

ಬೆಂಗಳೂರು: ಸಿಲಿಕಾನ್ ಸಿಟಿಯ ಖಾಸಗಿ ಅಪಾರ್ಟ್‌ಮೆಂಟ್‌ನಲ್ಲಿ ಪಾಲಕರೊಂದಿಗೆ ನೆಲೆಸಿದ್ದ ವಿದ್ಯಾರ್ಥಿನಿ, 12ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಬೆಳ್ಳಂದೂರಿನ ಕ್ಲಾಸಿಕ್ ಅಪಾರ್ಟ್‌ಮೆಂಟ್ ನಿವಾಸಿ ಜೆಸ್ಸಿಕಾ (15) ಮೃತ ವಿದ್ಯಾರ್ಥಿನಿ. ಮಂಗಳವಾರ ಬೆಳಗ್ಗೆ ಪಾಲಕರು ಕೆಲಸಕ್ಕೆ ಹೋಗಿದ್ದ ಸಮಯದಲ್ಲಿ ಬೆಳಗ್ಗೆ 10.30ರಲ್ಲಿ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನಿಖರ ಕಾರಣ ತಿಳಿದುಬಂದಿಲ್ಲ ಎಂದು ವೈಟ್‌ಫೀಲ್ಡ್ ವಿಭಾಗ ಡಿಸಿಪಿ ಎಸ್. ಗಿರೀಶ್ ತಿಳಿಸಿದ್ದಾರೆ.
ತಮಿಳುನಾಡು ಮೂಲದ ಡ್ಯಾನಿಯಲ್ ಮತ್ತು ದೇವಿ ದಂಪತಿಯ ಜೆಸ್ಸಿಕಾ ಸೇರಿ ಇಬ್ಬರು ಮಕ್ಕಳ ಜೊತೆಗೆ 2 ವರ್ಷದಿಂದ ಕ್ಲಾಸಿಕ್ ಅಪಾರ್ಟ್‌ಮೆಂಟ್‌ನಲ್ಲಿ ನೆಲೆಸಿದ್ದರು. ತಂದೆ ಸ್‌ಟಾವೇರ್ ಇಂಜಿನಿಯರ್, ತಾಯಿ ಶಾಲಾ ಶಿಕ್ಷಕಿ. ಖಾಸಗಿ ಶಾಲೆಯಲ್ಲಿ 10ನೇ ತರಗತಿಯಲ್ಲಿ ಜೆಸ್ಸಿಕಾ ಓದುತ್ತಿದ್ದಳು. ಇತ್ತೀಚೆಗೆ ಶಾಲೆಗೆ ಸಹ ಸರಿಯಾಗಿ ಹೊಗುತ್ತಿರಲಿಲ್ಲ.
ಕಳೆದ 3 ತಿಂಗಳಲ್ಲಿ 6 ದಿನ ಮಾತ್ರ ತರಗತಿಗೆ ಹಾಜರಾಗಿದ್ದಳು. ಮಂಗಳವಾರ ಸಹ ಮನೆಯಲ್ಲಿ ಶಾಲೆಗೆ ಹೋಗುವುದಾಗಿ ಹೇಳಿ ಹೊರಟ ಜೆಸ್ಸಿಕಾ, ತಂದೆ-ತಾಯಿ ಕೆಲಸಕ್ಕೆ ಹೋದ ಮೇಲೆ ವಾಪಸ್ ಮನೆಗೆ ಬಂದಿದ್ದಳು. ಇತ್ತ ಶಾಲೆಯಿಂದ ಜೆಸ್ಸಿಕಾ, ತರಗತಿಗೆ ಬಂದಿಲ್ಲ ಎಂದು ಪಾಲಕರಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಪಾಲಕರು, ಎಲ್ಲಿದ್ದಾಳೆ ಎಂದು ಪರಿಶೀಲನೆ ನಡೆಸಿದಾಗ ಮಹಡಿಯಿಂದ ಬಿದ್ದು ಸಾವನ್ನಪ್ಪಿರುವ ವಿಷಯ ಗೊತ್ತಾಗಿದೆ.
ಆದರೆ, ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಇತ್ತೀಚೆಗೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದಳು ಎನ್ನಲಾಗಿದೆ. ಪಾಲಕರು ಹೇಳಿಕೆ ನೀಡಿದ ಮೇಲೆ ಕಾರಣ ತಿಳಿದುಬರಲಿದೆ ಎಂದು ಡಿಸಿಪಿ ಎಸ್. ಗಿರೀಶ್ ಮಾಹಿತಿ ನೀಡಿದ್ದಾರೆ. ಬೆಳ್ಳಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.