ಶಿವಮೊಗ್ಗ ಜಿಲ್ಲೆಯ 78 ಕೇಂದ್ರಗಳಲ್ಲಿ ಎಸ್‌ಎಸ್‌ಎಲ್‌ಸಿ ಎಕ್ಸಾಂ

sslc
ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಪೂರ್ವಸಿದ್ಧತಾ ಸಭೆಯಲ್ಲಿ ದಾಸೇಗೌಡ ಮಾತನಾಡಿದರು. ಸಿದ್ದಲಿಂಗ ರೆಡ್ಡಿ, ಡಾ.ನಾಗರಾಜ ನಾಯ್ಕ, ಸಿ.ಆರ್.ಪರಮೇಶ್ವರಪ್ಪ, ಅನಿಲ್‌ಕುಮಾರ್ ಭೂಮರಡ್ಡಿ, ಬಸವರಾಜಪ್ಪ ಮುಂತಾದವರಿದ್ದರು.
Published on

ಶಿವಮೊಗ್ಗ: ಚುನಾವಣೆ ಘೋಷಣೆಯಾಗಿರುವ ಸಂದರ್ಭದಲ್ಲೇ ಮಾ.25ರಂದು ಎಸ್‌ಎಸ್‌ಎಲ್‌ಸಿ ಪರೀಕ್ಷೆಯೂ ಆರಂಭವಾಗುತ್ತಿದೆ. ಹೀಗಾಗಿ ಎರಡೂ ಜವಾಬ್ದಾರಿಗಳನ್ನು ಶಿಕ್ಷಕರು ಯಶಸ್ವಿಯಾಗಿ ನಿಭಾಯಸಬೇಕಿದೆ ಎಂದು ಜಿಪಂ ಉಪಕಾರ್ಯದರ್ಶಿ ದಾಸೇಗೌಡ ಹೇಳಿದರು.

ಜಿಲ್ಲಾಡಳಿತದಿಂದ ಸರ್ಕಾರಿ ನೌಕರರ ಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಎಸ್‌ಎಸ್‌ಎಲ್‌ಸಿ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ಪರೀಕ್ಷೆ ಹಾಗೂ ಚುನಾವಣೆಗೆ ಪ್ರತ್ಯೇಕವಾಗಿ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. ಎಲ್ಲೂ ಲೋಪವಾಗದಂತೆ ಎಚ್ಚರ ವಹಿಸಬೇಕೆಂದರು.
ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ ಮಾತನಾಡಿ, ಎಸ್‌ಎಸ್‌ಎಲ್‌ಸಿ ಪರೀಕ್ಷೆ ಏ.6ರವರೆಗೆ ನಡೆಯಲಿದೆ. ಜಿಲ್ಲೆಯ ಒಟ್ಟು 78 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಕಾರ್ಯಕ್ಕೆ ನಿಯೋಜನೆಗೊಂಡ ಸಿಬ್ಬಂದಿ ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಬೇಕು ಎಂದು ಹೇಳಿದರು.
ಪರೀಕ್ಷಾ ಕೇಂದ್ರಗಳಲ್ಲಿ ಮೂಲ ಸೌಕರ್ಯಗಳಾದ ಆಸನ, ಕುಡಿಯುವ ನೀರು ಸಮಪರ್ಕವಾಗಿರಬೇಕು. ಭದ್ರತೆ ದೃಷ್ಟಿಯಿಂದ ಪೊಲೀಸರ ನಿಯೋಜಿಸಲಾಗುವುದು. ಪ್ರಶ್ನೆ ಪತ್ರಿಕೆ ರವಾನೆಗೆ ಇಲಾಖೆಯಿಂದಲೇ ವಾಹನ ವ್ಯವಸ್ಥೆಯಿರುತ್ತದೆ ಎಂದರು.
ಎಎಸ್ಪಿ ಅನಿಲ್‌ಕುಮಾರ್ ಭೂಮರಡ್ಡಿ ಮಾತನಾಡಿ, ಪರೀಕ್ಷೆ ಕೂಡ ಕಿರು ಚುನಾವಣೆಯಂತೆ. ಸಾಕಷ್ಟು ಸಿದ್ಧತೆಗಳನ್ನು ಇದಕ್ಕಾಗಿ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳು ನಿರ್ಭೀತಿಯಿಂದ ಎದುರಿಸಬೇಕೆಂದು ಸಲಹೆ ನೀಡಿದರು.
ಜಿಲ್ಲಾ ಶಿಕ್ಷಕರ ತರಬೇತಿ ಕೇಂದ್ರದ ಪ್ರಾಚಾರ್ಯ ಬಸವರಾಜಪ್ಪ, ಜಿಲ್ಲಾ ಲಸಿಕಾಧಿಕಾರಿ ಡಾ.ನಾಗರಾಜ ನಾಯ್ಕ, ಡಿಡಿಪಿಐ ಸಿ.ಆರ್.ಪರಮೇಶ್ವರಪ್ಪ ಇತರರಿದ್ದರು.
ಪರೀಕ್ಷೆ ವೇಳಾಪಟ್ಟಿ
ಮಾ.25- ಪ್ರಥಮ ಭಾಷೆ
27- ಸಮಾಜ ವಿಜ್ಞಾನ
30- ವಿಜ್ಞಾನ
ಏ.2- ಗಣಿತ
4- ತೃತೀಯ ಭಾಷೆ
6- ದ್ವಿತೀಯ ಭಾಷೆ
ರೆಗ್ಯುಲರ್ ವಿದ್ಯಾರ್ಥಿಗಳು- 22,044
ಪುನರಾವರ್ತಿತ ವಿದ್ಯಾರ್ಥಿಗಳು- 1,430
ಖಾಸಗಿ ಅಭ್ಯರ್ಥಿಗಳು- 384
ಖಾಸಗಿ ಪುನರಾವರ್ತಿತ- 144
ಒಟ್ಟು- 24,002 ವಿದ್ಯಾರ್ಥಿಗಳು
78 ಮುಖ್ಯಅಧೀಕ್ಷಕರು
24 ಉಪ ಮುಖ್ಯ ಅಧೀಕ್ಷಕರು

102 ಸ್ಥಾನಿಕ ಜಾಗೃತ ದಳದ ಅಧಿಕಾರಿಗಳು
31 ಮಾರ್ಗಾಧಿಕಾರಿಗಳು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net