

ಎನ್.ಎಲ್. ಶಿವಮಾದು
ಬೆಂಗಳೂರು: ದಕ್ಷಿಣ ಭಾರತ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ರಾಜ್ಯದಲ್ಲಿಯೇ ಶಾಲಾ ಶಿಕ್ಷಣದ ಪರೀಕ್ಷೆಯಲ್ಲಿ ಮತ್ತು ಕಲಿಕೆಯನ್ನು ಅಳೆಯುವ ವಿಚಾರದಲ್ಲಿ ಸುಧಾರಣೆಯಲ್ಲಿದೆ ಎಂಬುದು ದತ್ತಾಂಶಗಳಿಂದ ತಿಳಿದು ಬಂದಿದೆ.
ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಕುಸಿಯುತ್ತಿದೆ. ಮಕ್ಕಳು ಕಲಿಕೆಯಲ್ಲಿ ಹಿಂದುಳಿದಿದ್ದಾರೆ. ಕನ್ನಡ ಹೊರತಾಗಿ ಇಂಗ್ಲಿಷ್, ಹಿಂದಿ, ಗಣಿತ ಮತ್ತು ವಿಜ್ಞಾನದಲ್ಲಿ ಕಲಿಕೆಯಲ್ಲಿ ಹಿಂದುಳಿದಿದ್ದಾರೆ ಎಂಬ ಮಾತಿದೆ. ಆದ್ಯಾಗ್ಯೂ, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಮಕ್ಕಳನ್ನು ಉತ್ತೀರ್ಣಗೊಳಿಸಲು ಮಾನದಂಡಗಳನ್ನು ಅನುಸರಿಸಲಾಗುತ್ತಿದೆ. ಈ ಮಾಣದಂಡಗಳು ಇತರೆ ರಾಜ್ಯಗಳಿಗಿಂತ ಮೇಲ್ದರ್ಜೆಯಲ್ಲಿದೆ.
ರಾಜ್ಯದಲ್ಲಿ ಕೃಪಾಂಕ ನೀಡಿ ಇಂದಿಷ್ಟು ವಿದ್ಯಾರ್ಥಿಗಳನ್ನು ಉತ್ತೀರ್ಣ ಮಾಡಲಾಗುತ್ತಿದೆ. ಅದರ ಹೊರತಾಗಿಯೂ ಕನಿಷ್ಠ ಅಂಕಗಳ ನಿಗದಿ ಮತ್ತು ಕೃಪಾಂಕಗಳನ್ನು ನೀಡಲು ಅನುಸರಿಸುವ ಮಾನದಂಡಗಳು ಇತರೆ ರಾಜ್ಯಗಳಿಗೆ ಹೋಲಿಸಿದರೆ ಸುಸ್ಥಿತಿಯಲ್ಲಿವೆ.
ರಾಜ್ಯದಲ್ಲಿರುವ ನಿಯಮ:
ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಥಿಯರಿ 80 ಅಂಕಗಳಲ್ಲಿ ಕನಿಷ್ಠ 28 ಅಂಕಗಳನ್ನು ಪಡೆಯಬೇಕು. 20 ಆಂತರಿಕ ಅಂಕಗಳಲ್ಲಿ ಕನಿಷ್ಠ ಇಂತಿಷ್ಟು ಅಂಕಗಳನ್ಜು ಪಡೆಯಬೇಕು ಎಂಬ ನಿಯಮವಿಲ್ಲ. ಆದರೆ, ಎರಡೂ ಸೇರಿ ಕನಿಷ್ಠ 35 ಅಂಕಗಳನ್ನು ಪಡೆದಿರಬೇಕು ಎಂಬ ನಿಯಮವಿದೆ. ಅಂದರೆ, 625 ಅಂಕಗಳಿಗೆ ಉತ್ತೀರ್ಣರಾಗಲು ಕನಿಷ್ಠ 219 ಅಂಕಗಳನ್ಹು ಪಡೆದಿರಬೇಕು.
ಒಂದು ವೇಳೆ ವಿದ್ಯಾರ್ಥಿಯು 175 ಅಂಕಗಳನ್ನು ಪಡೆದಿದ್ದು, ಮೂರು ವಿಷಯಗಳಲ್ಲಿ ಉತ್ತೀರ್ಣರಾಗಿ ಉಳಿದೆ ಮೂರು ವಿಷಯಗಳಲ್ಲಿ ಅನುತ್ತೀರ್ಣರಾಗಿದ್ದರೆ, ಶೇ.10 ಅಂಕಗಳನ್ನು ಕೃಪಾಂಕ ನೀಡಿ ಉತ್ತೀರ್ಣ ಮಾಡಲಾಗುತ್ತದೆ. ಅಂದರೆ ಕನಿಷ್ಠ 1 ಅಂಕದಿಂದ ಗರಿಷ್ಠ 26 ಅಂಕದವರೆಗೂ ನೀಡಲಾಗುತ್ತದೆ.
ಇತರೆ ರಾಜ್ಯಗಳಲ್ಲಿರುವ ನಿಯಮಗಳು:
ಕೇರಳದಲ್ಲಿ ಪರೀಕ್ಷಾ ವಿಧಾನವು ಬಹಳ ಸುಲಭವಾಗಿದೆ. ಈ ಕಾರಣದಿಂದಲೂ ಸಾಕ್ಷರತಾ ಪ್ರಮಾಣ ಹೆಚ್ಚಳಕ್ಕೆ ಅನುಕೂಲವಾಗಿದೆ. ವಿದ್ಯಾರ್ಥಿಯು ಪ್ರಾಥಮಿಕ ಹಂತದಲ್ಲಿ ಉತ್ತೀರ್ಣಗೊಂಡರೆ, ಮುಂದಿನ ಹಂತಗಳಲ್ಲಿ ಪಾಸ್ ಆಗುತ್ತಾನೆ ಎಂಬ ಉದ್ದೇಶ ಹೊಂದಲಾಗಿದೆ.
ಕೇರಳದಲ್ಲಿ ಆಂತರಿಕ ಮತ್ತು ಥಿಯರಿ ಸೇರಿ ಕನಿಷ್ಠ 30 ಅಂಕಗಳನ್ನು ಪಡೆದರೆ ವಿದ್ಯಾರ್ಥಿಯು 10ನೇ ತರಗತಿ ಉತ್ತೀರ್ಣನಾಗುತ್ತಾನೆ,. ಥಿಯರಿ 80ರಲ್ಲಿ 15 ಹಾಗೂ ಆಂತರಿಕ 20ರಲ್ಲಿ 15 ಅಂಕಗಳನ್ನು ಪಡೆದರೆ ಉತ್ತೀರ್ಣ ಮಾಡಲಾಗುತ್ತದೆ.
ಆಂಧ್ರ ಪ್ರದೇಶದಲ್ಲಿ ಆಂತರಿಕ ಅಂಕಗಳನ್ನು ನೀಡುವ ನಿಯಮವಿಲ್ಲ. 100 ಅಂಕಗಳಿಗೆ ಪರೀಕ್ಷೆ ನಡೆಸಲಾಗುತ್ತದೆ. ವಿದ್ಯಾರ್ಥಿಯು ಕನಿಷ್ಠ 35 ಅಂಕಗಳನ್ನು ಪಡೆದರೆ ಉತ್ತೀರ್ಣ ಮಾಡಲಾಗುತ್ತದೆ. ಆದರೆ. ಇಲ್ಲೊಂದು ವಿದ್ಯಾರ್ಥಿಸ್ನೇಹಿ ನಿಯಮವಿದೆ. ಹಿಂದಿಯಲ್ಲಿ 100 ಅಂಕದ ಪರೀಕ್ಷೆಯಲ್ಲಿ ಕೇವಲ 20 ಅಂಕಗಳನ್ನು ಪಡೆದು ಉಳಿದೆ ಪರೀಕ್ಷೆಯಲ್ಲಿ 35 ಅಂಕಗಳನ್ನು ಪಡೆದಿದ್ದರೆ, ವಿದ್ಯಾರ್ಥಿಯು ಪಾಸ್ ಎಂದು ಪ್ರಕಟಿಸಲಾಗುತ್ತದೆ. ಕರ್ನಾಟಕದಲ್ಲಿ ಹಿಂದಿಯಲ್ಲಿಯೂ 35 ಅಂಕಗಳನ್ನು ಪಡೆದಿದ್ದರೆ ಮಾತ್ರ ಉತ್ತೀರ್ಣ ಮಾಡಲಾಗುತ್ತದೆ.
ತಮಿಳುನಾಡಿನಲ್ಲಿ ಶೇ35 ಅಂಕ ಪಡೆದಿರಬೇಕು. ಆದರೆ, ಜ್ಞಾನದಲ್ಲಿ ಪ್ರಾಯೋಗಿಕ ಪರೀಕ್ಷೆಯಲ್ಲಿ 25ರಲ್ಲಿ 15 ಹಾಗೂ ಥಿಯರಿ 75ರಲ್ಲಿ 25 ಪಡೆದಿದ್ದರೆ, ವಿದ್ಯಾರ್ಥಿಯು ಉತ್ತೀರ್ಣನಾಗುತ್ತಾನೆ. ಇದರಲ್ಲಿ ವಿದ್ಯಾರ್ಥಿಗೆ ಯಾವುದೇ ರೀತಿಯಲ್ಲಿ ಕೃಪಾಂಕವನ್ನು ನೀಡುವುದಿಲ್ಲ.
ತೆಲಂಗಾಣದಲ್ಲಿ ಥಿಯರಿಯಲ್ಲಿ 80ಕ್ಕೆ 28 ಮತ್ತು ಆಂತರಿಕ ಅಂಗಳು 20ರಲ್ಲಿ ಕನಿಷ್ಠ 7 ಅಂಕಗಳನ್ನು ಪಡೆದು 35 ಪಡೆದಿರಬೇಕು ಎಂಬ ನಿಯಮವಿದೆ. ಇದರ ಹಿಂದಿಯಲ್ಲಿ 20ರಲ್ಲಿ 6 ಮತ್ತು 80 ಅಂಕಗಳಲ್ಲಿ 14 ಅಂಕಗಳನ್ನು ಪಡೆದರೆ ಉತ್ತೀರ್ಣವೆಂದು ಪ್ರಕಟಿಸಲಾಗುತ್ತದೆ.
ಹಿಂದಿ ಉತ್ತೀರ್ಣ ಅಂಕ ನಿಯಮ ಸಡಿಲ ಮಾಡಲಿ
ರಾಜ್ಯದಲ್ಲಿಯೂ ಹಿಂದಿಯಲ್ಲಿನ ಉತ್ತೀರ್ಣ ಮಾಡುವ ಅಂಕಗಳನ್ನು ಸಡಿಲ ಮಾಡಲಿ ಎಂಬ ಒತ್ತಾಯವಿದೆ. ಹಿಂದಿಯನ್ನು 5ರಿಂದ 10ನೇ ತರಗತಿವರೆಗೂ ಕಲಿಸಿದರೂ ಸರಿಯಾದ ಶಿಕ್ಷಕರಿಲ್ಲ. ರಾಜ್ಯದಲ್ಲಿ 5,060 ಹಿಂದಿ ಶಿಕ್ಷಕರಿಗೆ ಅನುಮೋದನೆ ನೀಡಲಾಗಿದೆ. ಆದರೆ, ಕೇವಲ 1,568 ಮಂದಿ ಮಾತ್ರ ಕಾರ್ಯ ನಿವರ್ವಹಿಸುತ್ತಿದ್ದು, 3,500 ಶಿಕ್ಷಕರ ಹುದ್ದೆ ಖಾಲಿ ಇದೆ. ಇಂತಹ ಸಂದರ್ಭದಲ್ಲಿ ಗುಣಮಟ್ಟದ ಶಿಕ್ಷಣ ಮತ್ತು ಕಲಿಕೆ ಎಲ್ಲಿಂದ ಸಾಧ್ಯವಾಗಲಿದೆ ಎಂಬುದು ಎಲ್ಲರ ಪ್ರಶ್ನೆಯಾಗಿದೆ.
ಕಲಿಕೆಯಲ್ಲಿ ಹಿಂದುಳಿದಿರುವ ವಿದ್ಯಾರ್ಥಿಗಳ ದೃಷ್ಟಿಯಿಂದ ಅವರನ್ನು ಕನಿಷ್ಠ ಪಾಸ್ ಮಾಡಲು ಕೆಲವು ನಿಯಮಗಳನ್ನು ಸಡಿಲಗೊಳಿಸುವುದು ಉತ್ತಮ. ಇತರೆ ರಾಜ್ಯಗಳು ಹಾಗೂ ಸಿಬಿಎಸ್‌ಇ ನಿಯಮಗಳನ್ನು ಅಳವಡಿಸಿಕೊಂಡರೆ ಸಾಕ್ಷರತಾ ಪ್ರಮಾಣ ಹೆಚ್ಚಳಕ್ಕೂ ಅನುಕೂಲವಾಗಲಿದೆ. - ಗಣೇಶ್ ಭಟ್, ಶಿಕ್ಷಣ ತಜ್ಞ