

ಅಮೆರಿಕಾ: ಸಾಮಾನ್ಯವಾಗಿ ನಾವು ಆರ್ಡರ್ ಮಾಡುವ ಫ್ರೂಟ್ ಜ್ಯೂಸ್, ಫ್ಲೇವರ್ಡ್ ಡ್ರಿಂಕ್ ಅಥವಾ ಫ್ಲೇವರ್ಡ್ ಫುಡ್ನಲ್ಲಿ ನಮಗೆ ಬೇಕಾದ ಟಾಪಿಂಗ್ಸ್ ಮತ್ತು ನಮಗೆ ಬೇಕಾದ ಹಣ್ಣನ್ನ ಆರಿಸಿ ಆರ್ಡರ್ ಮಾಡುತ್ತೇವೆ. ಅದರಲ್ಲೂ ಫ್ರೂಟ್ ಜ್ಯೂಸ್ ಅಂದ್ರೆ ಅದರಲ್ಲಿರುವ ಹಣ್ಣಿನ ಸತ್ವ ದೇಹಕ್ಕೆ ಒಳ್ಳೆಯದು ಹಾಗಾಗಿ ಜ್ಯೂಸ್ ಕುಡಿಯಬೇಕು ಅಂದುಕೊಳ್ಳುವವರು ಸಾಕಷ್ಟು ಮಂದಿ.
ಇನ್ನು ಜ್ಯೂಸ್ ಹೆಸರಿನಲ್ಲಿ ಆರ್ಟಿಫಿಶಿಯಲ್ ಫ್ಲೇವರ್ ಹಾಕಿ ಮಾರಲಾಗುತ್ತಿರುವ ಪಾನೀಯಗಳನ್ನು ಮಾರುಕಟ್ಟೆಯಲ್ಲಿ ಕಾಣಬಹುದು. ವಿಶ್ವದ ಅತಿದೊಡ್ಡ ರೀಟೇಲ್ ಕಾಫಿ ಹೋಟೆಲ್ಗಳ ಚೈನ್ ಹೊಂದಿರುವ ಸ್ಟಾರ್ಬಕ್ಸ್ ಸಂಸ್ಥೆ ಇದೀಗ ಇದೇ ಕಾರಣಕ್ಕೆ ನ್ಯಾಯಾಲಯ ಮೊಕದ್ದಮೆ ಎದುರಿಸುತ್ತಿದೆ.
ಹಣ್ಣುಗಳ ಹೆಸರಿನಲ್ಲಿರುವ ಅದರ ಪಾನೀಯಗಳಲ್ಲಿ ಅ ಹಣ್ಣಿನ ಸಾರವೇ ಇಲ್ಲ ಎಂದು ಅಮೆರಿಕದ ಕೋರ್ಟ್ನಲ್ಲಿ ದಾವೆ ಹೂಡಲಾಗಿದೆ. 5 ಮಿಲಿಯನ್ ಡಾಲರ್ (41 ಕೋಟಿ ರೂ) ಮೊತ್ತದ ಪರಿಹಾರಕ್ಕಾಗಿ ಸ್ಟಾರ್ಬಕ್ಸ್ ಮೇಲೆ ಮೊಕದ್ದಮೆ ದಾಖಲಾಗಿದೆ.
ಈಗಾಗಲೇ ಮಾಡಲಾಗಿರುವ 11 ಆರೋಪಗಳಲ್ಲಿ 9 ಅನ್ನು ವಜಾಗೊಳಿಸುವಂತೆ ಸ್ಟಾರ್ಬಕ್ಸ್ ಮಾಡಿದ ಮನವಿಯನ್ನು ನ್ಯಾಯಾಧೀಶರು ತಿರಸ್ಕರಿಸಿದ್ದಾರೆ.
ನ್ಯೂಯಾರ್ಕ್ನ ಜೋಆನ್ ಕೋಮಿನಿಸ್ ಮತ್ತು ಕ್ಯಾಲಿಫೋರ್ನಿಯಾದ ಜೇಸನ್ ಮೆಕಾಲಿಸ್ಟರ್ ಅವರಿಬ್ಬರು ಸ್ಟಾರ್ಬಕ್ಸ್ ಮೇಲಿನ ಕಾನೂನು ಮೊಕದ್ದಮೆ ನಿರ್ವಹಿಸುತ್ತಿದ್ದಾರೆ. ಅಮೆರಿಕದ ಮನ್ಹಟನ್ನ ಜಿಲ್ಲಾ ನ್ಯಾಯಾಧೀಶ ಜಾನ್ ಕ್ರೋನನ್ ಅವರು ಈ ಮೊಕದ್ದಮೆಯ ವಿಚಾರಣೆ ನಡೆಸುತ್ತಿದ್ದಾರೆ.
ಶೀರ್ಷಿಕೆಯಲ್ಲಿ ಹಣ್ಣಿನ ಹೆಸರು ಇದೆಯಾದರೂ, ಹೂರಣಗಳ ಪಟ್ಟಿಯಲ್ಲಿ (ಇನ್ಗ್ರೆಡಿಯೆಂಟ್ಸ್ ಲಿಸ್ಟ್) ನೀರು, ದ್ರಾಕ್ಷಿರಸದ ಸಾರ, ಸಕ್ಕರೆ ಮಾತ್ರವೇ ಇರುವುದು. ಮ್ಯಾಂಗೋ ಡ್ರಾಗನ್ಫ್ರೂಟ್, ಪೈನ್ ಆ್ಯಪಲ್ ಪ್ಯಾಶನ್ಫ್ರೂಟ್, ಸ್ಟ್ರಾಬೆರಿ ಅಕೈ ಇತ್ಯಾದಿ ವಿವಿಧ ಹಣ್ಣಿನ ಫ್ಲೇವರ್ಗಳನ್ನು ಸ್ಟಾರ್ಬಕ್ಸ್ ಅಂಗಡಿಗಳಲ್ಲಿ ಮಾರಲಾಗುತ್ತದೆ.
ಇದು ಗ್ರಾಹಕರಿಗೆ ಮಾಡುತ್ತಿರುವ ದ್ರೋಹವಾಗಿದೆ. ನ್ಯೂಯಾರ್ಕ್, ಕ್ಯಾಲಿಫೋರ್ನಿಯಾ ರಾಜ್ಯಗಳ ಗ್ರಾಹಕ ರಕ್ಷಣೆ ಕಾನೂನುಗಳ ಉಲ್ಲಂಘನೆಯಾಗಿದೆ. ಹಾನಿ ಪರಿಹಾರವಾಗಿ ಕಂಪನಿಯಿಂದ 5 ಮಿಲಿಯನ್ ಡಾಲರ್ಗೂ ಹೆಚ್ಚಿನ ಮೊತ್ತದ ದಂಡ ಕಟ್ಟಿಸುವಂತೆ 2022ರ ಆಗಸ್ಟ್ ತಿಂಗಳಲ್ಲಿ ಮೊಕದ್ದಮೆ ಹಾಕಲಾಗಿತ್ತು. ಈಗ ಅದರ ವಿಚಾರಣೆ ನಡೆಯುತ್ತಿದೆ.
ಪಾನೀಯದ ಹೆಸರು ಅದರ ಫ್ಲೇವರ್ ಅನ್ನು ಮಾತ್ರವೇ ಸೂಚಿಸುತ್ತದೆ. ಅದು ಗ್ರಾಹಕರಿಗೂ ಸ್ಪಷ್ಟವಾಗಿ ಗೊತ್ತಾಗುತ್ತದೆ. ಹಾಗೇನಾದರೂ ಗೊಂದಲ ಇದ್ದಲ್ಲಿ ಸ್ಟೋರ್ ಸಿಬ್ಬಂದಿಯನ್ನು ಕೇಳಿದರೆ ಸರಿಯಾದ ಮಾಹಿತಿ ಸಿಕ್ಕಿಬಿಡುತ್ತದೆ ಎಂದು ಸ್ಟಾರ್ಬಕ್ಸ್ ಸಮರ್ಥಿಸಿಕೊಂಡಿದೆ.
ಆದರೆ, ಕೋರ್ಟ್ ಜಡ್ಜ್ ಅವರಿಗೆ ಈ ವಾದ ಸಮಾಧಾನ ತರಲಿಲ್ಲ. ಸ್ಟಾರ್ಬಕ್ಸ್ನ ಕೆಲ ಪಾನೀಯಗಳ ಹೆಸರಿನಲ್ಲಿರುವ ವಸ್ತು ಅದರ ಇನ್ಗ್ರೆಡಿಯೆಂಟ್ ಲಿಸ್ಟ್ನಲ್ಲಿವೆ. ಹೀಗಾಗಿ, ಜನರಿಗೆ ಗೊಂದಲವಾಗುವ ಸಾಧ್ಯತೆ ಇಲ್ಲದಿಲ್ಲ ಎಂಬುದು ನ್ಯಾಯಾಧೀಶರ ಅನಿಸಿಕೆ. ಸದ್ಯ ಎರಡೂ ಕಡೆಯವರ ವಾದಗಳನ್ನು ಕೋರ್ಟ್ ಆಲಿಸುತ್ತಿದೆ. ಇದರ ತೀರ್ಪು ಬಹಳ ಮಹತ್ವದ್ದಾಗಿರಲಿದೆ.