ಮಾನವರ ಮೇಲಿನ ಮೊದಲ ಹಂತದ ಪರೀಕ್ಷೆಯಲ್ಲಿ ಮಾಡೆರ್ನಾದ ಕೋವಿಡ್​-19 ಚುಚ್ಚುಮದ್ದು ಪಾಸ್​

moderna vaccine
Published on

ಷಿಕಾಗೋ: ಮಾಡೆರ್ನಾ ಇಂಕ್​ ತಯಾರಿಸಿರುವ ಕೋವಿಡ್​-19 ರೋಗನಿರೋಧಕ ಚುಚ್ಚುಮದ್ದು mRNA-1273 ಮಾನವರ ಮೇಲಿನ ಮೊದಲ ಹಂತದ ಪರೀಕ್ಷೆಯಲ್ಲಿ ಪಾಸ್​ ಆಗಿದೆ. ಅಂದಾಜು 45 ಆರೋಗ್ಯವಂತ ಕಾರ್ಯಕರ್ತರಿಗೆ ಈ ಚುಚ್ಚುಮದ್ದನ್ನು ಕೊಡಲಾಗಿದ್ದು, ಅವರಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದ ರೋಗನಿರೋಧಕ ಅಂಶಗಳು ಕಂಡುಬಂದಿದ್ದಾಗಿ ಅಮೆರಿಕದ ಸಂಶೋಧಕರು ತಿಳಿಸಿದ್ದಾರೆ.

ಆರೋಗ್ಯ ಕಾರ್ಯಕರ್ತರಿಗೆ mRNA-1273 ಎರಡು ಚುಚ್ಚುಮದ್ದನ್ನು ಕೊಡಲಾಯಿತು. ಕೋವಿಡ್​ನಿಂದ ಚೇತರಿಸಿಕೊಂಡವರಿಗಿಂತ ಎರಡು ಪಟ್ಟು ಹಚ್ಚು ಪ್ರಮಾಣದ ಕರೊನಾ ವೈರಾಣುವನ್ನು ಕೊಲ್ಲುವ ರೋಗನಿರೋಧಕಗಳು ಕಂಡುಬಂದವು ಎಂದು ನ್ಯೂ ಇಂಗ್ಲೆಂಡ್​ನ ಜರ್ನಲ್​ ಆಫ್​ ಮೆಡಿಸಿನ್​ನಲ್ಲಿ ಪ್ರಕಟಿಸಲಾಗಿರುವ ಸಂಶೋಧನಾ ವರದಿಯಲ್ಲಿ ತಿಳಿಸಲಾಗಿದೆ.

ಈ ಚುಚ್ಚುಮದ್ದು ಪಡೆದ ಆರೋಗ್ಯ ಕಾರ್ಯರ್ತರ ಪೈಕಿ ಯಾರಲ್ಲೂ ಗಂಭೀರವಾದ ಪಾರ್ಶ್ವಪರಿಣಾಮ (ಸೈಡ್​ ಎಫೆಕ್ಟ್ಸ್​) ಕಂಡುಬಂದಿಲ್ಲ. ಅರ್ಧಕ್ಕರ್ಧ ಜನ ಸುಸ್ತು, ತಲೆನೋವು, ಚಳಿ, ಮಾಂಸಖಂಡಗಳಲ್ಲಿ ನೋವು ಅಥವಾ ಚುಚ್ಚುಮದ್ದು ನೀಡಿದ ಜಾಗದಲ್ಲಿ ನೋವಿನಂಥ ಸಣ್ಣಪುಟ್ಟ ತೊಂದರೆಗಳು ಆಗಿದ್ದಾಗಿ ಹೇಳಿದರು. ಎರಡನೇ ಡೋಸ್​ನ ಚುಚ್ಚುಮದ್ದನ್ನು ಕೊಟ್ಟಾದ ನಂತರ ಅಥವಾ ಹೆಚ್ಚಿನ ಡೋಸ್​ ಕೊಟ್ಟಾದ ನಂತರ ಇಂಥ ಸಮಸ್ಯೆಗಳು ಸಹಜವಾಗಿ ಕಾಣಿಸಿಕೊಳ್ಳುತ್ತವೆ ಎಂದು ಮಾಡೆರ್ನಾ ಹೇಳಿದೆ.

ಮಾಡೆರ್ನಾದ ಚುಚ್ಚುಮದ್ದು ಜಾಗತಿಕವಾಗಿ ಬಾಧಿಸುತ್ತಿರುವ ಲಕ್ಷಾಂತರ ಜನರನ್ನು ಕರೊನಾ ಸೋಂಕಿನಿಂದ ಮುಕ್ತಗೊಳಿಸುವ ನಿಟ್ಟಿನಲ್ಲಿ ತುರ್ತಾಗಿ ಒಂದು ರೋಗನಿರೋಧಕ ಚುಚ್ಚುಮದ್ದು ಬೇಕಾಗಿದೆ. ಈ ನಿಟ್ಟಿನಲ್ಲಿ ಮಾಡೆರ್ನಾದ ಚುಚ್ಚುಮದ್ದಿನ ಭರವಸೆದಾಯಕ ಫಲಿತಾಂಶ ಜನರಲ್ಲಿ ಆಶಾಭಾವನೆ ಮೂಡಿಸಿದೆ ಎಂದು ತಜ್ಞರು ಹೇಳಿದ್ದಾರೆ. ಕರೊನಾ ಸೋಂಕು ಭಾರಿ ಪಿಡುಗಾಗಿ ಪರಿಣಾಮಿಸಿದ 66 ದಿನಗಳ ಬಳಿಕ ಕರೊನಾ ವೈರಾಣುವಿನ ಸೀಕ್ವೆನ್ಸ್​ ಅನ್ನು ಬಿಡುಗಡೆ ಮಾಡಿದ ನಂತರದಲ್ಲಿ ಅಂದರೆ ಮಾ.16ರಿಂದ ಮಾಡೆರ್ನಾ ಸಂಸ್ಥೆ ರೋಗನಿರೋಧಕ ಚುಚ್ಚುಮದ್ದಿನ ಅನ್ವೇಷಣೆಯಲ್ಲಿ ತೊಡಗಿಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net