ಫ್ಲ್ಯಾಟ್ ಖರೀದಿ ಗ್ರಾಹಕರಿಗೆ ಸಿಹಿ; ಮೊದಲ ನೋಂದಣಿ ಮುದ್ರಾಂಕ ಶುಲ್ಕ ಶೇ.5ರಿಂದ 3ಕ್ಕೆ ಇಳಿಕೆ

Flat
Published on

ಬೆಂಗಳೂರು: ಹೊಸದಾಗಿ ಫ್ಲ್ಯಾಟ್ ಖರೀದಿಸುವವರಿಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ. 2020-21ನೇ ಸಾಲಿನ ಬಜೆಟ್​ನಲ್ಲಿ ಘೋಷಿಸಿದ್ದಂತೆ 35 ಲಕ್ಷ ರೂ.ನಿಂದ 45 ಲಕ್ಷ ರೂ. ವರೆಗಿನ ಫ್ಲ್ಯಾಟ್​ಗಳ ಮೊದಲನೇ ನೋಂದಣಿಗೆ ಮುದ್ರಾಂಕ ಶುಲ್ಕವನ್ನು ಶೇ.5 ರಿಂದ 3ಕ್ಕೆ ಇಳಿಕೆ ಮಾಡಿ ರಾಜ್ಯ ಸರ್ಕಾರ ಮಂಗಳವಾರ ಗೆಜೆಟ್ ಅಧಿಸೂಚನೆ ಹೊರಡಿಸಿದೆ. ಇದರಿಂದ ಮಧ್ಯಮ ವರ್ಗದವರಿಗೆ ಅನುಕೂಲವಾಗಲಿದೆ. ಬೆಂಗಳೂರು ನಗರ, ಬೆಂಗಳೂರು ಹೊರವಲಯ ಸೇರಿದಂತೆ ರಾಜ್ಯದ ನಗರ ಪ್ರದೇಶಗಳಲ್ಲಿ ದಿನೇ ದಿನೆ

ಅಪಾರ್ಟ್​ವೆುಂಟ್​ಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಪ್ರಧಾನ ಮಂತ್ರಿ ಅವಾಸ್ ಯೋಜನೆಯಡಿ ಸಾವಿರಾರು ಫ್ಲ್ಯಾಟ್​ಗಳನ್ನು ಬಡವರು ಮತ್ತು ಮಧ್ಯಮ ವರ್ಗದವರಿಗೆ ನೀಡಲಾಗುತ್ತಿದೆ. ಮುದ್ರಾಂಕ ಶುಲ್ಕ ಇಳಿಕೆ ಮಾಡುವ ಈ ತೀರ್ಮಾನ ಸಾವಿರಾರು ಜನರಿಗೆ ಅನುಕೂಲ ತಂದಿದೆ. ಹೊಸದಾಗಿ ನಿರ್ವಣವಾದ ಅಪಾರ್ಟ್​ವೆುಂಟ್​ಗಳಲ್ಲಿ ಮೊದಲನೇ ನೋಂದಣಿಗೆ (ಬಿಲ್ಡರ್​ನಿಂದ ನೇರ ಖರೀದಿಗೆ) ಮುದ್ರಾಂಕ ಶುಲ್ಕ ಕಡಿಮೆ ಆಗಲಿದೆ.

ಪ್ರಸ್ತುತ ಮುದ್ರಾಂಕ ಶುಲ್ಕ ಶೇ. 5.6 ಮತ್ತು ನೋಂದಣಿ ಶುಲ್ಕ ಶೇ.1 ಇದೆ. ಹೊಸ ಅಧಿಸೂಚನೆ ಪ್ರಕಾರ ಫ್ಲ್ಯಾಟ್​ನ ಮೊದಲನೇ ನೋಂದಣಿಗೆ ಮುದ್ರಾಂಕ ಶುಲ್ಕ ಶೇ.3ಕ್ಕೆ ಇಳಿಸಲಾಗಿದೆ. ಅಂದರೆ ಮುದ್ರಾಂಕ ಶುಲ್ಕ ಶೇ.3.36 ಆಗಲಿದೆ. ನೋಂದಣಿ ಶುಲ್ಕ ಶೇ.1 ಬದಲಾವಣೆ ಆಗುವುದಿಲ್ಲ. ಈ ಪ್ರಕಾರ 35 ಲಕ್ಷ ರೂ. ಮೌಲ್ಯದ ಫ್ಲ್ಯಾಟ್ ಖರೀದಿ ಮಾಡಿದವರಿಗೆ ಅಂದಾಜು 70 ಸಾವಿರ ರೂ. ಹಾಗೂ 45 ಲಕ್ಷ ರೂ. ಮೌಲ್ಯದ ಫ್ಲ್ಯಾಟ್ ಖರೀದಿಸುವವರಿಗೆ 90 ಸಾವಿರ ರೂ. ಉಳಿತಾಯ ಆಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net