

ಹೈದ್ರಾಬಾದ್: ಭಾರತದ ಸ್ಟಾರ್ ನಿರ್ದೇಶಕರಲ್ಲಿ ಒಬ್ಬರಾದ ಎಸ್.ಎಸ್. ರಾಜಮೌಳಿ ಇದೀಗ ತಮ್ಮ ಮುಂಬರುವ ಬಹುನಿರೀಕ್ಷಿತ ಸಿನಿಮಾದ ಕೆಲಸದಲ್ಲಿ ಸಖತ್ ಬಿಜಿಯಾಗಿದ್ದಾರೆ. ಆದರೆ, ಅದೇ ಚಿತ್ರಕ್ಕೆ (SSMB 29) ಹೊಸದೊಂದು ಸಮಸ್ಯೆ ಕಾಡುತ್ತಿರುವುದು ಸದ್ಯ ಚಿತ್ರತಂಡಕ್ಕೆ ದೊಡ್ಡ ತಲೆನೋವು ತಂದಿಟ್ಟಿದೆ.
ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ನಾಯಕನಾಗಿ ನಟಿಸುತ್ತಿರುವ ಹಾಗೂ ರಾಜಮೌಳಿ ನಿರ್ದೇಶಿಸುತ್ತಿರುವ 'SSMB 29' (ತಾತ್ಕಾಲಿಕ ಟೈಟಲ್) ಚಿತ್ರದ ಚಿತ್ರೀಕರಣ ಉತ್ತಮ ವೇಗವನ್ನೇ ಪಡೆದುಕೊಂಡಿದ್ದು, ಶೀಘ್ರವೇ ತೆರೆಗೆ ಬರಲು ಎದುರುನೋಡುತ್ತಿದೆ. ಈ ಮಧ್ಯೆ ಚಿತ್ರದ ಅಧಿಕೃತ ಟೈಟಲ್ ಅನ್ನು ಇದೇ ನವೆಂಬರ್ 15ರಂದು ರಾಮೋಜಿ ಫಿಲ್ಮ್ ಸಿಟಿಯಲ್ಲಿ ಅದ್ಧೂರಿ ಈವೆಂಟ್ ಮೂಲಕ ಘೋಷಿಸಲು ಚಿತ್ರತಂಡ ಸಜ್ಜಾಗಿದೆ. ಆದರೆ, ಇದಕ್ಕೂ ಮುನ್ನವೇ ಹೊಸ ಶಾಕ್ ಎದುರಾಗಿದೆ.
ಈಗಾಗಲೇ ಕಾರ್ಯಕ್ರಮಕ್ಕೆ ಹಲವು ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಆದರೆ, ಸಿನಿಮಾಗೆ 'ವಾರಣಾಸಿ' ಎಂಬ ಟೈಟಲ್ ಅನ್ನು ಇಡುವ ಬಗ್ಗೆ ರಾಜಮೌಳಿ ನಿರ್ಧರಿಸಿದ್ದಾರೆ. ಇದನ್ನೇ ವೇದಿಕೆ ಮೇಲೆ ಅಧಿಕೃತವಾಗಿ ಘೋಷಿಸಲು ಎದುರುನೋಡುತ್ತಿದ್ದಾರೆ. ಹೀಗಿರುವಾಗಲೇ, ಮತ್ತೊಂದು ಚಿತ್ರತಂಡವು ಇದೇ ಶೀರ್ಷಿಕೆಯನ್ನು ಇಡುವುದಾಗಿ ತಿಳಿಸಿರುವುದು ಸದ್ಯ ಗೊಂದಲಕ್ಕೆ ಕಾರಣವಾಗಿದೆ. ಸಾಯಿ ಕುಮಾರ್ ಮತ್ತು ರಾಕುಲ್ ಪ್ರೀತ್ ಸಿಂಗ್ ನಟಿಸಿರುವ 'ರಫ್' ಚಿತ್ರವನ್ನು ನಿರ್ಮಿಸಿದ ಸಿಎಚ್ ಸುಬ್ಬಾ ರೆಡ್ಡಿ, ತಮ್ಮ ಮುಂಬರುವ ಚಿತ್ರಕ್ಕೆ 'ವಾರಣಾಸಿ' ಎಂದೇ ಟೈಟಲ್ ಇಟ್ಟಿದ್ದಾರೆ ಹಾಗೂ ಇದನ್ನು ಈಗಾಗಲೇ ರಿಜಿಸ್ಟರ್ ಕೂಡ ಮಾಡಿಸಿದ್ದಾಗಿ ತಿಳಿಸಿದ್ದಾರೆ.
ಈ ವಿಚಾರ ತಿಳಿದ ಬಳಿಕ ರಾಜಮೌಳಿ ಮುಂದಿರುವ ಆಯ್ಕೆ ಏನು? ಹೊಸ ಟೈಟಲ್ ಹುಡುಕುತ್ತಾರೋ ಅಥವಾ ಗೊಂದಲದ ನಡುವೆಯೇ ವಾರಣಾಸಿ ಶೀರ್ಷಿಕೆಗೆ ಹ್ಯಾಶ್‌ಟ್ಯಾಗ್ ನೀಡುವ ಮೂಲಕ ಮುಂದುವರಿಯುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ. ಸಾಮಾನ್ಯವಾಗಿ ರಾಜಮೌಳಿ ಅವರು ತಮ್ಮ ಸಿನಿಮಾ ಮತ್ತು ಅದರ ಟೈಟಲ್ಗಳ ವಿಷಯದಲ್ಲಿ ಬಹಳ ಜಾಗರೂಕರಾಗಿರುತ್ತಾರೆ. ಶೀರ್ಷಿಕೆಗಳು, ರಿಲೀಸ್ ಡೇಟ್, ದೃಶ್ಯಗಳು ಮತ್ತು ಸಂಭಾಷಣೆಗಳಲ್ಲಿ ಯಾವುದೇ ವಿವಾದಗಳು ಬರದಂತೆ ಖಚಿತಪಡಿಸಿಕೊಳ್ಳುತ್ತಾರೆ. ಆದರೆ, ಇದು ಹೇಗಾಯಿತು ಎಂಬ ಗೊಂದಲ ಇದೀಗ ಸಿನಿಪ್ರಿಯರಲ್ಲಿ ಕಾಡುತ್ತಿದೆ,(ಏಜೆನ್ಸೀಸ್).