

ನಟಿ ಶ್ರುತಿ ಹರಿಹರನ್ ಮತ್ತೆ ಎಂಟ್ರಿ ಕೊಡುವುದಕ್ಕೆ ಸಜ್ಜಾಗಿದ್ದಾರೆ. ಕಳೆದ ಎರಡು ವರ್ಷಗಳಿಂದ ಸಿನಿಮಾದಿಂದ ದೂರವೇ ಉಳಿದಿದ್ದ ಅವರು, ಇದೀಗ ಕಿರುಚಿತ್ರವೊಂದರ ಮೂಲಕ ಎದುರಾಗಲು ಸಿದ್ಧತೆ ನಡೆಸುತ್ತಿದ್ದಾರೆ.
‘ಶೇಡ್ಸ್ ಆಫ್ ಎ ಕೈಟ್’ (ಗಾಳಿಪಟದ ಛಾಯೆ) ಎಂಬ ಮಲಯಾಳಂ ಕಿರುಚಿತ್ರದಲ್ಲಿ ಶ್ರುತಿ ನಟಿಸಿದ್ದು, ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಆ ಕಿರುಚಿತ್ರದ ಫಸ್ಟ್ಲುಕ್ ಬಿಡುಗಡೆಯಾಗಿದೆ. ಅಷ್ಟಕ್ಕೂ ಏನಿದು ‘ಶೇಡ್ಸ್ ಆಫ್ ಎ ಕೈಟ್’? ಈ ಕಿರುಚಿತ್ರ ನಿರ್ದೇಶನ ಮಾಡಿರುವ ಕೇರಳ ಮೂಲದ ಸೊಹೇಲ್ ಮಹಮ್ಮದ್ ಅವರೇ ವಿಜಯವಾಣಿಗೆ ಮಾಹಿತಿ ನೀಡಿದ್ದಾರೆ. ‘ಇದೊಂದು ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾ. ಈ ಕಥೆಯನ್ನು ಶ್ರುತಿ ಅವರಿಗೆ ಕಳೆದ ವರ್ಷವೇ ಹೇಳಿದ್ದೆ. ಕಥೆ ಕೇಳಿ ಥ್ರಿಲ್ ಆಗಿದ್ದ ಅವರು, ನಟಿಸುವುದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಅದಾದ ಬಳಿಕ ಐದಾರು ದಿನಗಳಲ್ಲಿ ಚಿತ್ರೀಕರಣವನ್ನೂ ಮಾಡಿ ಮುಗಿಸಿದ್ದೇವೆ’ ಎನ್ನುತ್ತಾರೆ ಸೊಹೇಲ್.
ಚಿತ್ರದಲ್ಲಿ ಮಾತು ಬಾರದ ಮಗನ ತಾಯಿಯಾಗಿ ಶ್ರುತಿ ಕಾಣಿಸಿಕೊಂಡಿದ್ದಾರೆ. ಬಹುತೇಕ ಚಿತ್ರೀಕರಣ ಕೇರಳದಲ್ಲಿಯೇ ನಡೆದಿದ್ದು, ಮಲಯಾಳಂ ಭಾಷೆಯಲ್ಲಿ ಸಿದ್ಧವಾಗಿದೆ. ಓಟಿಟಿ ವೇದಿಕೆಗೆಂದೇ ಈ ಕಿರುಚಿತ್ರ ತಯಾರಾಗಿದ್ದು, ಮಾತುಕತೆ ನಡೆಯುತ್ತಿದೆಯಂತೆ. ‘ಮಲಯಾಳಂ ಜತೆಗೆ ಕನ್ನಡ, ತೆಲುಗು, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿಯೂ ಈ ಕಿರುಚಿತ್ರವನ್ನು ಡಬ್ ಮಾಡಿ ಬಿಡುಗಡೆ ಮಾಡುವ ಪ್ಲಾನ್ ಇದೆ. ಅದಕ್ಕೂ ಮೊದಲು ಓಟಿಟಿ ವೇದಿಕೆಯನ್ನು ಫೈನಲ್ ಮಾಡಲಿದ್ದೇವೆ. ಮುಂದಿನ ಎರಡು ತಿಂಗಳಲ್ಲಿ ಎಲ್ಲವೂ ಅಂತಿಮವಾಗಲಿದೆ’ ಎನ್ನುತ್ತಾರೆ ಸೊಹೇಲ್.