು 10 ದಿನದೊಳಗೆ ಆರಂಭಿಸಬೇಕು ಎಂದು ಕೆಎಸ್‌ಆರ್‌ಟಿಸಿ ಡಿಸಿ ವಿಜಯಕುಮಾರ್ ಅವರಿಗೆ ಸೂಚಿಸಿದರು.
ಎಎಸ್ಪಿ ಅನಿಲ್ ಕುಮಾರ್ ಭೂಮರಡ್ಡಿ, ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿ ಬಿ.ಶಂಕ್ರಪ್ಪ, ಕೆಎಸ್‌ಆರ್‌ಟಿಸಿ ಡಿಸಿ ವಿಜಯಕುಮಾರ್, ಸರ್ಕಲ್ ಇನ್‌ಸ್ಪೆಕ್ಟರ್ ಸಂತೋಷ್‌ಕುಮಾರ್ ಸೇರಿ ಅಧಿಕಾರಿಗಳು, ನಾಗರಿಕ ಹಿತರಕ್ಷಣಾ ವೇದಿಕೆ ಪ್ರಧಾನ ಕಾರ್ಯದರ್ಶಿ ವಸಂತಕುಮಾರ್ ಇತರರಿದ್ದರು.

ಚಾಲನೆ ವ್ಯಾಪ್ತಿ 20 ಕಿಮೀಗೆ ವಿಸ್ತರಿಸಿ
ನಗರದಲ್ಲಿ ಕೇವಲ 304 ಆಟೋಗಳಿಲ್ಲ, 1,200 ನೋಂದಾಯಿತ ಆಟೋಗಳಿದ್ದು ಅವುಗಳಿಗೆಲ್ಲ ಪರವಾನಗಿ ನೀಡಬೇಕು. ಶೋರೂಮಿನವರು ಆಟೋ ಖರೀದಿ ವೇಳೆ ಪರವಾನಗಿ ಕೊಡಿಸುತ್ತೇವೆಂದು 30ರಿಂದ 40 ಸಾವಿರ ರೂ.ವರೆಗೆ ವಸೂಲಿ ಮಾಡುತ್ತಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಹಾಗೂ ಆಟೋ ಚಾಲನೆ ವ್ಯಾಪ್ತಿಯನ್ನು 20 ಕಿ.ಮೀ.ವರೆಗೆ ವಿಸ್ತರಿಸಬೇಕೆಂದು ಆಟೋ ಚಾಲಕರ ಸಂಘದ ಪದಾಧಿಕಾರಿಗಳು ಮನವಿ ಮಾಡಿದರು. ಕೆಲವು ಆಟೋ ಚಾಲಕರು ಓಪನ್ ಪರ್ಮಿಟ್ ನೀಡಬೇಕು ಮತ್ತು ಹಲವರು ಈಗಾಗಲೇ ನಗರದಲ್ಲಿ ಆಟೋಗಳ ಸಂಖ್ಯೆ ಹೆಚ್ಚಿದ್ದು ಹೊಸ ಪರವಾನಗಿ ನೀಡಬಾರದೆಂದು ಒತ್ತಾಯಿಸಿದರು. ಇದಕ್ಕೆ ಪ್ರತಿಯಿಸಿದ ಡಿಸಿ, ಆನ್‌ಲೈನ್‌ನಲ್ಲಿ ಪರವಾನಗಿ ಬಾಕಿ ಕಡಿಮೆ ತೋರಿಸುತ್ತಿದ್ದು, ಇದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಾತ್ರ ಪರವಾನಗಿ ನೀಡಲಾಗುವುದು. ಪರವಾನಗಿ ಪಡೆಯದ ಆಟೋಗಳ ನೋಂದಣಿ ನಿಲ್ಲಿಸುವಂತೆ ತಿಳಿಸಿದರು. ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ನಗರದಲ್ಲಿ ಹೊಸದಾಗಿ ಆಟೋರಿಕ್ಷಾಗಳನ್ನು ಖರೀದಿಸಿ ನೋಂದಣಿ ಮಾಡಿಸಿಕೊಂಡವರಿಗೆ ಪರವಾನಗಿ ನೀಡಬೇಕು ಹಾಗೂ ನವೀಕರಣಕ್ಕೆ ಅರ್ಹರಾದವರಿಗೆ ನವೀಕರಣ ಮಾಡಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net