ಒಂದೇ ದಿನ ರಿಲೀಸ್​ ಆಗಲಿವೆ ಸ್ಟಾರ್​ ನಟರ ಚಿತ್ರಗಳು; ಬಾಕ್ಸ್​ ಆಫೀಸ್​ನಲ್ಲಿ ಭಾರೀ ಪೈಪೋಟಿ!

Untitled design - 2023-09-28T182726.081
Published on

ಮುಂಬೈ: ಬಾಲಿವುಡ್​ನ ಸ್ಟಾರ್​ ನಟರ ಸಿನಿಮಾಗಳ ಜತೆಗೆ ಟಾಲಿವುಡ್​ ಹೀರೋಗಳ ಚಿತ್ರಗಳು ಒಂದೇ ದಿನಾಂಕದಂದು ಬಿಡುಗಡೆಗೊಳ್ಳುವ ಮೂಲಕ ಬಾಕ್ಸ್​ ಆಫೀಸ್​​ನಲ್ಲಿ ಭಾರೀ ಪೈಪೋಟಿ ಕೊಡಲು ಸಜ್ಜಾಗಿದೆ.

'ಕೆಜಿಎಫ್'​ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ರೆಬೆಲ್​ ಸ್ಟಾರ್​ ಪ್ರಭಾಸ್​ ಕಾಂಬಿನೇಷನ್​ನಲ್ಲಿ ತಯಾರಾಗಿರುವ 'ಸಲಾರ್​ ಭಾಗ 1' ಚಿತ್ರದ ರಿಲೀಸ್​ ಡೇಟ್​ನಲ್ಲಿ ಎರಡು ಬಾರಿ ಬದಲಾವಣೆ ಉಂಟಾಗಿದ್ದು, ಇದೀಗ ಡಿಸೆಂಬರ್​ನಲ್ಲಿ ರಿಲೀಸ್​ ಆಗಲಿದೆ ಎಂದು ಹೇಳಲಾಗಿದೆ.

'ಸಲಾರ್' ಕ್ರಿಸ್‌ಮಸ್ ಹಬ್ಬಕ್ಕೆ ಬಿಡುಗಡೆಗೊಳ್ಳಲು ಸಜ್ಜಾಗಿದ್ದು, ಇದೇ ದಿನದಂದು ಶಾರುಖ್ ಖಾನ್ ಅಭಿನಯದ ಬಹುನಿರೀಕ್ಷಿತ 'ಡುಂಕಿ' ಚಿತ್ರವು ತೆರೆಗೆ ಅಪ್ಪಳಿಸಲಿದೆ ಎಂದು ವರದಿ ತಿಳಿಸಿದೆ. ಇಬ್ಬರು ಸ್ಟಾರ್​ ನಟರ ಚಿತ್ರಗಳು ಒಂದೇ ದಿನ ಬಿಡುಗಡೆಗೊಂಡರೆ ಬಾಕ್ಸ್​ ಆಫೀಸ್​ನಲ್ಲಿ ಭಾರೀ ಘರ್ಷಣೆ ಎದುರಾಗಲಿದೆ.

ಇದೇ ಸಾಲಿನಲ್ಲಿ ಟಾಲಿವುಡ್​ನ ರಾಷ್ಟ್ರ ಪ್ರಶಸ್ತಿ ವಿಜೇತ, ಸ್ಟೈಲಿಶ್ ಸ್ಟಾರ್, ನಟ ಅಲ್ಲು ಅರ್ಜುನ್​ ಅಭಿನಯದ 'ಪುಷ್ಪ 2' ಚಿತ್ರ ಆಗಸ್ಟ್​ 14, 2024 ರಂದು ಬಿಡುಗಡೆಯಾಗಲಿದೆ. ಈ ಬಗ್ಗೆ ಚಿತ್ರ ತಯಾರಕರು ಇತ್ತೀಚೆಗಷ್ಟೇ ಅಧಿಕೃತವಾಗಿ ಘೋಷಿಸಿದ್ದರು. ಈ ದಿನದಂದೇ ಬಾಲಿವುಡ್​ನ ಹಿರಿಯ ನಟ, ಅಜಯ್​ ದೇವಗನ್​ ಅಭಿನಯದ 'ಸಿಂಗಂ ಅಗೈನ್'​ ಸಿನಿಮಾ ಕೂಡ ರಿಲೀಸ್ ಆಗಲು ಸಜ್ಜಾಗಿದೆ.

ಒಟ್ಟಾರೆ ನಾಲ್ವರು ಸ್ಟಾರ್ ಹೀರೋಗಳ ಚಿತ್ರಗಳು ಈಗಾಗಲೇ ತಿಳಿಸಿರುವ ದಿನಗಳಂದೇ ಬಿಡುಗಡೆಯಾಗುವ ಮುಖೇನ ಸಿನಿಪ್ರಿಯರಲ್ಲಿ ಯಾವ ಸಿನಿಮಾ ನೋಡುವುದು ಎಂಬ ಗೊಂದಲವನ್ನು ಹುಟ್ಟುಹಾಕಿದ್ದು, ಗಲ್ಲಾಪೆಟ್ಟಿಗೆಯಲ್ಲಿ ಯಾವ ರೀತಿ ಘರ್ಷಣೆ ಉಂಟಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net