ಒಂದು ರೂಪಾಯಿ ಅವ್ಯವಹಾರ ಸಾಬೀತು ಪಡಿಸಿದ್ರೆ ರಾಜೀನಾಮೆ; ಶ್ರೀರಾಮುಲು

Sriramulu
Published on

ಬೆಂಗಳೂರು: ಕೋವಿಡ್​ ನಿರ್ವಹಣೆಯಲ್ಲಿ ಒಂದು ರೂಪಾಯಿ ಕೂಡ ಅವ್ಯವಹಾರ ಆಗಿಲ್ಲ. ಇದನ್ನು ಸಾಬೀತು ಪಡಿಸಿದ್ರೆ ರಾಜೀನಾಮೆ ಕೊಡುವೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ವಿಪಕ್ಷಗಳಿಗೆ ಸವಾಲು ಹಾಕಿದ್ದಾರೆ.

ಪಿಪಿಇ ಕಿಟ್, ಹ್ಯಾಂಡ್ ಸ್ಯಾನಿಟೈಸರ್, ಮಾಸ್ಕ್, ಸರ್ಜಿಕಲ್ ಗ್ಲೌಸ್, ವೆಂಟಿಲೇಟರ್​ಗಳಿಗೆ ಒಟ್ಟಾರೆ ಈವರೆಗೆ ಖರ್ಚು ಮಾಡಿದ್ದೇ 79 ಕೋಟಿ ರೂಪಾಯಿ. ಹೀಗಿರುವಾಗ ನೂರಾರು ಕೋಟಿ ರೂ. ವ್ಯವಹಾರ ಎಲ್ಲಿಂದ ಬಂತು? ಎಂದು ಶ್ರೀರಾಮುಲು ಪ್ರಶ್ನಿಸಿದ್ದಾರೆ. ಕರೊನಾ ಕಷ್ಟಕಾಲದಲ್ಲಿ ಒಂದೇ ಒಂದು ಪೈಸೆ ದುರ್ಬಳಕೆ ಆಗಿದ್ದರೂ ದೇವರು ಶಿಕ್ಷಿಸುತ್ತಾನೆ ಎಂದಿದ್ದಾರೆ.

ಆರೋಗ್ಯ ಸಂರಕ್ಷಣೆ ಮತ್ತು ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ 1 ರೂ. ಅವ್ಯವಹಾರ ಸಾಬೀತು ಪಡಿಸಿದರೆ ಕೂಡಲೇ ರಾಜೀನಾಮೆ ಕೊಡುವೆ ಎಂದ ಬಿ. ಶ್ರೀರಾಮುಲು, ಅಧಿಕಾರ ಕಳೆದುಕೊಂಡ ಹತಾಶೆಯಲ್ಲಿ ಕಾಂಗ್ರೆಸ್​ನವರು ಮಹಾ ಸುಳ್ಳುಗಳ ಆರೋಪ ಹೊರಿಸಿದ್ದಾರೆ. ಪ್ರತಿಯೊಂದು ಖರೀದಿಯಲ್ಲಿ ಪಾರದರ್ಶಕತೆ ಇದೆ. ಕೇಂದ್ರ ಸರ್ಕಾರ ಸೂಚಿಸಿದ ಕಂಪನಿಗಳು ಅಥವಾ ಟೆಂಡರ್ ಮೂಲಕವೇ ವ್ಯವಹಾರ ನಡೆದಿದೆ ಎಂದು ಸಮರ್ಥಿಸಿಕೊಂಡರು.

ಕೋವಿಡ್​ ಸೋಂಕು ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸುತ್ತಲೇ ಇರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಕರೊನಾ ನಿಯಂತ್ರಣದ ಉದ್ದೇಶಕ್ಕಾಗಿ ಖರ್ಚು ಮಾಡಿದ ಹಣದ ಲೆಕ್ಕ ಕೊಡಿ ಎಂದು ಸಿಎಂ ಯಡಿಯೂರಪ್ಪ ಅವರನ್ನು ಆಗ್ರಹಿಸುತ್ತಲೇ ಇದ್ದಾರೆ. 'ಲೆಕ್ಕ ಕೇಳುವುದು ರಾಜ್ಯದ ಜನತೆಯ ಹಕ್ಕು, ಲೆಕ್ಕ ಕೊಡುವುದು ನಿಮ್ಮ ಕರ್ತವ್ಯ' ಎಂದು ಸಾಮಾಜಿಕ ಜಾಲತಾಣಗಳಲ್ಲಿ #LekkaKodi ಎಂಬ ಹ್ಯಾಷ್ ಟ್ಯಾಗ್‌ನೊಂದಿಗೆ ರಾಜ್ಯ ಸರ್ಕಾರದ ವಿರುದ್ಧ ವಿಡಿಯೋ ಅಭಿಯಾನ ಕೂಡ ಮಾಡಿದ್ದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೂಡ 'ಉತ್ತರ ಕೊಡಿ ಬಿಜೆಪಿ' ಎಂದು ಜಾಲತಾಣದಲ್ಲಿ ಅಭಿಯಾನ ಆರಂಭಿಸಿದ್ದಾರೆ.

ಈ ನಡುವೆ ಸಚಿವ ಶ್ರೀರಾಮುಲು, ಕರೊನಾ ಸಂಕಷ್ಟ ಕಾಲದಲ್ಲಿ ಒಂದು ರೂಪಾಯಿ ಅವ್ಯವಹಾರ ಸಾಬೀತು ಪಡಿಸಿದ್ರೆ ರಾಜೀನಾಮೆ ಕೊಡುವೆ ಎಂದು ಸವಾಲು ಹಾಕಿದ್ದಾರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net