ನಾಲ್ಕು ಸಮುದಾಯಗಳಿಗೆ ಎಸ್‌ಟಿ ಪ್ರಮಾಣಪತ್ರ ಇನ್ನೂ ಸರಾಗ !

Vidhanasoudha
Published on

ಬೆಂಗಳೂರು: ನಾಲ್ಕು ಜಿಲ್ಲೆಗಳ ವ್ಯಾಪ್ತಿಯ ನಾಲ್ಕು ಸಮುದಾಯಗಳಿಗೆ ಪರಿಶಿಷ್ಟ ಪಂಗಡದ ಜಾತಿ ಮತ್ತು ಸಿಂಧುತ್ವ ಪ್ರಮಾಣಪತ್ರದ ಸಮಸ್ಯೆಗೆ ಸರ್ಕಾರ ಪರಿಹಾರ ಕಂಡುಕೊಂಡಿದ್ದು, ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿದೆ.

ಕಲಬುರಗಿ, ಬೀದರ್ ಮತ್ತು ಯಾದಗಿರಿ ಜಿಲ್ಲೆಗಳ ಗೊಂಡ, ರಾಜಗೊಂಡ, ಕಾಡುಕುರುಬ ಹಾಗೂ ಕೊಡಗು ಜಿಲ್ಲೆಯ ಕುರುಬ ಸಮುದಾಯಕ್ಕೆ ಸೇರಿದವರಿಗೆ ಎಸ್‌ಟಿ ಜಾತಿ ಮತ್ತು ಸಿಂಧುತ್ವ ಪ್ರಮಾಣ ಪತ್ರ ನೀಡುವುದು ಕಗ್ಗಂಟಾಗಿತ್ತು.

ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸಭೆ ನಡೆದು, ಸಮಸ್ಯೆಯ ಆಳ-ಅಗಲದ ಬಗ್ಗೆ ವಿಸ್ತೃತವಾಗಿ ಚರ್ಚಿಸಿ, ಬಿಕ್ಕಟ್ಟಿಗೆ ಪರಿಹಾರದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.

ಸಿಎಂ ನೇತೃತ್ವದಲ್ಲೇ ಕಂಡುಕೊಂಡ ಪರಿಹಾರ ಕ್ರಮ, ನಿರ್ಣಯಗಳಿಗೆ ಪೂರಕವಾಗಿ ನಾಲ್ಕು ಜಿಲ್ಲೆಗಳ ಈ ಸಮುದಾಯಗಳಿಗೆ ಎಸ್‌ಟಿ ಜಾತಿ, ಸಿಂಧುತ್ವ ಪ್ರಮಾಣಪತ್ರ ನೀಡುವ ಸಂಬಂಧ ಅನುಸರಣಾ ಕ್ರಮಗಳ ಬಗ್ಗೆ ತಿಳಿಸಿ, ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಸುತ್ತೋಲೆ ಹೊರಡಿಸಿದೆ.

ಜಿಲ್ಲಾಧಿಕಾರಿಗಳು, ಕಂದಾಯ ಇಲಾಖೆ ಇತರ ಅಧಿಕಾರಿಗಳು ಮತ್ತು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿ, ಅನುಸರಿಸಬೇಕಾದ ಕ್ರಮಗಳ ಬಗ್ಗೆ ಸುತ್ತೋಲೆಯಲ್ಲಿ ವಿವರಿಸಿದೆ.

ಕರ್ನಾಟಕ ಅನುಸೂಚಿತ ಜಾತಿಗಳು, ಅನುಸೂಚಿತ ಬುಡಕಟ್ಟುಗಳು ಹಾಗೂ ಇತರ ಹಿಂದುಳಿದ ವರ್ಗಗಳ (ನೇಮಕಾತಿ ಮುಂತಾದವುಗಳ ಮೀಸಲಾತಿ) ಅಧಿನಿಯಮ 1990 ನಿಯಮಗಳ 1992ರಡಿ ವಿಸ್ತೃತ ವಿವರಣೆ ಒಟ್ಟು ಒಂಭತ್ತು ಅಂಶಗಳನ್ನು ಈ ಸುತ್ತೋಲೆಯಲ್ಲಿ ಎಸ್‌ಟಿ ಕಲ್ಯಾಣ ಇಲಾಖೆ ಉಲ್ಲೇಖಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net