ಎಸ್ಸೆಸ್ಸೆಲ್ಸಿ, ಪಿಯು ಖಾಸಗಿ, ಪುನರಾವರ್ತಿತ ವಿದ್ಯಾರ್ಥಿಗಳ ನೋಂದಣಿ ನಿಯಮ ಬದಲು: ಆನ್‌ಲೈನ್‌ನಲ್ಲೇ ನೋಂದಣಿ

SSLC Exam
Published on

ಎನ್.ಎಲ್. ಶಿವಮಾದು

ಬೆಂಗಳೂರು: ಮುಂಬರುವ ಮಾರ್ಚ್ ಏಪ್ರಿಲ್‌ನಲ್ಲಿ ನಡೆಯಲಿರುವ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗೆ ನೋಂದಣಿ ಮಾಡಿಕೊಳ್ಳಲಿರುವ ಖಾಸಗಿ ಮತ್ತು ಪುನರಾವರ್ತಿತ ಅಭ್ಯರ್ಥಿಗಳಿಗೆ ನಿಯಮ ಸರಳೀಕರಣ ಮಾಡಿದೆ.

ಈ ಮೊದಲು ವಯೋಮಿತಿ ಆಧಾರದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗೆ ನೋಂದಣಿ ಮಾಡಿಕೊಳ್ಳಬೇಕಿದ್ದರೆ, ಅಭ್ಯರ್ಥಿಗಳ ಸಮೀಪದ ಸರ್ಕಾರಿ ಪ್ರೌಢಶಾಲೆ ಮತ್ತು ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ನೋಂದಣಿ ಮಾಡಿಕೊಳ್ಳಬೇಕಿತ್ತು. ಆದರೆ, ಈಗ ಅಭ್ಯರ್ಥಿಗಳು ಸ್ವತಃ ತಮ್ಮ ಮೊಬೈಲ್‌ಗಳಲ್ಲಿಯೇ ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಲು ಈ ಬಾರಿಯಿಂದ ಅವಕಾಶ ಕಲ್ಪಿಸಲಾಗುತ್ತಿದೆ.

ನಿಯಮದ ಬದಲಾವಣೆ ವ್ಯತ್ಯಾಸಗಳೇನು?

ಇಲ್ಲಿಯವರೆಗೂ ಖಾಸಗಿ ಅಭ್ಯರ್ಥಿಗಾಗಿ ನೋಂದಣಿ ಮಾಡಿಕೊಳ್ಳಲು ಸರ್ಕಾರಿ ಶಾಲಾ/ಕಾಲೇಜುಗಳಿಗೆ ತೆರಳಿ ನೋಂದಣಿ ಮಾಡಿಕೊಳ್ಳಬೇಕಿತ್ತು. ಕೆಲವಡೆ ಖಾಸಗಿ ಮತ್ತು ಪುನರಾವರ್ತಿತ ಅಭ್ಯರ್ಥಿಗಳಿಗೆ ಶುಲ್ಕವನ್ನು ದುಪ್ಪಟ್ಟು ಹೇಳಿ ಮೋಸ ಮಾಡುವ ಹಾಗೂ ನೋಂದಣಿಗೆ ಸತಾಯಿಸುವ ಪ್ರಕರಣಗಳು ಕಂಡು ಬಂದಿದ್ದವು. ಈ ಹಿನ್ನೆಲೆಯಲ್ಲಿ ನಿಮಯ ಬದಲಾವಣೆ ಮಾಡಲಾಗಿದೆ ಎಂದು ಇಲಾಖೆ ಉನ್ನತ ಮೂಲಗಳು ತಿಳಿಸಿವೆ.

ವಿದ್ಯಾರ್ಥಿಗಳೇ ನೇರವಾಗಿ ನೋಂದಣಿ ಮಾಡಿಕೊಂಡು ಶುಲ್ಕ ಪಾವತಿಸುವುದರಿಂದ ಯಾವುದೇ ರೀತಿಯಲ್ಲಿ ಮೋಸವಾಗುವುದಿಲ್ಲ. ಅಲ್ಲದೆ, ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸುವುದರಿಂದ ನಿಖರವಾಗಿ ಶುಲ್ಕದ ಮೊತ್ತ ತಿಳಿಯಲಿದೆ. ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಳ್ಳುವುದರಿಂದ ವಿದ್ಯಾರ್ಥಿಗಳು ಶಾಲಾ/ಕಾಲೇಜುಗಳಿಗೆ ಪರದಾಡುವಂತಿಲ್ಲ.

ಎಸ್‌ಎಸ್‌ಎಲ್ ಮತ್ತು ದ್ವಿತೀಯ ಪಿಯುಸಿಯು ಪ್ರಮುಖ ಘಟ್ಟವಾಗಿದೆ. ಇಲ್ಲಿ ಅನುತ್ತೀರ್ಣರಾದರೆ, ಉನ್ನತ ಶಿಕ್ಷಣಕ್ಕೆ ಹೋಗಲು ಸಾಧ್ಯವಿಲ್ಲ. ಈ ದೃಷ್ಟಿಯಿಂದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ ನಿಯಮಗಳನ್ನು ಸಡಿಲಗೊಳಿಸಿ ಆಕರ್ಷಿಸಲು ಬೇಕಾಗುವ ಕೆಲಸಗಳನ್ನು ಇಲಾಖೆ ಮಾಡುತ್ತಿದ್ದೆ ಎನ್ನುತ್ತಾರೆ ಇಲಾಖೆ ಅಧಿಕಾರಿಗಳು.

15ರಿಂದ 35 ಸಾವಿರ ವಿದ್ಯಾರ್ಥಿಗಳು:

ಪ್ರತಿ ವರ್ಷ ಕನಿಷ್ಠ 15ರಿಂದ 20 ಸಾವಿರ ಖಾಸಗಿ ಅಭ್ಯರ್ಥಿಗಳು ನೋಂದಣಿ ಮಾಡಿಕೊಳ್ಳುತ್ತಾರೆ. 2025ರ ಮಾರ್ಚ್‌ನಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 13,154 ಮಂದಿ ಖಾಸಗಿ ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ಇದರಲ್ಲಿ 1,072 (ಶೇ.8.15) ಮಂದಿ ಮಾತ್ರ ಉತ್ತೀರ್ಣರಾಗಿದ್ದರು. ಹಾಗೆಯೇ ದ್ವಿತೀಯ ಪಿಯುಸಿಯಲ್ಲಿ 17,297 ಮಂದಿಯಲ್ಲಿ 4,830 (ಶೇ.27.92) ಮಂದಿ ಮಾತ್ರ ಉತ್ತೀರ್ಣರಾಗಿದ್ದಾರೆ.

ಹಾಗೆಯೇ ಪುನರಾವರ್ತಿತ ವಿದ್ಯಾರ್ಥಿಗಳಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ 33,952 ಮಂದಿಯಲ್ಲಿ ಕೇವಲ 628 (ಶೇ.1.85) ಮಂದಿ ಮಾತ್ರ ಉತ್ತೀರ್ಣರಾಗಿದ್ದಾರೆ. ಪಿಯುಸಿಯಲ್ಲಿ 33,576 ಮಂದಿಯಲ್ಲಿ 2,987 (ಶೇ.8.90) ಮಂದಿ ತೇರ್ಗಡೆಯಾಗಿದ್ದಾರೆ.

ಅಭ್ಯರ್ಥಿಗಳ ಸಂತಸ:

ಶಾಲೆಗಳಲ್ಲಿ ಮಾಹಿತಿ ಕೇಳಲು ಹೋದಾಗ ಕೆಲವೆಡೆ ಸರಿಯಾದ ಮಾಹಿತಿಗಳನ್ನು ನೀಡುತ್ತಿರಲಿಲ್ಲ. ಆನ್‌ಲೈನ್ ನೋಂದಣಿ ವ್ಯವಸ್ಥೆಯಿಂದ ಹೆಚ್ಚಿನ ಅನುಕೂಲವಾಗಿದೆ. ಶುಲ್ಕವನ್ನು ಕೂಡ ಆನ್‌ಲೈನ್‌ನಲ್ಲಿಯೇ ಪಾವತಿ ಮಾಡುವುದರಿಂದ ಪರದಾಟ ತಪ್ಪಿದೆ ಎಂದು ಪುನರಾವರ್ತಿತ ಹಾಗೂ ಖಾಸಗಿ ಅಭ್ಯರ್ಥಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

ಮುಂದಿನ ವಾರ ಯೋಜನೆ ೋಷಣೆ

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಮುಂದಿನ ವಾರ ಯೋಜನೆಯನ್ನು ಅಧಿಕೃತವಾಗಿ ೋಣೆ ಮಾಡಲಿದೆ. ವಿದ್ಯಾರ್ಥಿಗಳಿಗೆ ಅಗುವ ಅನುಕೂಲತೆಗಳ ಬಗ್ಗೆ ವಿವರವಾಗಿ ಮನವರಿಕೆ ಮಾಡಿಕೊಡಲಿದೆ ಎಂದು ತಿಳಿದು ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net