ನನ್ನ ಹೃದಯದ ಮಾತನ್ನೇ ನೀವು ಹೇಳಿದ್ದೀರಾ ಸರ್​! ರಾಜಮೌಳಿ ಹೇಳಿಕೆಗೆ ಧ್ವನಿಗೂಡಿಸಿದ ಅಲ್ಲು ಅರ್ಜುನ್​

Untitled design (59)
Published on

ಆಂಧ್ರಪ್ರದೇಶ: ಮಾಧ್ಯಮ ಲೋಕದ ಭೀಷ್ಮ ಎಂದೇ ಹೆಸರುವಾಸಿಯಾಗಿದ್ದ ರಾಮೋಜಿ ಗ್ರೂಪ್ಸ್​ ಸಂಸ್ಥಾಪಕ ರಾಮೋಜಿ ರಾವ್​ ಇಂದು ವಯೋಸಹಜ ಖಾಯಿಲೆಯಿಂದ ವಿಧಿವಶರಾದರು. ಜೂನ್​ 05ರಂದು ಹೈದರಾಬಾದ್​ನ ನಾನಾಕರಮ್‌ಗುಡದಲ್ಲಿರುವ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಪಡೆಯುತ್ತಿದ್ದ ಅವರು, ಜೂನ್​.08ರ ಬೆಳಗ್ಗೆ 4.50ಕ್ಕೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ಖ್ಯಾತ ಉದ್ಯಮಿಯಾದ ರಾಮೋಜಿ ರಾವ್ ಅವರ ನಿಧನದ ಹಿನ್ನೆಲೆ ತೆಲುಗು ಚಿತ್ರರಂಗದ ಕಲಾವಿದರು ಹಾಗೂ ರಾಜಕೀಯ ಗಣ್ಯರು ಅಂತಿಮ ನಮನ ಸಲ್ಲಿಸಿದರು. ಈ ವೇಳೆ ಕೇಂದ್ರ ಸರ್ಕಾರಕ್ಕೆ ವಿಶೇಷ ಮನವಿ ಮಾಡಿಕೊಂಡ ತೆಲುಗು ಚಿತ್ರರಂಗದ ಸ್ಟಾರ್​ ನಿರ್ದೇಶಕ ರಾಜಮೌಳಿ, ರಾಮೋಜಿ ಅವರು ತಮ್ಮ ಕೆಲಸದಿಂದ ಅನೇಕ ಜನರಿಗೆ ಸ್ಫೂರ್ತಿ ಮತ್ತು ಮಾರ್ಗದರ್ಶನ ನೀಡಿದ್ದಾರೆ. ಅವರಿಗೆ ಪ್ರತಿಷ್ಠಿತ ಭಾರತ ರತ್ನ ಪ್ರಶಸ್ತಿ ಕೊಟ್ಟು ಗೌರವಿಸಬೇಕು ಎಂದರು.

ಇನ್ನು ರಾಜಮೌಳಿ ಹೇಳಿಕೆಯ ಬೆನ್ನಲ್ಲೇ ಟ್ವೀಟ್ (ಪ್ರಸ್ತುತ ಎಕ್ಸ್​) ಮೂಲಕ ಧ್ವನಿಗೂಡಿಸಿದ ಟಾಲಿವುಡ್​ನ ಐಕಾನ್ ಸ್ಟಾರ್​ ಅಲ್ಲು ಅರ್ಜುನ್​, "ನನ್ನ ಮನಸ್ಸಿನಲ್ಲಿಯೂ ಇದೇ ವಿಷಯ ಓಡುತ್ತಿತ್ತು ಸರ್​. ಹೃದಯದ ಮಾತನ್ನೇ ನೀವು ಮಾತನಾಡಿದ್ದೀರಾ. ಕೇಂದ್ರ ಸರ್ಕಾರದ ಗಮನಕ್ಕೆ ತಂದಿದ್ದಕ್ಕೆ ಧನ್ಯವಾದಗಳು" ಎಂದು ಬರೆದುಕೊಂಡಿದ್ದಾರೆ,(ಏಜೆನ್ಸೀಸ್). 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net