ಶ್ರೀಕಂಠಶ್ರೀ ಅರಮನೆ ಪಂಚಗವಿ ಮಠ ಪೀಠಾಧ್ಯಕ್ಷ

20-kollegal-4,,,,,
ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಅರಮನೆ ಶ್ರೀ ಪಂಚಗವಿ ಮಠದ ಪೀಠಾಧಿಪತಿ ಶ್ರೀ ಗುರುಬಸವಲಿಂಗಸ್ವಾಮೀಜಿ ಅವರು ಶ್ರೀಕಂಠಸ್ವಾಮೀಜಿ ಅವರಿಗೆ ಮಠದ ಪೀಠಾಧಿಕಾರವನ್ನು ಹಸ್ತಾಂತರ ಮಾಡಿದರು. ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ,ಶ್ರೀ ಸಿದ್ಧಲಿಂಗ ಸ್ವಾಮೀಜಿ, ಶ್ರೀ ಚನ್ನಬಸವ ಸ್ವಾಮೀಜಿ ಇತರರಿದ್ದರು.
Published on

ಪೀಠಾಧಿಕಾರಿ ಹಸ್ತಾಂತರಿಸಿದ ಶ್ರೀ ಗುರುಬಸವಲಿಂಗ ಸ್ವಾಮೀಜಿ

ಕೊಳ್ಳೇಗಾಲ: ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಅರಮನೆ ಶ್ರೀ ಪಂಚಗವಿ ಮಠಕ್ಕೆ ಕೊಳ್ಳೇಗಾಲ ತಾಲೂಕಿನ ಮುಡಿಗುಂಡಂ ವಿರಕ್ತಮಠದ ಶ್ರೀ ಶ್ರೀಕಂಠ ಸ್ವಾಮೀಜಿ ಬುಧವಾರ ನೂತನ ಪೀಠಾಧಿಪತಿಯಾದರು.

ಈ ಹಿಂದೆ ಸೇವೆ ಮಾಡುತ್ತಿದ್ದ ಶ್ರೀಮಠದ ಪೀಠಾಧಿಪತಿ ಶ್ರೀ ಗುರುಬಸವಲಿಂಗಸ್ವಾಮೀಜಿ ವೈಯಕ್ತಿಕ ಕಾರಣಗಳಿಂದ ಪೀಠ ತ್ಯಾಗ ಮಾಡಿ ಕೊಳ್ಳೇಗಾಲ ತಾಲೂಕಿನ ಮುಡಿಗುಂಡಂ ವಿರಕ್ತಮಠದ ಶ್ರೀ ಶ್ರೀಕಂಠಸ್ವಾಮಿ ಅವರಿಗೆ ಪೀಠಾಧಿಕಾರವನ್ನು ಹಸ್ತಾಂತರ ಮಾಡಿದರು.

ಈ ವೇಳೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಪಂಚಗವಿ ಮಠದ ಶ್ರೀಗೌರಿಶಂಕರಸ್ವಾಮಿ ಅವರ ವಿದ್ವತ್ತು ಮತ್ತು ವೈರಾಗ್ಯವನ್ನು ಸ್ಮರಿಸಿ, ಅನೇಕ ಸಮಸ್ಯೆಗಳ ಆಗರವಾಗಿರುವ ಶ್ರೀಮಠವು ನೂತನ ಪೀಠಾಧಿಕಾರಿಗಳ ಕಾಲದಲ್ಲಿ ಅಭಿವೃದ್ಧಿ ಸಾಧಿಸಲಿ ಎಂದು ಆಶೀರ್ವದಿಸಿದರು.

ತುಮಕೂರಿನ ಸಿದ್ದಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ಸುತ್ತೂರು ಮತ್ತು ಸಿದ್ದಗಂಗಾ ಕ್ಷೇತ್ರಗಳು ಸಮಾಜದ ಎರಡು ಕಣ್ಣುಗಳು ಎಂದು ಗೌರಿಶಂಕರ ಸ್ವಾಮಿಗಳು ಹೇಳುತ್ತಿದ್ದ ಮಾತನ್ನು ಉಲ್ಲೇಖಿಸಿ ಪೂಜ್ಯರು ರಾಜೇಂದ್ರ ಶ್ರೀಗಳು ಮತ್ತು ಶ್ರೀ ಶಿವಕುಮಾರಸ್ವಾಮಿಗಳಿಗೆ ಮಾರ್ಗದರ್ಶಕರಾಗಿದ್ದರು. ಭವಿಷ್ಯದಲ್ಲಿ ಶ್ರೀಕಂಠಸ್ವಾಮಿಗಳು ಮಠವನ್ನು ಸರ್ವತೋಮುಖ ಅಭಿವೃದ್ಧಿಗೊಳಿಸಲಿ, ಅದಕ್ಕೆ ಭಕ್ತರ ಸಹಕಾರವಿರಲಿ ಎಂದು ಆಶೀರ್ವದಿಸಿದರು.

ಕ್ಷೇತ್ರದ ಶಾಸಕ ಟಿ.ಎಸ್.ಶ್ರೀವತ್ಸ ಶ್ರೀಮಠಕ್ಕೆ ಸಂಬಂಧಿಸಿದ ಸಮಸ್ಯೆಗಳ ಪರಿಹಾರಕ್ಕೆ ನೂತನ ಪೀಠಾಧಿಕಾರಿಗಳಿಗೆ ಎಲ್ಲ ರೀತಿಯಲ್ಲೂ ಸಹಕಾರ ನೀಡುವುದಾಗಿ ಹೇಳಿದರು.

ಕನಕಪುರ ದೇಗುಲಮಠದ ಶ್ರೀ ಚನ್ನಬಸವ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಮೈಸೂರಿನ ಶ್ರೀ ಕುಂದೂರು ಮಠ, ಶ್ರೀ ನೀಲಕಂಠಸ್ವಾಮಿ ಮಠ, ಸಾಲೂರು ಮಠ, ಬೆಟ್ಟದಪುರ ಮಠ, ಗಾವಡಗೆರೆ ಮಠ, ಹರವೆ ಮಠ ಇತ್ಯಾದಿ ಮೂವತ್ತಕ್ಕೂ ಹೆಚ್ಚು ಮಠಾಧಿಪತಿಗಳು ಭಾಗವಹಿಸಿದ್ದರು. ಮೈಸೂರಿನ ವಿವಿಧ ಸಂಘ-ಸಂಸ್ಥೆಗಳ ಮುಖಂಡರು, ಶ್ರೀೀಮಠದ ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net