ಉಪ ಕದನ ಗೆಲುವಿಗೆ ಗ್ಯಾರಂಟಿ ಶ್ರೀರಕ್ಷೆ

bosaraju
Published on

ಕೋಲಾರ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜನರನ್ನು ಸಂಕಷ್ಟದಿಂದ ಪಾರು ಮಾಡಿದೆ, ಇದರಿಂದ ಜನ ಸಹ ಸರ್ಕಾರದ ಮೇಲೆ ವಿಶ್ವಾಸವಿಟ್ಟಿದ್ದು, ಮೂರು ಕ್ಷೇತ್ರಗಳ ಉಪ ಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಗ್ಯಾರಂಟಿ ಯೋಜನೆಗಳು ಶ್ರೀರಕ್ಷೆಯಾಗಲಿವೆ ಎಂದು ಸಣ್ಣ ನೀರಾವರಿ ಇಲಾಖೆ ಸಚಿವ ಎನ್.ಎಸ್.ಬೋಸರಾಜು ಹೇಳಿದರು.

ನಗರದ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳಿಂದ ಸಾಕಷ್ಟು ಮಹಿಳೆಯರು ಜೀವನೋಪಾಯ ಚಟುವಟಿಕೆ ಕೈಗೊಂಡಿದ್ದು, ಈ ಮೂಲಕ ಸರ್ಕಾರ ಜನಮನ್ನಣೆ ಗಳಿಸಿದೆ ಎಂದು ತಿಳಿಸಿದರು.

ಸರ್ಕಾರದ ಸಾಧನೆ ಸಹಿಸಿಕೊಳ್ಳಲಾಗದ ಬಿಜೆಪಿ, ಜೆಡಿಎಸ್ ಮುಖಂಡರು ಸರ್ಕಾರದ ಮೇಲೆ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ಈಗ ದೋಸ್ತಿಗಳ ನಡುವೆ ಪೈಪೋಟಿ ಏರ್ಪಟ್ಟಿದ್ದು, ನಾಯಕರೇ ಇಲ್ಲದಂತಾಗಿದೆ ಎಂದರು.

ಬಿಜೆಪಿಗೆ ಅಭಿವೃದ್ಧಿ ಬೇಕಿಲ್ಲ

ಬಿಜೆಪಿಯ 8 ಶಾಸಕರು ಕಾಂಗ್ರೆಸ್‌ಗೆ ಹೋಗಲಿದ್ದಾರೆ ಎಂದು ಮಾಜಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿಕೆಗೆ ಪ್ರತಿಕ್ರಿಯಿಸಿ, ರಾಜ್ಯ, ದೇಶದಲ್ಲಿ ಆಪರೇಷನ್ ಹೆಸರಿನಲ್ಲಿ ಬಿಜೆಪಿಯು ರಾಜಕೀಯ ವ್ಯವಸ್ಥೆಯನ್ನು ಕೆಡಿಸಿದೆ. ಅವರಿಗೆ ಅಭಿವೃದ್ಧಿಗಿಂತ ಅಧಿಕಾರ ಮುಖ್ಯ. ಇದರಿಂದ ಬೇಸತ್ತಿರುವ ಶಾಸಕರು ಕಾಂಗ್ರೆಸ್‌ಗೆ ಬಂದರೆ ಸ್ವಾಗತಿಸುತ್ತೇವೆ ಎಂದು ಸಚಿವರು ಹೇಳಿದರು.

ಸಿಪಿವೈ ಗೆಲುವು ನಿಶ್ಚಿತ: ಸಿ.ಪಿ.ಯೋಗೇಶ್ವರ್ ಕಾಂಗ್ರೆಸ್‌ಗೆ ಬರುತ್ತಾರೆ ಎಂದು ನಿರೀಕ್ಷೆ ಮಾಡಿರಲಿಲ್ಲ, ಅವರು ಹಿಂದೆ ಕಾಂಗ್ರೆಸ್‌ನಲ್ಲಿದ್ದರು. ಈ ಬಾರಿ ಅವರು ಗೆಲುವು ಸಾಧಿಸುವುದು ಖಚಿತ ಎಂದ ಸಚಿವರು, ಕಾಂಗ್ರೆಸ್‌ನಲ್ಲಿ ಅಭ್ಯರ್ಥಿ ಇಲ್ಲ ಎಂದು ಯೋಗೇಶ್ವರ ಅವರನ್ನು ಬರಮಾಡಿಕೊಂಡಿಲ್ಲ, ಬಿಜೆಪಿಯಲ್ಲಿ ಆಗಿರುವ ಅನ್ಯಾಯದಿಂದ ಹೊರ ಬಂದಿದ್ದಾರೆ. ಕಾಂಗ್ರೆಸ್‌ನಿಂದ ಡಿ.ಕೆ.ಶಿವಕುಮಾರ್ ಸ್ಪರ್ಧೆ ಮಾಡುತ್ತಾರೆ ಎಂಬ ಮಾತುಗಳು ಕೇಳುತ್ತಿದ್ದಂತೆ ದೋಸ್ತಿ ಪಾಳಯದಲ್ಲಿ ತಳಮಳ ಶುರುವಾಗಿತ್ತು, ಈಗ ವಿಧಿಯಿಲ್ಲದೆ ನಿಖಿಲ್‌ಕುಮಾರಸ್ವಾಮಿಗೆ ಟಿಕೆಟ್ ಕೊಟ್ಟಿದ್ದಾರೆ ಎಂದು ವ್ಯಂಗ್ಯವಾಡಿದರು.

ವಾಲ್ಮೀಕಿ ನಿಮಗದ ಹಗರಣ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ, ರಾಜ್ಯ ಸರ್ಕಾರದಿಂದ ನಿಗಮಗಳಿಗೆ ಅನುದಾನ ಕಲ್ಪಿಸುತ್ತದೆ, ಅದನ್ನು ಬ್ಯಾಂಕ್‌ಗಳ ಮೂಲಕ ಫಲಾನುಭವಿಗಳಿಗೆ ಹಂಚಿಕೆ ಮಾಡುವುದು ಅಧಿಕಾರಿಗಳ ಜವಾಬ್ದಾರಿ. ಇದಕ್ಕೆ ರಾಷ್ಟ್ರೀಕೃತ ಬ್ಯಾಂಕ್ ಅಧಿಕಾರಿಗಳು ಕಾರಣವಾಗಿದ್ದು, ಕೇಂದ್ರ ಸರ್ಕಾರ ಕ್ರಮವಹಿಸಬೇಕು. ಬ್ಯಾಂಕ್‌ಗಳ ಮೇಲೆ ಕೇಂದ್ರ ಸರ್ಕಾರದ ಹಿಡಿತ ಇಲ್ಲದೇ ಇರುವುದರಿಂದ ಹಣ ದುರುಪಯೋಗ ಮಾಡಿಕೊಂಡಿದ್ದಾರೆ ಎಂದರು.

* ಸರ್ಕಾರದೊಂದಿಗೆ ಚರ್ಚಿಸಿ ಕ್ರಮ

ಕೋಲಾರ ಜಿಲ್ಲೆಯಲ್ಲಿ ನೀರಾವರಿ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯಸರ್ಕಾರ ೨೦೧೩ರಲ್ಲಿ ಕೆಸಿ ವ್ಯಾಲಿ ಯೋಜನೆ ಮೂಲಕ ಬೆಂಗಳೂರಿನ ತ್ಯಾಜ್ಯ ನೀರನ್ನು ೨ ಹಂತದಲ್ಲಿ ಶುದ್ಧೀಕರಿಸಿ ಕೆರೆಗಳಿಗೆ ಹರಿಸುತ್ತಿದೆ. ಮೂರನೇ ಹಂತದ ಶುದ್ಧೀಕರಣಕ್ಕೆ ಬೇಡಿಕೆಯಿದ್ದು, ಸರ್ಕಾರದ ಜತೆಗೆ ಚರ್ಚಿಸಿ ಕ್ರಮವಹಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net