ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಪರೀಕ್ಷೆ: ಎನ್‌ಐಒಎಸ್ ಮಾದರಿಗೆ ಚಿಂತನೆ

NIOS Model
Published on

ಎನ್.ಎಲ್. ಶಿವಮಾದು

ಬೆಂಗಳೂರು: ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವುದಕ್ಕಾಗಿ ವ್ಯರ್ಥವಾಗಿ ಮತ್ತೊಂದು ವರ್ಷ ಕಾಯುವುದನ್ನು ತಪ್ಪಿಸುವುದಕ್ಕಾಗಿ ರಾಷ್ಟ್ರೀಯ ಮುಕ್ತ ಶಾಲಾ ಸಂಸ್ಥೆ (ಎನ್‌ಐಒಎಸ್) ಮಾದರಿಯಲ್ಲಿ ಪರೀಕ್ಷೆ ನಡೆಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಚಿಂತನೆ ನಡೆಸುತ್ತಿದೆ.

ಪ್ರತಿ ವರ್ಷ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ತಲಾ ಒಂದೂವರೆಯಿಂದ ಎರಡು ಲಕ್ಷ ವಿದ್ಯಾರ್ಥಿಗಳು ಅನುತ್ತೀರ್ಣರಾಗುತ್ತಾರೆ. ಇಂತಹ ವಿದ್ಯಾರ್ಥಿಗಳಿಗೆ ಕಳೆದ ಎರಡು ವರ್ಷಗಳಿಂದ ಮೂರು ವಾರ್ಷಿಕ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಹೀಗಿದ್ದರೂ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳು ಅನುತ್ತೀರ್ಣರಾಗುತ್ತಾರೆ. ಬಳಿಕ ಉನ್ನತ ಶಿಕ್ಷಣ ಪಡೆಯಿವ ಆಲೋಚನೆಯಿಂದ ಹಿಂದೆ ಸರಿಯುತ್ತಾರೆ. ಈ ಕಾರಣದಿಂದ ಮುಕ್ತ ಶಾಲಾ ಮಾದರಿಯನ್ನು ಅಳವಡಿಸಿಕೊಳ್ಳಲು ಶಿಕ್ಷಣ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳು ಚರ್ಚಿಸಿದ್ದಾರೆ ಎಂದು ಇಲಾಖೆಯು ಅಧಿಕೃತ ಮೂಲಗಳು ಖಚಿತಪಡಿಸಿವೆ.

ಏನಿದು ಎನ್‌ಐಒಎಸ್ ಮಾದರಿ?

ಸಾಮಾನ್ಯವಾಗಿ ಮುಕ್ತ ಶಾಲೆಗಳು ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ವಾರ್ಷಿಕ ಎರಡು ಬಾರಿ ಜಿಲ್ಲಾ ಹಂತದಲ್ಲಿ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಇದೇ ಮಾದರಿಯನ್ನು ಪರೀಕ್ಷಾ ಸುಧಾರಣೆ ದೃಷ್ಟಿಯಿಂದ ಏಕೆ ಅಳವಡಿಸಿಕೊಳ್ಳಬಾರದು ಎಂಬುದರ ಬಗ್ಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಎದುರು ನೋಡುತ್ತಿದೆ.

ವಿದ್ಯಾರ್ಥಿಗಳಿಗೆ ಆಗುವ ಲಾಭವೇನು?

ಜಿಲ್ಲಾ ಹಂತದಲ್ಲಿ ಪರೀಕ್ಷೆ ನಡೆಸಿ ಆದಷ್ಟು ಶೀಘ್ರವಾಗಿ ಲಿತಾಂಶವನ್ನು ಪ್ರಕಟಿಸಿವುದರಿಂದ ಉನ್ನತ ಶಿಕ್ಷಣ, ಔದ್ಯೋಗಿಕ ಶಿಕ್ಷಣ ಅಥವಾ ಕನಿಷ್ಠ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆಧಾರದಲ್ಲಿ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು, ಬ್ಯಾಂಕ್‌ಗಳಲ್ಲಿ ಸಾಲ-ಸೌಲಭ್ಯಗಳನ್ನು ಪಡೆಯುವುದು ಸೇರಿ ಹತ್ತಾರು ರೀತಿಯಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.

ಕಲಿಕೆಯಲ್ಲಿ ಈಗಾಗಲೇ ಹಿಂದುಳಿದಿರುವ ವಿದ್ಯಾರ್ಥಿಗಳೂ ವರ್ಷಾನುಗಟ್ಟಲೆ, ಮತ್ತೆ ಪರೀಕ್ಷೆಗಾಗಿ ಕಾಯುವುದರಿಂದ ಶೈಕ್ಷಣಿಕ ದೃಷ್ಟಿಯಲ್ಲಿ ಲಾಭಕ್ಕಿಂತ ನಷ್ಟವೇ ಹೆಚ್ಚು. ಒಂದು ಬಾರಿ ಶಿಕ್ಷಣದಿಂದ ವಿಮುಖರಾಗಲು ನಿರ್ಧರಿಸಿದರೆ, ಮತ್ತೆ ಪರೀಕ್ಷೆಗೆ ಕರೆದುಕೊಂಡು ಬರುವುದು ಕಷ್ಟದ ವಿಷಯ. ಅಲ್ಲದೆ, ದೇಶರ ಒಟ್ಟು ದಾಖಲಾತಿ ಅನುಪಾತ (ಜಿಇಆರ್) ಕುಸಿತಕ್ಕೂ ಕಾರಣವಾಗಲಿದೆ ಎಂದು ಇಲಾಖೆ ಚಿಂತನೆಯಾಗಿದೆ.

ಮೂರು ಪರೀಕ್ಷೆಯೂ ಕಾರಣ

ದೇಶದಲ್ಲಿಯೇ ಮೊದಲ ಬಾರಿಗೆ ಶಾಲಾ ಶಿಕ್ಷಣದಲ್ಲಿ ಮೂರು ಪರೀಕ್ಷೆ ಪದ್ಧತಿಯನ್ನು ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಯು ಅಳವಡಿಸಿಕೊಂಡಿದೆ. ಇದರ ಜತೆಗೆ ಮುಂಬರುವ ಮಾರ್ಚ್/ಏಪ್ರಿಲ್‌ನಲ್ಲಿ ನಡೆಯಲಿರುವ 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಕೇಂದ್ರ ಪಠ್ಯಕ್ರಮ ಶಾಲೆಗಳ ಮಾದರಿಯಲ್ಲಿ ಶೇ.33 ಕನಿಷ್ಠ ಉತ್ತೀರ್ಣ ಪದ್ಧತಿಯನ್ನು ಸಹ ಅಳವಡಿಸಿಕೊಂಡಿದೆ.

ಈ ಎರಡೂ ಕಾರಣಗಳಿಂದ ಶಾಲಾ ಪರೀಕ್ಷೆಗಳಲ್ಲಿ ಲಿತಾಂಶ ಹೆಚ್ಚಳವಾಗಲಿದ್ದು, ಪರೀಕ್ಷೆಯಲ್ಲಿ ಅನುತ್ತೀರ್ಣರಾಗುವವರ ಸಂಖ್ಯೆ ಕಡಿಮೆಯಾಗಬಹುದು. ಇಂತಹ ವಿದ್ಯಾರ್ಥಿಗಳು ವರ್ಷಾನುಗಟ್ಟಲೆ ಏಕೆ ಕಾಯಬೇಕು. ಇದರ ಬದಲಾಗಿ ಎನ್‌ಐಒಎಸ್ ಮಾದರಿ ಅಳವಡಿಸಿಕೊಂಡು ಪ್ರತ್ಯೇಕ ಪರೀಕ್ಷೆ ನಡೆಸಬಹುದು ಎಂದು ಆಲೋಚಿಸಲಾಗಿದೆ ಎಂದು ಇಲಾಖೆಯ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.

ಪುನರಾವರ್ತಿತ, ಖಾಸಗೀ ಅಭ್ಯರ್ಥಿಗಳಿಗೆ ಹೆಚ್ಚು ಅನುಕೂಲ

ಈ ಬಾರಿಯಿಂದ ಖಾಸಗಿ ಮತ್ತು ಪುನರಾವರ್ತಿತ ಅಭ್ಯರ್ಥಿಗಳು ಪ್ರತ್ಯೇಕವಾಗಿ ನೋಂದಣಿ ಮಾಡಿಕೊಳ್ಳಲು ಆನ್‌ಲೈನ್‌ನಲ್ಲಿ ಅವಕಾಶ ಮಾಡಿಕೊಟ್ಟಿದೆ. ಇದರ ಮುಂದುವರಿದ ಭಾಗವಾಗಿ ಎನ್‌ಐಒಎಸ್ ಮಾದರಿ ಕೂಡ ಅಳವಡಿಸಿಕೊಳ್ಳುವ ಮೂಲಕ ಉನ್ನತ ಶಿಕ್ಷಣದತ್ತ ವಿದ್ಯಾರ್ಥಿಗಳನ್ನು ಆಕರ್ಷಿಸುವ ಮತ್ತು ತಮ್ಮ ಸಹಪಾಠಿಗಳಂತೆ ತಾವು ಕಲಿಯಬೇಕೆಂಬ ಹಂಬಲವಿರುವ ವಿದ್ಯಾರ್ಥಿಗಳನ್ನು ಉನ್ನತ ಶಿಕ್ಷಣಕ್ಕೆ ಸೇರುವಂತೆ ಮಾಡುವುದು ಇಲಾಖೆಯ ಗುರಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net