ಎಸ್​ಎಸ್​ಎಲ್​ಸಿ ಪರೀಕ್ಷೆ-2 ಫಲಿತಾಂಶ ಪ್ರಕಟ; ಶೇ.31ರಷ್ಟು ವಿದ್ಯಾರ್ಥಿಗಳು ಉತ್ತೀರ್ಣ

res
Published on

ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಜೂನ್ 14 ರಿಂದ 22 ರವರೆಗೆ ನಡೆಸಿದ್ದ ಎಸ್‌ಎಸ್‌ಎಲ್‌ಸಿ ಪರೀಕ್ಷೆ -2ರ ರಿಸಲ್ಟ್‌ ಅನ್ನು ಇಂದು ಬಿಡುಗಡೆ ಮಾಡಿದ್ದು, 31.02% ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಫಲಿತಾಂಶವನ್ನು ಮಂಡಳಿಯ ಜಾಲತಾಣ kseab.karnataka.gov.in ಮತ್ತು karresults.nic.in ನಲ್ಲಿ ತಮ್ಮ ಅಂಕಗಳನ್ನು ಪರಿಶೀಲಿಸಬಹುದು ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಹೇಳಿದೆ.

ಕರ್ನಾಟಕ ಎಸ್​ಎಸ್​ಎಲ್​ಸಿ ಪೂರಕ ಪರೀಕ್ಷೆಗಳು ಜೂನ್ 14 ರಿಂದ 22ರವರೆಗೆ ರಾಜ್ಯದ 724 ಪರೀಕ್ಷಾ ಕೇಂದ್ರಗಳಲ್ಲಿ ನಡೆದಿತ್ತು. 1.44 ಲಕ್ಷ ಬಾಲಕರು, 79,148 ಬಾಲಕಿಯರು ಸೇರಿದಂತೆ 2.23 ಲಕ್ಷ ವಿದ್ಯಾರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದರು. ಈ ಪೈಕಿ ಒಟ್ಟು 69,275 ವಿದ್ಯಾರ್ಥಿಗಳು ಪಾಸ್‌ ಆಗಿದ್ದಾರೆ. ಅವರ ಪೈಕಿ ಬಾಲಕರು 38,820 ಹಾಗೂ ಬಾಲಕಿಯರು 30,455 ಉತ್ತೀರ್ಣರಾಗಿದ್ದಾರೆ.

ಏಳು ಮಾಧ್ಯಮಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿತ್ತು. ಸುಮಾರು 13,085 ವಿದ್ಯಾರ್ಥಿಗಳು ಅಂಕ ಹೆಚ್ಚಿಸಿಕೊಳ್ಳುವುದಕ್ಕಾಗಿ ಎರಡನೇ ಪರೀಕ್ಷೆಗೆ ಹೆಸರು ನೋಂದಾಯಿಸಿಕೊಂಡಿದ್ದರು. ವಾರ್ಷಿಕ ಪರೀಕ್ಷೆಯಲ್ಲಿ ಉತ್ತೀರ್ಣವಾಗದ ಅಥವಾ ಇನ್ನೂ ಹೆಚ್ಚಿನ ಅಂಕಗಳನ್ನು ಬಯಸಿದ ವಿದ್ಯಾರ್ಥಿಗಳು ಈ ಪರೀಕ್ಷೆಗೆ ಹಾಜರಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net