

Maha Kumbh Stampede: ಇಂದು ಮೌನಿ ಅಮಾವಾಸ್ಯೆಯ ಹಿನ್ನಲೆ ಮಹಾಕುಂಭ ಮೇಳದಲ್ಲಿ ಅಮೃತ ಸ್ನಾನಕ್ಕೆ ಭಕ್ತಾಧಿಗಳು ಮುಗಿಬಿದ್ದಿದ್ದು, ಈ ವೇಳೆ ಕಾಲ್ತುಳಿತ ಉಂಟಾಗಿ 50ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಗಾಯಾಳುಗಳನ್ನು ತಕ್ಷಣವೇ ಆಸ್ಪತ್ರೆಗೆ ರವಾನಿಸಿ, ಹೆಚ್ಚಿನ ಚಿಕಿತ್ಸೆ ಕೊಡಿಸಲಾಗಿದೆ. ಈ ಕುರಿತು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಕಳವಳ ವ್ಯಕ್ತಪಡಿಸಿದ್ದಾರೆ.
ಇಂದು 10 ಕೋಟಿಗೂ ಮೀರಿದ ಭಕ್ತರು ಅಮೃತ ಸ್ನಾನದಲ್ಲಿ ಭಾಗಿಯಾಗುವ ನಿರೀಕ್ಷೆಯಿತ್ತು. ಇದೇ ಕಾರಣಕ್ಕಾಗಿ ಮುಂಚಿತವಾಗಿಯೇ ಹೆಚ್ಚಿನ ಭದ್ರತಾ ಸಿಬ್ಬಂದಿಗಳನ್ನು ತ್ರಿವೇಣಿ ಸಂಗಮದ ಬಳಿ ಆಡಳಿತ ಮಂಡಳಿ ಆಯೋಜಿಸಿತ್ತು. ಆದರೆ, ನಿರೀಕ್ಷೆಗೂ ಮೀರಿದ ಸಂಖ್ಯೆಯಲ್ಲಿ ಭಕ್ತಸಾಗರ ಹರಿದುಬಂದ ಕಾರಣ ಅಮೃತ ಸ್ನಾನದ ವೇಳೆ ಕಾಲ್ತುಳಿತ ಸಂಭವಿಸಿದೆ. ಕಾಲ್ತುಳಿತದಲ್ಲಿ ಹಲವಾರು ಭಕ್ತರು ಉಸಿರಾಟ ತೊಂದರೆಗೆ ಸಿಲುಕಿ, ನಿಂತಲ್ಲೇ ಕುಸಿದುಬಿದ್ದಿದ್ದಾರೆ.
ವಿಶ್ವದ ಅತಿದೊಡ್ಡ ಧಾರ್ಮಿಕ ಉತ್ಸವ “ಮಹಾ ಕುಂಭಮೇಳ” ಉತ್ತರ ಪ್ರದೇಶದ ಪ್ರಯಾಗ್ರಾಜ್ ನಗರದಲ್ಲಿ ನಡೆಯುತ್ತಿದ್ದು, ಈ ಮಹಾ ಕುಂಭಮೇಳವು ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಮೇಳ. ಕುಂಭಮೇಳಕ್ಕೆ ಪ್ರಪಂಚದಾದ್ಯಂತದ ಸಾಧು-ಸಂತರು ಮತ್ತು ಭಕ್ತ ಸಾಗರವೇ ಹರಿದುಬರುತ್ತಿದೆ. ಹತ್ತು ಸಾವಿರ ಎಕರೆಗಳಲ್ಲಿ ಕುಂಭಮೇಳಕ್ಕಾಗಿ ವಿಶೇಷ ವ್ಯವಸ್ಥೆಯನ್ನು ಮಾಡಿರುವ ಉತ್ತರ ಪ್ರದೇಶ ಸರ್ಕಾರ, ಧಾರ್ಮಿಕ ಆಚರಣೆಗೆ ಆಗಮಿಸುವ ಕೋಟ್ಯಂತರ ಭಕ್ತಾಧಿಗಳಿಗೆ ಯಾವುದೇ ರೀತಿಯಲ್ಲೂ ತೊಂದರೆ ಆಗದಂತೆ ಹಲವು ಕ್ರಮಗಳು ಹಾಗೂ ವಿಶೇಷ ಸೌಲಭ್ಯಗಳನ್ನು ಒದಗಿಸಿದೆ. ಇಷ್ಟಾದರೂ ಸಹ ಕಾಲ್ತುಳಿತ ಉಂಟಾಗಿರುವುದು ದುರಂತ.